ಎ.ಎಸ್. ಓಕಾ ರಾಜ್ಯ ಹೈಕೋರ್ಟ್ ಸಿಜೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶಿಸಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಎ.ಎಸ್.ಓಕಾ ಅವರ ಹೆಸರನ್ನು ಕೇಂದ್ರ ಕಾನೂನು ಸಚಿವಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ಶಿಫಾರಸು ಮಾಡಿತ್ತು.

ಕೊಲಿಜಿಯಂ ಶಿಫಾರಸಿಗೆ ಒಪ್ಪಿಗೆ ಸೂಚಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಆದೇಶ ಹೊರಡಿಸಿದ್ದಾರೆ. ರಾಜ್ಯ ಹೈಕೋರ್ಟ್​ನ ಹಿಂದಿನ ಸಿಜೆ ದಿನೇಶ್ ಮಹೇಶ್ವರಿ ಕಳೆದ ಜ.15ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು. ನಂತರ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಂಗಾಮಿ ಸಿಜೆಯಾಗಿ ನೇಮಕಗೊಂಡಿದ್ದರು.

1960ರ ಮೇ 25ರಂದು ಜನಿಸಿದ ಎ.ಎಸ್. ಓಕಾ, ಬಾಂಬೆ ಯೂನಿವರ್ಸಿಟಿಯಲ್ಲಿ ಕಾನೂನು ಹಾಗೂ ಎಲ್​ಎಲ್​ಎಂ ಪದವಿ ಪಡೆದಿದ್ದಾರೆ. 1983ರಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರು, ತಂದೆ ಶ್ರೀನಿವಾಸ ಓಕಾ ಬಳಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 2003ರಲ್ಲಿ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದ ಅವರು 2005ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.