ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ

ಅಜ್ಜಂಪುರ: ಪಟ್ಟಣದಲ್ಲಿ ಎಕ್ಸ್​ಪ್ರೆಸ್ ರೈಲುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕವಾಗಿ ವಿಶ್ವಮಾನವ ರೈಲುಗಳನ್ನು ಶಿವನಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಎಕ್ಸ್​ಪ್ರೆಸ್ ರೈಲುಗಳನ್ನು ಅಜ್ಜಂಪುರದಲ್ಲಿ ನಿಲ್ಲಿಸುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಅಜ್ಜಂಪುರ ನೂತನ ತಾಲೂಕು ಕೇಂದ್ರವಾಗಿ ಘೊಷಣೆಯಾಗಿದ್ದು ಸದ್ಯದಲ್ಲೇ ಸರ್ಕಾರಿ ಕಚೇರಿಗಳು ಆರಂಭವಾಗಲಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ನಾಲ್ಕನೇ ಅಂಗವಾಗಿ ಕಾರ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಪ್ರಮುಖ ಬೇಡಿಕೆಯಾದ ಅಜ್ಜಂಪುರದಲ್ಲಿ ಪತ್ರಿಕಾಭವನ ನಿರ್ವಣಕ್ಕೆ ಶೀಘ್ರವೇ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ನೂತನ ತಾಲೂಕು ಕೇಂದ್ರ ಅಜ್ಜಂಪುರಕ್ಕೆ ಸರ್ಕಾರಿ ಕಚೇರಿಗಳಿಗೆ ಅವಶ್ಯವಿರುವ ಸ್ಥಳ ಮತ್ತು ಸೌಲಭ್ಯ ಕಲ್ಪಿಸಲಾಗುವುದು. ಪತ್ರಕರ್ತರ ಸಂಘ ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಪತ್ರಕರ್ತ ಎನ್.ರಾಜು ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರಗಳು ಪ್ರಯತ್ನಿಸಬೇಕು. ಅಮೃತ್​ವುಹಲ್ ಕಾವಲ್ ಉಳಿಸಿಕೊಳ್ಳಲು ಪಶುವೈದ್ಯಕೀಯ ಕಾಲೇಜು ನಿರ್ವಣಕ್ಕೆ ಸಂಘ ಸಂಸ್ಥೆಗಳು, ಕನ್ನಡ ಪರ ಹೋರಾಟಗಾರರು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.