ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಣೆ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ ಕೇಂದ್ರ

ನವದೆಹಲಿ: ದೇಶದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ “ಸರ್ಜಿಕಲ್​ ಸ್ಟ್ರೈಕ್​ ದಿನ” ಆಚರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಚರಣೆ ಕಡ್ಡಾಯವೇನಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಎರಡು ವರ್ಷಗಳ ಹಿಂದೆ, 2016ರ ಸೆ. 29ರಂದು ಭಾರತೀಯ ಸೇನೆ, ಪಾಕ್​ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರಗಾಮಿಗಳ ಏಳು ಅಡಗುತಾಣಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿ ಧ್ವಂಸಗೊಳಿಸಿತ್ತು. ಈ ದಿನವನ್ನು “ಸರ್ಜಿಕಲ್​ ಸ್ಟ್ರೈಕ್​ ಡೇ” ಎಂದು ಆಚರಿಸಬೇಕಾಗಿ ಯುಜಿಸಿ (ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ) ಇತ್ತೀಚೆಗೆ ವಿಶ್ವವಿದ್ಯಾಲಗಳು ಮತ್ತು ಅದರ ವ್ಯಾಪ್ತಿಯ ಕಾಲೇಜುಗಳಿಗೆ ಆದೇಶಿಸಿತ್ತು. ಇದರ ವಿರುದ್ಧ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ವಿವಾದ ತಾರಕಕ್ಕೇರುತ್ತಿರುತ್ತಿರುವುದನ್ನು ಅರಿತ ಕೇಂದ್ರ ಸರ್ಕಾರ, ” ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಿಸಬೇಕು ಎಂಬುದು ಕೇವಲ ಸಲಹೆಯಷ್ಟೇ. ಕಡ್ಡಾಯವೇನಲ್ಲ,” ಎಂದು ತಿಳಿಸಿದೆ.

” ಸೆ.29ರಂದು ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಿಸಲೇಬೇಕು ಎಂದು ಯಾವುದೇ ಕಾಲೇಜು, ವಿದ್ಯಾರ್ಥಿಗಳಿಗೆ ನಾವು ತಿಳಿಸಿಲ್ಲ. ಹಲವು ವಿದ್ಯಾರ್ಥಿಗಳು, ಶಿಕ್ಷಕರು ಇಂಥದ್ದೊಂದು ಆಚರಣೆಗೆ ಮನವಿ ಮಾಡಿಕೊಂಡಿದ್ದರು. ಆ ಕಾರಣಕ್ಕೆ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದೆವು,” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಕಾಶ್​ ಜಾವಡೇಕರ್​ ತಿಳಿಸಿದ್ದಾರೆ.

ಇನ್ನೂ ಈ ಆಚರಣೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷಗಳ ಹಲವು ನಾಯಕರು ಇದರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಆಚರಣೆ ಬಿಜೆಪಿ ಅಜೆಂಡಾ

ಪಶ್ಚಿಮ ಬಂಗಾಳದಲ್ಲಂತೂ ಈ ದಿನವನ್ನು ಆಚರಣೆಯೇ ಮಾಡಲಾಗದು ಎಂದು ಅಲ್ಲಿನ ಸಚಿವ ಪಾರ್ಥ ಚಟರ್ಜಿ ಸ್ಪಷ್ಟಪಡಿಸಿದ್ದಾರೆ.
” ಸರ್ಜಿಕಲ್​ ಸ್ಟ್ರೈಕ್ ಎಂಬುದು ರಾಜಕೀಯ ಪಕ್ಷ ಬಿಜೆಪಿಯ ಅಜೆಂಡಾ. ಈ ದಿನವನ್ನು ಪಶ್ಚಿಮ ಬಂಗಾಳದ ಯಾವುದೇ ವಿಶ್ವವಿದ್ಯಾಲಯಗಳಲ್ಲಾಗಲಿ, ಕಾಲೇಜುಗಳಲ್ಲಾಗಲಿ ಆಚರಿಸಲಾಗದು,” ಎಂದು ಘೋಷಿಸಿದ್ದಾರೆ.

ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​, ” ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಿಸುವ ಮೂಲಕ ಬಿಜೆಪಿಯು ನರೇಂದ್ರ ಮೋದಿ ಅವರ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ,” ಎಂದು ಟೀಕಿಸಿದ್ದಾರೆ.

ಕೇಜ್ರಿವಾಲ್ ಸಲಹೆ
ಇದೇ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರಕ್ಕೆ ಸಲಹೆಯೊಂದನ್ನು ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​, ” ಸರ್ಜಿಕಲ್​ ಸ್ಟ್ರೈಕ್​ ಅನ್ನು ಆಚರಿಸುವ ವಿಧಾನ ಇದಲ್ಲ. ಇತ್ತೀಚೆಗೆ ಪಾಕಿಸ್ತಾನದ ಉಗ್ರರಿಂದ ಚಿತ್ರ ಹಿಂಸೆ ಅನುಭವಿಸಿ ಮೃತಪಟ್ಟ ಸೈನಿಕ ನರೇಂದ್ರ ಸಿಂಗ್​ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ದಿನಾಚರಣೆ ಮಾಡಲಿ. ಅಲ್ಲದೆ, ಇಂಥ ಕೃತ್ಯಗಳನ್ನು ನಡೆಸುವ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಿ, ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಮಾಡಬೇಕು. ಅಂಥದ್ದೊಂದು ಭರವಸೆಯ ಮೂಲಕ ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಿಸಲಿ,” ಎಂದು ಅವರು ತಿಳಿಸಿದ್ದಾರೆ.