ದೀದಿ ಧರಣಿಗೆ ಸಾಥ್​ ನೀಡಿದ್ದ ಪೊಲೀಸ್​ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಗೃಹ ಇಲಾಖೆ ಆದೇಶ

ನವದೆಹಲಿ: ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ವಿರೋಧಿಸಿ ಧರಣಿ ಕುಳಿತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪ್ರತಿಭಟನೆಯಲ್ಲಿ ಸಾಥ್​ ನೀಡಿದ ಐವರು ಐಪಿಎಸ್​ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶ ನೀಡಿದೆ.

ಅಲ್ಲದೆ, ಅಖಿಲ ಭಾರತೀಯ ಸೇವೆಯ ನಿಯಮಗಳ ಅನ್ವಯ ಪೊಲೀಸ್​ ಅಧಿಕಾರಿಗಳಿಗೆ ಅತ್ಯುತ್ತಮ ಸೇವೆ, ಕರ್ತವ್ಯಕ್ಕೆ ನೀಡಿದ್ದ ಪದಕಗಳನ್ನು ವಾಪಸ್​ ಪಡೆಯಲು ನಿರ್ಧರಿಸಿದೆ. ಹಾಗೇ ಕೆಲವು ಅವಧಿಯವರೆಗೆ ಕೇಂದ್ರ ಮಟ್ಟದಲ್ಲಿ ಸೇವೆ ಸಲ್ಲಿಸಲು ನಿರ್ಬಂಧ ವಹಿಸುವುದಾಗಿ ತಿಳಿಸಿದ್ದು, ಈ ಎಲ್ಲ ಅಧಿಕಾರಿಗಳ ಹೆಸರನ್ನೂ ಪಟ್ಟಿಯಿಂದ ತೆಗೆಯಲಾಗುವುದು ಎಂದಿದೆ.

ಅಧಿಕಾರಿಗಳಾದ ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ, ಹೆಚ್ಚುವರಿ ನಿರ್ದೇಶಕ ವಿನೀತ್​ ಕುಮಾರ್​ ಗೋಯಲ್​, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅನುಜ್​ ಶರ್ಮಾ, ಪೊಲೀಸ್​ ಆಯುಕ್ತ ಗ್ಯಾನ್ವಂತ್​ ಸಿಂಗ್​ ಮತ್ತು ಹೆಚ್ಚುವರಿ ಆಯುಕ್ತ ಸುಪ್ರಾತಿಮ್​ ಧರ್ಕಾರ್​ ಅವರು ಮಮತಾ ಬ್ಯಾನರ್ಜೀ ಅವರ ಜತೆ ಧರಣಿಗೆ ಕುಳಿತಿದ್ದರು. ಇವರೆಲ್ಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜಕೀಯ ನಿಲುವು ತಳೆದಿದ್ದಾರೆ. ತಟಸ್ಥರಾಗಿರಬೇಕಾಗಿತ್ತು ಎಂದು ಗೃಹ ಸಚಿವಾಲಯ ಹೇಳಿದೆ.

ಮಮತಾ ಬ್ಯಾನರ್ಜಿಯವರು ಧರಣಿಯ ಸ್ಥಳದಲ್ಲಿಯೇ ಹಲವು ಪೊಲೀಸ್​ ಅಧಿಕಾರಿಗಳಿಗೆ ಪದಕ ನೀಡಿದ್ದರು. ಪದಕ ಪುರಸ್ಕಾರ ಕಾರ್ಯಕ್ರಮ ಮೊದಲೇ ಆಯೋಜನೆಯಾಗಿತ್ತು. ಅನಿರೀಕ್ಷಿತವಾಗಿ ಫೆ.4ರಿಂದ ಧರಣಿ ಪ್ರಾರಂಭಿಸಿದ್ದರಿಂದ ಅದೇ ಸ್ಥಳದಲ್ಲಿ ಪೊಲೀಸರಿಗೆ ಪದಕ ಪುರಸ್ಕಾರ ಮಾಡಿದ್ದರು.