ಹೊಸ ಬಾಡಿಗೆ ನೀತಿ ಸಿದ್ಧ: ವಿವಾದ ಇತ್ಯರ್ಥಕ್ಕೆ ರೆಂಟ್ ಕೋರ್ಟ್, ನ್ಯಾಯಾಧಿಕರಣ ರಚನೆ

ನವದೆಹಲಿ: ಮನೆ ಮಾಲೀಕರು ಮತ್ತು ಬಾಡಿಗೆದಾರರ ಸಮಸ್ಯೆ ಗಳನ್ನು ಹೋಗಲಾಡಿಸಲು ನೂತನ ಕರಡು ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ಧ ಪಡಿಸಿದೆ. ಮಾಲೀಕರು ಪಡೆಯುವ ಅಡ್ವಾನ್ಸ್​ಗೆ (ಭದ್ರತಾ ಠೇವಣಿ) ಮಿತಿ ಮತ್ತು ನಿಗದಿತ ಅವಧಿಯಲ್ಲಿ ಮನೆ ಖಾಲಿ ಮಾಡದ ಬಾಡಿಗೆದಾರರಿಗೆ ದಂಡ ವಿಧಿಸುವ ಪ್ರಸ್ತಾಪ ಇದರಲ್ಲಿದೆ.

ಬಾಡಿಗೆದಾರರು ಮತ್ತು ಮನೆ ಮಾಲೀಕರ ತಕರಾರು ಇತ್ಯರ್ಥಕ್ಕೆ ರಾಜ್ಯ ಸರ್ಕಾರಗಳು ‘ರೆಂಟ್ ಕೋರ್ಟ್ ಮತ್ತು ರೆಂಟ್ ನ್ಯಾಯಾಧಿಕರಣ’ ರಚಿಸಬೇಕು. ಬಾಡಿಗೆ ಮೊತ್ತ ಮತ್ತು ಅವಧಿ, ಬಾಡಿಗೆ ಒಪ್ಪಂದ ಕುರಿತು ನಿಗಾವಣೆಗೆ ಪ್ರಾಧಿಕಾರ ರಚನೆ ಮಾಡಬೇಕು ಎಂಬ ಅಂಶವೂ ಇದೆ.

2022ರ ಹೊತ್ತಿಗೆ ಎಲ್ಲರಿಗೂ ವಸತಿ ಕಲ್ಪಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಮನೆ ಬಾಡಿಗೆ ಕರಡು ಮಸೂದೆಯಲ್ಲಿ ಕೆಲವು ಉತ್ತೇಜನ ಕ್ರಮಗಳನ್ನೂ ಪ್ರಸ್ತಾಪಿಸಿದೆ. ಕೇಂದ್ರ ಕಾನೂನು ರಚಿಸಿದರೂ ಅನುಷ್ಠಾನದ ಜವಾಬ್ದಾರಿ ರಾಜ್ಯ ಸರ್ಕಾರ ಮೇಲೆ ಇರುವುದರಿಂದ ಈ ಕರಡನ್ನು ಇನ್ನಷ್ಟು ಸುಧಾರಿಸಿ ಜಾರಿ ಮಾಡುವ ಅವಕಾಶ ರಾಜ್ಯ ಸರ್ಕಾರಗಳಿಗೆ ಇದೆ.

ಬಾಡಿಗೆದಾರರು ಮತ್ತು ಮಾಲೀಕರ ಮಧ್ಯೆ ಸಮಸ್ಯೆಗಳು ಜಟಿಲವಾಗುತ್ತಿವೆ. ಒಂದೆಡೆ ಮಾಲೀಕರು ವಿಪರೀತ ಬಾಡಿಗೆ ಮತ್ತು ನೂರೆಂಟು ಷರತ್ತುಗಳನ್ನು ಹಾಕುತ್ತಾರೆ. ವಿದ್ಯುತ್, ನೀರು ಸಂಪರ್ಕ ಸ್ಥಗಿತಗೊಳಿಸಿ ಕಿರುಕುಳ ನೀಡುತ್ತಾರೆ. ಇನ್ನೊಂದೆಡೆ ಬಾಡಿಗೆದಾರರು ಸರಿಯಾಗಿ ಬಾಡಿಗೆ ಪಾವತಿಸುವುದಿಲ್ಲ, ಸ್ವತ್ತನ್ನು ಇನ್ನೊಬ್ಬರಿಗೆ ಸಬ್ ಲೀಸ್ (ಮರು ಬಾಡಿಗೆಗೆ ನೀಡುವುದು), ಸ್ವತ್ತಿಗೆ ಹಾನಿ ಮಾಡುವುದು, ನಿಗದಿತ ಸಮಯದಲ್ಲಿ ಮನೆ ಖಾಲಿ ಮಾಡದೆ ಕೋರ್ಟ್​ಗೆ ಅಲೆದಾಡಿಸಿ ಮಾಲೀಕರಿಗೆ ತೊಂದರೆ ಕೊಡುವ ಪ್ರವೃತ್ತಿಯೂ ಇದೆ. ಬಾಡಿಗೆ ನೀಡಿದರೆ ಸ್ವತ್ತು ಕೈತಪು್ಪತ್ತದೆ ಎಂಬ ಭೀತಿಯಿಂದ ನಗರ ಪ್ರದೇಶಗಳಲ್ಲಿ 1.10 ಕೋಟಿ ಸ್ವತ್ತುಗಳು ಖಾಲಿ ಉಳಿದಿವೆ. ಇಂತಹ ಸಮಸ್ಯೆಗಳಿಗೆ ಕರಡು ಮಸೂದೆಯಲ್ಲಿ ಪರಿಹಾರ ಸೂಚಿಸಲಾಗಿದೆ.

ಬಜೆಟ್​ನಲ್ಲಿ ಘೋಷಣೆ

ಮನೆ ಬಾಡಿಗೆ ಕಾನೂನು ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಘೋಷಿಸಿದ್ದರು. ಪ್ರಸ್ತುತ ಚಾಲ್ತಿಯಲ್ಲಿರುವ ಬಾಡಿಗೆ ಕಾಯ್ದೆ ಹಳೆಯದ್ದಾಗಿದ್ದು, ಮಾಲೀಕರು ಮತ್ತು ಬಾಡಿಗೆದಾರರ ವ್ಯಾವಹಾರಿಕ ಸಂಬಂಧವನ್ನು ಸ್ಪಷ್ಟವಾಗಿ ಅರ್ಥೈಸುವುದಿಲ್ಲ. ಆದ್ದರಿಂದ ಮಾದರಿ ಕಾನೂನು ಅಗತ್ಯ ಎಂದು ಅವರು ಹೇಳಿದ್ದರು.

ಕರಡು ನೀತಿ ಮುಖ್ಯಾಂಶ

  • ಮಹಾನಗರಗಳಲ್ಲಿ ನಾಲ್ಕರಿಂದ ಐದು ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯಲಾಗುತ್ತದೆ. ಎರಡು ತಿಂಗಳ ಬಾಡಿಯನ್ನಷ್ಟೆ ಭದ್ರತಾ ಠೇವಣಿಯಾಗಿ ಪಡೆಯಬೇಕು
  • ಕರಾರು ಅವಧಿ ಮೀರಿದರೂ ಅಥವಾ ಮುಂಚಿತವಾಗಿ ಸೂಚಿಸಿದ್ದರೂ ಮನೆ ಖಾಲಿ ಮಾಡದಿದ್ದರೆ ಮೊದಲೆರಡು ತಿಂಗಳು ದುಪ್ಪಟ್ಟು ಬಾಡಿಗೆ ಪಾವತಿಸ ಬೇಕು. ನಂತರದಲ್ಲೂ ಖಾಲಿ ಮಾಡಿದ್ದರೆ ಬಾಡಿಗೆ ಮೊತ್ತದ 4ಪಟ್ಟು ನೀಡಬೇಕು.
  • ಬಾಡಿಗೆದಾರರು ಸತತ ಎರಡು ತಿಂಗಳು ಬಾಡಿಗೆ ಪಾವತಿ ಮಾಡದಿದ್ದರೆ ಮಾಲೀಕರು ರೆಂಟ್ ಕೋರ್ಟ್ ಮೊರೆ ಹೋಗಬಹುದು. ಮಾಲೀಕರು ಕೋರ್ಟ್​ಗೆ ಹೋದ ನಂತರ ಬಾಡಿಗೆ ಪಾವತಿಸಿದರೆ ಅಂಥವರಿಗೆ ಅದೇ ಮನೆಯಲ್ಲಿ ಮುಂದುವರಿಯಲು ಅವಕಾಶ. ಆದರೆ, ವರ್ಷಾ ನುಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡು ನಂತರ ಪಾವತಿಸಿದವರಿಗೆ ಈ ಅವಕಾಶ ಇಲ್ಲ.
  • ಬಾಡಿಗೆ ಕರಾರಿನಲ್ಲಿ ಉಲ್ಲೇಖಿಸಲಾದ ಸೌಲಭ್ಯ ಮತ್ತು ದೊಡ್ಡ ಪ್ರಮಾಣ ದುರಸ್ತಿ ಕಾರ್ಯವನ್ನು ಮಾಡಿಕೊಡಲು ಮಾಲೀಕರು ನಿರಾಕರಿಸಿದರೆ ಮತ್ತು ಇಂಥ ಕೆಲಸವನ್ನು ಬಾಡಿಗೆದಾರರು ಮಾಡಿಸಿಕೊಂಡು ಬಾಡಿಗೆ ಮೊತ್ತದಲ್ಲಿ ಖರ್ಚಾದ ಮೊತ್ತವನ್ನು ಹಿಡಿದುಕೊಳ್ಳಬಹುದು.
  • ಬಾಡಿಗೆದಾರರು ಮನೆಗೆ ಏನಾದರೂ ಹಾನಿ ಮಾಡಿದ್ದರೆ ಅದಕ್ಕೆ ತಗುಲುವ ವೆಚ್ಚವನ್ನು ಮಾಲೀಕರು ಅಡ್ವಾನ್ಸ್​ನಲ್ಲಿ ಮುರಿದುಕೊಳ್ಳಬಹುದು.
  • ಮಾಲೀಕರು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ 15 ದಿನದೊಳಗೆ ಮನೆ ಖಾಲಿ ಮಾಡಬೇಕು.

Leave a Reply

Your email address will not be published. Required fields are marked *