ಕಿರುಸಾಲ ಕಡಿವಾಣಕ್ಕೆ ಸುಗ್ರೀವಾಜ್ಞೆ; ವಿಜಯವಾಣಿ ಸರಣಿ ವರದಿಗೆ ಸರ್ಕಾರ ಸ್ಪಂದನೆ

Micro Finance

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿ ಕಿರುಕುಳಕ್ಕೆ ತತ್ತರಿಸಿದವರ ಅಳಲಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಇಂಥ ಸಂಸ್ಥೆಗಳಿಂದ ಸಾಲ ಪಡೆದವರ ಹಿತರಕ್ಷಣೆ, ಕಿರುಸಾಲ ನೀಡುವ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಠಿಣ ಕಾನೂನನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪ್ರಕಟಿಸಿದರು. ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಚಾಟಿ ಬೀಸಿರುವ ಸರ್ಕಾರ, ಸಾಲ ಪಡೆದವರಲ್ಲೂ ಆತ್ಮ ಸ್ಥೈರ್ಯ ತುಂಬಿದೆ. ಜತೆಗೆ, ನಿಯಮಬದ್ಧ ವ್ಯವಹಾರ ನಡೆಸಲು ನಿರ್ಬಂಧವಿಲ್ಲ. ನಿಗದಿತ ಬಡ್ಡಿ, ಸಾಲ ವಸೂಲಿ ನಿಲ್ಲಿಸಲು ಸೂಚಿಸುವುದಿಲ್ಲವೆಂದೂ ಅಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಅಭಯ ನೀಡಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಬಲವಂತದ ಸಾಲ ವಸೂಲಿ, ನೊಂದವರ ವೇದನೆ, ಆತ್ಮಹತ್ಯೆ ಘಟನೆಗಳ ಕುರಿತು ‘ವಿಜಯವಾಣಿ’ ಸರಣಿ ವರದಿಗಳ ಮೂಲಕ ಬೆಳಕು ಚೆಲ್ಲಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತದರ ಪರಿಣಾಮ ಕುರಿತು ಸಿಎಂ ಗೃಹ ಕಚೇರಿ ’ಕೃಷ್ಣಾ’ದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಎರಡು ಪ್ರತ್ಯೇಕ ಜಂಟಿ ಸಭೆಗಳು ಶನಿವಾರ ನಡೆದವು.

ಅನಧಿಕೃತ ಕಂಪನಿಗಳದೇ ಸಮಸ್ಯೆ: ಸಾಲಗಾರರ ಹಿತರಕ್ಷಣೆ, ಮೈಕ್ರೋ ಫೈನಾನ್ಸ್ ಕಂಪನಿಗಳು, ಅನಧಿಕೃತ ಲೇವಾದೇವಿಗಾರರ ಮೇಲೆ ನಿಯಂತ್ರಣವಿಡಲು ಹೊಸ ಕಠಿಣ ಕಾಯ್ದೆಯನ್ನು ಕೂಡಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ತಿಳಿಸಿದರು. ಕಂಪನಿಗಳಿಗೆ ಸರ್ಕಾರದ ನಿಲುವು ತಿಳಿಸಿ, ಆರ್​ಬಿಐ ಮಾರ್ಗಸೂಚಿ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸಾಲ ಕೊಡುವುದು, ವಸೂಲಿ ಮಾಡುವುದು ಸರಿ. ಆದರೆ ಕಿರುಕುಳ, ಬಲವಂತ ಸಹಿಸಲ್ಲ. ಹೆಚ್ಚಿನ ಬಡ್ಡಿ ವಸೂಲಿಗೂ ಅವಕಾಶವಿಲ್ಲ. ಈ ವಿಚಾರದಲ್ಲಿ ಅನಧಿಕೃತ ಕಂಪನಿಗಳದ್ದೇ ಸಮಸ್ಯೆಯಾಗಿದ್ದು, ಪ್ರಕರಣಗಳು ಗಮನಕ್ಕೆ ಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು. ಆರ್​ಬಿಐ ನಿಯಮದ ಪ್ರಕಾರ ಒಂದು ಕುಟುಂಬಕ್ಕೆ 20 ಸಾವಿರ ರೂ. ಗಳವರೆಗೆ ಸಾಲ ನೀಡಲು, ಶೇ.17.07ರಷ್ಟು ಬಡ್ಡಿ ವಿಧಿಸಲು ಅವಕಾಶವಿದೆ. ಆದರೆ ಅನಧಿಕೃತ ಸಂಸ್ಥೆಗಳು ಮಿತಿಮೀರಿದ ಸಾಲ ನೀಡಿದ್ದು, ಒಬ್ಬರಿಗೆ ಬೇರೆ ಬೇರೆ ಕಂಪನಿಗಳಿಂದ ಸಾಲ, ಶೇ.24 ರಿಂದ 28ರಷ್ಟು ಬಡ್ಡಿ ವಸೂಲಿ ಮಾಡಿದ ದೂರುಗಳು ಬಂದಿವೆ ಎಂದರು.

ಸಾಲ ವ್ಯವಹಾರ ನಿಲ್ಲಿಸುವುದಿಲ್ಲ: ನೋಂದಾಯಿತ, ಅಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಕೊಡುವುದು ಇಲ್ಲವೇ ವಸೂಲಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಎಲ್ಲರೂ ಬ್ಯಾಂಕ್​ಗಳಿಗೆ ಹೋಗಿ ಸಾಲ ಪಡೆಯಲಾಗದು, ಪರ್ಯಾಯ ಆರ್ಥಿಕತೆ ರೂಪದಲ್ಲಿ ಅಧಿಕೃತ ಸಾಲ ವ್ಯವಸ್ಥೆ ಅನುಕೂಲಕರವಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್​ಬಿಐ ನಿಯಮಗಳಂತೆ ಸಾಲ ನೀಡಿ, ಬಡ್ಡಿ ದರ ವಿಧಿಸಬೇಕು. ನಿಯಮದ ಪ್ರಕಾರ ಉದಾಹರಣೆಗೆ ಒಬ್ಬರಿಗೆ ನಾಲ್ಕು ಸಾವಿರ ರೂ. ಸಾಲ ನೀಡಿದ್ದರೆ ಬಡ್ಡಿ ಮೊತ್ತ ಎರಡು ಸಾವಿರ ರೂ. ಮೀರುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಒತ್ತಾಯ: ಅನಧಿಕೃತ ಲೇವಾದೇವಿ ಚಟುವಟಿಕೆಗಳ ನಿಷೇಧ ಕುರಿತು ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಕೂಡಲೇ ಹೊಸ ಕಾಯ್ದೆ ಜಾರಿಗೆ ತರಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು. ರಾಜ್ಯದಲ್ಲಿ ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿ ಉಪಟಳ, ಮೂರನೇ ವ್ಯಕ್ತಿಗಳ ಬಳಕೆ, ದಬ್ಬಾಳಿಕೆ, ಆತ್ಮಹತ್ಯೆ, ಊರು ತೊರೆದವರು, ಬಡವರು, ಕೆಳ ಮಧ್ಯಮವರ್ಗದ ಜನರು ಇಂತಹ ಸಂಕಷ್ಟದ ಸುಳಿಗೆ ಸಿಲುಕಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಆಧರೆ, ಬಂಡವಾಳಶಾಹಿಗಳು, ಉಳ್ಳವರಿಗೆ ಬ್ಯಾಂಕ್​ಗಳಿಂದ ಶೇ.3-4ರ ಬಡ್ಡಿ ದರದಲ್ಲಿ ಸಾಲ ಸುಲಭವಾಗಿ ಸಿಗಲಿದ್ದು, ಸಕಾಲಕ್ಕೆ ಪಾವತಿಸದಿದ್ದರೆ ರೈಟ್ ಆಫ್ ಹೆಸರಿನಲ್ಲಿ ಮನ್ನಾ ಮಾಡಲಾಗುತ್ತಿದೆ ಎಂದೂ ಸಿಎಂ ಹೇಳಿದರು.

31 ಕಂಪನಿಗಳಷ್ಟೇ ಅಧಿಕೃತ: ರಾಜ್ಯದಲ್ಲಿ ನೋಂದಾಯಿತ ಮೈಕ್ರೋ ಫೈನಾನ್ಸ್ ಕಂಪನಿಗಳು- 31, ಶಾಖೆಗಳು- 3090, ಖಾತೆಗಳು- 1,09,88,332, ಹೊರ ಬಾಕಿ- 59,367.76 ಕೋಟಿ ರೂ., ಸಿಬ್ಬಂದಿ ಸಂಖ್ಯೆ 37,836. ಆತ್ಮಹತ್ಯೆಗೆ ಶರಣಾದವರು- ನಾಲ್ಕು ಜನರು, ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ವಿರುದ್ಧ ದಾಖಲಾದ ದಾವೆಗಳು- ಏಳು.

ನಮ್ಮಲ್ಲೇ ಮೊದಲು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ಕುರಿತು ಜ.19ರಂದು ‘ಮನೆಹಾಳು ಮೈಕ್ರೋ ಫೈನಾನ್ಸ್’ ಶೀರ್ಷಿಕೆ ಯಡಿ ವಿಜಯವಾಣಿ ಮೊದಲು ವರದಿ ಮಾಡಿತ್ತು. ನಂತರ ಕಿರುಸಾಲ ಕಂಪನಿಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗುತ್ತಿದೆ ಎಂಬುದನ್ನು ಕೂಡ ಜ.21ರಂದು ‘ಮೈಕ್ರೋ ಫೈನಾನ್ಸ್​ಗೆ ಮೂಗುದಾರ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಲಾಗಿತ್ತು.

ನಾಲ್ಕು ಕಾನೂನುಗಳ ಬಲವರ್ಧನೆಗೆ ಆದ್ಯತೆ

  • ಮೈಕ್ರೋ ಫೈನಾನ್ಸ್​ಗಳಿಂದ ಸಾಲ ಪಡೆದವರ ಹಿತರಕ್ಷಣೆಯ ಉದ್ದೇಶ
  • ಚಾಲ್ತಿಯಲ್ಲಿರುವ ನಾಲ್ಕು ಕಾನೂನುಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ
  • ಬಲವಂತದ ಸಾಲ ವಸೂಲಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
  • ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವಂತೆ ಅವಕಾಶ
  • ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೂ ಅನುವು
  • ಆಂಧ್ರಪ್ರದೇಶ ಜಾರಿಗೆ ತಂದ ಕಾಯ್ದೆ ಅಧ್ಯಯನ, ಒಳ್ಳೆಯ ಅಂಶಗಳ ಬಳಕೆ
  • ಗೃಹ, ಕಾನೂನು, ಕಂದಾಯ, ಹಣಕಾಸು ಇಲಾಖೆಗಳಿಗೆ ಕಾಯ್ದೆ ರಚನೆ ಹೊಣೆ

ಕಟ್ಟುನಿಟ್ಟಿನ ನಿರ್ದೇಶನ

  • ಆರ್​ಬಿಐ ನಿಯಮ ಮೀರಿ ಸಾಲ ನೀಡಿ, ಬಡ್ಡಿ ವಿಧಿಸುವಂತಿಲ್ಲ
  • ಸಂಜೆ 5ರ ಬಳಿಕ ಸಾಲ ವಸೂಲಿಗೆ ಹೋಗುವುದಕ್ಕೆ ನಿರ್ಬಂಧ
  • ಸಾಲ ವಸೂಲಿಗಾಗಿ ರೌಡಿ, ಗೂಂಡಾಗಳನ್ನು ಬಳಸಕೂಡದು
  • ಡಿಸಿ ಕಚೇರಿಗಳಲ್ಲಿ ಹೆಲ್ಪ್​ಲೈನ್ ಸ್ಥಾಪಿಸಿ ದೂರು ಸಲ್ಲಿಸಲು ಅವಕಾಶ
  • ಸಾಲ ವಸೂಲಿಗೆ ಅವಮಾನ, ಕಿರುಕುಳ, ಬೆದರಿಕೆ ಹಾಕಿದರೆ ದಾವೆ
  • ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು

ಬೆದರಿಸಿ ಬಲವಂತದ ಸಾಲ ವಸೂಲಾತಿ ಒಪ್ಪಲು ಸಾಧ್ಯವಿಲ್ಲ. ಬಡ ಸಾಲಗಾರರ ಹಿತ ಕಾಪಾಡಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ನೋಂದಾಯಿಸಬೇಕು. ಬೆದರಿಕೆ ಹಾಕಿ ಬಲವಂತದ ಸಾಲ ವಸೂಲಿ ತಡೆಗೆ ಸರ್ಕಾರ ಕಠಿಣ ಕ್ರಮವಹಿಸಬೇಕು.

| ಡಿ.ವಿ. ಸದಾನಂದಗೌಡ ಮಾಜಿ ಸಿಎಂ

ಅನೇಕರ ಸಾವಿನ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಡಲು ಹೊಸ ಕಾಯ್ದೆ ತರುತ್ತಿರುವುದು ಸ್ವಾಗತಾರ್ಹ.

| ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ

ಆತ ವೈಟ್​ಬಾಲ್​ ಕ್ರಿಕೆಟ್​ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

ಸ್ಯಾಂಡಲ್​ವುಡ್​ನ ಹಿರಿಯ ನಟ ಅನಂತ್​​ನಾಗ್​ಗೆ Padma Bhushan ಪ್ರಶಸ್ತಿ

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…