ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ

ಥಾಣೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಇರುವ ತೊಡಕುಗಳನ್ನು ಕೇಂದ್ರ ಸರ್ಕಾರ ಕಾನೂನು ಜಾರಿಯ ಮೂಲಕ ನಿವಾರಿಸಿ, ಮಂದಿರ ನಿರ್ಮಾಣ ಕಾರ್ಯವನ್ನು ಸುಗಮಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಮಂಗಳವಾರ ಆಗ್ರಹಿಸಿದೆ.

ಈ ಕುರಿತು ಥಾಣೆಯಲ್ಲಿ ಮಾತನಾಡಿರುವ ಆರ್​ಎಸ್​ಎಸ್​ನ ರಾಷ್ಟ್ರೀಯ ಪ್ರಚಾರ ಪ್ರಮುಖ್​ ಅರುಣ್​ಕುಮಾರ್​, “ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಅಥವಾ ಕೇಂದ್ರ ಸರ್ಕಾರ ಕಾನೂನನ್ನು ಜಾರಿಗೆ ತರಬೇಕು,” ಎಂದು ಆಗ್ರಹಿಸಿದ್ದಾರೆ.

“ಆಯೋಧ್ಯೆಯಲ್ಲಿ ರಾಮ ಮಂದಿರ ಇದ್ದದ್ದನ್ನು ಹೈಕೋರ್ಟ್​ ಈಗಾಗಲೇ ಒಪ್ಪಿಕೊಂಡಿದೆ. ಲಭ್ಯ ಸಾಕ್ಷ್ಯಾಧಾರಗಳೂ ಕೂಡ ಆ ಜಾಗದಲ್ಲಿ ಮಂದಿರ ಇದ್ದುದ್ದಾಗಿಯೂ, ಅದನ್ನು ಕೆಡವಿ ಬೇರೆ ಕಟ್ಟಡ ಕಟ್ಟಿರುವುದಾಗಿಯೂ ಹೇಳುತ್ತಿವೆ. ಆ ಸ್ಥಳದಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಬೇಕು ಮತ್ತು ಅದಕ್ಕಾಗಿ ಸ್ಥಳ ನೀಡಬೇಕು ಎಂಬುದು ಆರ್​ಎಸ್ಎಸ್​ನ ಅಭಿಪ್ರಾಯವಾಗಿದೆ,” ಎಂದು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದಿಂದಾಗಿ ದೇಶದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣವಾಗಲಿದೆ ಎಂದು ಅರುಣ್​ಕುಮಾರ್​ ಹೇಳಿಕೊಂಡಿದ್ದಾರೆ. ” ರಾಮ ಮಂದಿರವನ್ನು ನಿರ್ಮಿಸಿದರೆ ಸಮಾಜದಲ್ಲಿ ಸೌಹಾರ್ದ ಹಾಗೂ ಐಕಮತ್ಯ ಮೂಡಲಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್​ ಆದಷ್ಟು ಬೇಗ ವಿವಾದವನ್ನು ಕೈಗೆತ್ತಿಕೊಳ್ಳಬೇಕು. ಹಾಗಾಗದಿದ್ದಲ್ಲಿ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದು ಎಲ್ಲ ತೊಡಕುಗಳನ್ನೂ ನಿವಾರಿಸಿ, ಮಂದಿರ ನಿರ್ಮಿಸಲು ಹಾದಿ ಸುಗಮ ಮಾಡಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದದ ವಾದ ವಿವಾದವನ್ನು ಸೋಮವಾರ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್​, ಮುಂದಿನ ವರ್ಷ ಜನವರಿಯಿಂದ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ವಿಚಾರಣೆ ಮುಂದಿನ ವರ್ಷಕ್ಕೆ ಹೋದ ಹಿನ್ನೆಲೆಯಲ್ಲಿ, ಸುಗ್ರೀವಾಜ್ಞೆ ಜಾರಿಗೆ ತಂದು ಮಂದಿರ ನಿರ್ಮಾಣ ಮಾಡಬೇಕು ಎಂಬ ಕೂಗು ದೇಶಾದ್ಯಂತ ಬಲಗೊಳ್ಳುತ್ತಿದೆ. ಈಗಾಗಲೇ ಹಲವು ಹಿಂದು ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಅದರ ಭಾಗವಾಗಿಯೇ ಆರ್​ಎಸ್​ಎಸ್​ನ ಅರುಣ್​ ಕುಮಾರ್​ ಅವರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.