ಅಗ್ಗವಾಗಲಿದೆ ಕ್ಯಾನ್ಸರ್ ಔಷಧ

ನವದೆಹಲಿ: ಕ್ಯಾನ್ಸರ್ ಹಾಗೂ ಇತರ ಅಪರೂಪದ ಕಾಯಿಲೆಗಳ ಔಷಧ ದರವನ್ನು ಶೇ.25-30ರವರೆಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅನುಸೂಚಿತ ಔಷಧ ಪಟ್ಟಿಯಲ್ಲಿರದ 50 ಔಷಧಗಳ ದರ ಇಳಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಆರೋಗ್ಯ ಸಚಿವಾಲಯ ಔಷಧಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು ಶೀಘ್ರವೇ ಆದೇಶ ಹೊರಬೀಳುವ ಸಾಧ್ಯತೆಯಿದೆ. ಪಟ್ಟಿಯಲ್ಲಿರುವ ಔಷಧಗಳ ಪೈಕಿ 39 ಕ್ಯಾನ್ಸರ್​ಗೆ ಸಂಬಂಧಿಸಿದ್ದಾದರೆ ಉಳಿದ 11 ಔಷಧಗಳು ಇತರ ಅಪರೂಪದ ಕಾಯಿಲೆಗೆ ಪರಿಹಾರವಾಗಿವೆ. ಹಾಲಿ ನಿಯಮಗಳ ಪ್ರಕಾರ ಈ ಔಷಧಗಳು ಅನುಸೂಚಿತ ಪಟ್ಟಿಯಲ್ಲಿರದ ಹಿನ್ನೆಲೆಯಲ್ಲಿ ದರ ನಿಯಂತ್ರಣ ಸಾಧ್ಯವಿಲ್ಲ. ಅನುಸೂಚಿತ ಪಟ್ಟಿಯಲ್ಲಿದ್ದರೆ ಮಾರಾಟಗಾರರರು ಶೇ.8ರಿಂದ 16ರವರೆಗೆ ಮಾತ್ರ ಲಾಭಾಂಶ ಇರಿಸಿಕೊಳ್ಳಬಹುದಾಗಿದೆ.