ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಕ್ಸೊ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು

ನವದೆಹಲಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದು, ದೇಶದಲ್ಲಿ ಅಪ್ರಾಪ್ತರನ್ನು ರಕ್ಷಿಸುವ ಕಾನೂನನ್ನು ಕೇಂದ್ರ ಮತ್ತಷ್ಟು ಬಲಪಡಿಸಿದೆ.

ಮಕ್ಕಳ ಮೇಲೆ ಎಸಗುವ ದೌರ್ಜನ್ಯಗಳಲ್ಲಿ ತಪ್ಪಿತಸ್ಥರೆಂದು ತೀರ್ಮಾನವಾದ ಅಪರಾಧಿಗಳಿಗೆ ಮರಣ ದಂಡನೆಯನ್ನು ವಿಧಿಸಲು ಈ ತಿದ್ದುಪಡಿಯಲ್ಲಿ ಅವಕಾಶವಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ್​ ಪ್ರಸಾದ್​, ಇದು ಕೇಂದ್ರ ಸರ್ಕಾರದಿಂದ ತೆಗೆದುಕೊಂಡ ಉತ್ತಮ ನಿರ್ಧಾರವಾಗಿದೆ. ಪೊಕ್ಸೊ ಕಾಯಿದೆಯಲ್ಲಿ ಸರ್ಕಾರವು ದೂರದೃಷ್ಟಿಯುಳ್ಳ ತಿದ್ದುಪಡಿಯನ್ನು ತಂದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಪೊಕ್ಸೊವನ್ನು ಕೇವಲ ಬಲಪಡಿಸಲಾಗಿಲ್ಲ. ಬದಲಿಗೆ ಕಠಿಣ ಕ್ರಮಗಳ ಮೂಲಕ ವಿಸ್ತರಿಸಲಾಗಿದೆ. ಲೈಂಗಿಕ ವ್ಯಾಪಾರ ಮತ್ತು ಅಶ್ಲೀಲ ಉದ್ಯಮದಲ್ಲಿ ಮಕ್ಕಳಿಗೆ ಹಾರ್ಮೋನು ನೀಡುವ ಮೂಲಕ ಅವಧಿಪೂರ್ವ ಬೆಳವಣಿಗೆಗೆ ಕಾರಣವಾಗುವವರು ಇದ್ದಾರೆ. ಈ ರೀತಿ ಮಾಡುವುದು ಸೆಕ್ಷನ್‌ 9ರ ಅಡಿಯಲ್ಲಿ ಕೂಡ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದೆ. ಬಾಹ್ಯ ಉದ್ದೇಶಗಳಿಗಾಗಿ ಡ್ರಗ್ಸ್‌ನ್ನು ಬಳಸಿ ಮಗುವಿನ ಬಾಲ್ಯವನ್ನು ಕೊಲ್ಲಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೇಳಿದರು.

ಮಕ್ಕಳ ಮೇಲಿನ ಅಶ್ಲೀಲತೆಯ ಪ್ರಸರಣ ನಿಯಂತ್ರಿಸುವುದು ಕೂಡ ಈ ತಿದ್ದುಪಡಿಯ ಮತ್ತೊಂದು ಉದ್ದೇಶವಾಗಿದ್ದು, ವ್ಯಾಪಾರ ಅಥವಾ ಇತರೆ ಉದ್ದೇಶಗಳಿಗಾಗಿ ಅಂತಹ ಸರಕನ್ನು ಪಸರಿಸುವ ಯಾವುದೇ ವ್ಯಕ್ತಿಯಾದರೂ ಕಠಿಣ ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯಾಯಾಂಗ ಪ್ರಕ್ರಿಯೆಯ ಪ್ರತಿ ಹಂತದಲ್ಲಿ ಮಗುವಿನ ಹಿತಾಸಕ್ತಿಗಳನ್ನು ಕಾಪಾಡಲು ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯಿಂದ ಮಕ್ಕಳ ರಕ್ಷಣೆಗಾಗಿ ಬಲಿಷ್ಠ ಕಾನೂನು ಚೌಕಟ್ಟನ್ನು ಒದಗಿಸಲು ಪೊಕ್ಸೊ ಕಾಯಿದೆಯನ್ನು 2012ರಲ್ಲಿ ಜಾರಿಗೊಳಿಸಲಾಗಿದೆ. ಸದ್ಯ ಪೊಕ್ಸೊ ಕಾಯ್ದೆಯಲ್ಲಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಅಥವಾ 7 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಈಗ ಮರಣ ದಂಡನೆ ಶಿಕ್ಷೆ ವಿಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಡಗಳು ಕೇಳಿಬಂದಿದ್ದವು. ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ 12 ವರ್ಷಗಳ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದರೆ ಮರಣ ದಂಡನೆ ವಿಧಿಸುವ ಕಾನೂನಿಗೆ ಅನುಮೋದನೆ ನೀಡಿದ್ದವು. (ಏಜೆನ್ಸೀಸ್)