ಶೀಘ್ರದಲ್ಲಿಯೇ ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕಿಂಗ್‌ ಕಡ್ಡಾಯ: ರಾಮ್‌ ವಿಲಾಸ್‌ ಪಾಸ್ವಾನ್

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲ ಚಿನ್ನಾಭರಣಗಳಿಗೆ ಶೀಘ್ರದಲ್ಲಿಯೇ ಹಾಲ್‌ಮಾರ್ಕಿಂಗ್‌ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಚಿನ್ನಕ್ಕೆ ಹಾಲ್‌ ಮಾರ್ಕಿಂಗ್‌ ಹಾಕುವುದು ಅಮೂಲ್ಯ ಲೋಹದ ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ. ಹಾಲ್‌ಮಾರ್ಕಿಂಗ್‌ ನೀಡುವ ಭಾರತೀಯ ಮಾನಕ ಸಂಸ್ಥೆ(BIS)ಯು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಬಿಐಎಸ್ ಮೂರು ವಿಧದಲ್ಲಿ ಚಿನ್ನಾಭರಣಗಳಿಗೆ ಹಾಲ್‌ ಮಾರ್ಕಿಂಗ್‌ನ್ನು ನೀಡುತ್ತದೆ. ಅದರಲ್ಲಿ 14 ಕ್ಯಾರೆಟ್‌, 18 ಕ್ಯಾರೆಟ್‌ ಮತ್ತು 22 ಕ್ಯಾರೆಟ್ ಎಂದು ಹಾಲ್‌ ಮಾರ್ಕಿಂಗ್‌ ನೀಡಲಾಗುತ್ತದೆ.

ವಿಶ್ವ ಮಾಪನ ದಿನದ ಅಂಗವಾಗಿ ಬಿಐಎಸ್ ಆಯೋಜಿಸಿದ್ದ ಗ್ಲೋಬಲ್‌ ಸ್ಟಾಂಡರ್ಡ್ಸ್‌ ಮತ್ತು ನಾಲ್ಕನೇ ಕೈಗಾರಿಕ ಕ್ರಾಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗ್ರಾಹಕರ ಹಿತದೃಷ್ಟಿಯಿಂದ ಗುಣಮಟ್ಟ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕಿಂಗ್‌ ನೀಡುವುದನ್ನು ಶೀಘ್ರವೇ ಕಡ್ಡಾಯ ಮಾಡುತ್ತೇವೆ ಎಂದು ತಿಳಿಸಿದರು.

ಭಾರತದಲ್ಲಿ ಬಿಐಎಸ್‌ನಿಂದ ಮಾನ್ಯತೆಗೊಂಡಿರುವ 220 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಇವುಗಳಲ್ಲಿ ತಮಿಳುನಾಡಿನಲ್ಲೇ ಗರಿಷ್ಠ ಪ್ರಮಾಣದಲ್ಲಿದ್ದು, ಕೇರಳದಲ್ಲಿಯೂ ಜಾಸ್ತಿ ಕೇಂದ್ರಗಳಿವೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದಾಗಿ ಸ್ಮಾರ್ಟ್ ತಂತ್ರಜ್ಞಾನದಿಂದಾಗಿ ಹಾಲ್‌ ಮಾರ್ಕಿಂಗ್‌ನಲ್ಲಿ ದೇಶವು ಹಿಂದುಳಿದಿಲ್ಲ ಎಂಬುದನ್ನು ಖಾತ್ರಿಪಡಿಸಲು ಗುಣಮಟ್ಟವನ್ನು ನಿಗದಿಪಡಿಸುವ ಕಾರ್ಯಗಳನ್ನು ವೇಗಗೊಳಿಸುವುದು ಬಿಐಎಸ್‌ಗೆ ಸವಾಲಾಗಿದೆ ಎಂದು ಹೇಳಿದರು.

ಬಿಐಎಸ್‌ ಮತ್ತು ಸ್ಮಾರ್ಟ್‌ ತಯಾರಿಕೆಯಲ್ಲಿ ಪೂರ್ವ ಪ್ರಮಾಣೀಕರಣ ವರದಿಯನ್ನು ನೀಡುವ ವೆಬ್‌ಸೈಟ್‌ನ್ನು ಪಾಸ್ವಾನ್‌ ಬಿಡುಗಡೆ ಮಾಡಿದರು. (ಏಜೆನ್ಸೀಸ್)