More

    ಜೀವ ರಕ್ಷಕ ಔಷಧಗಳ ಬೆಲೆ ಏರಿಕೆ ಹಿಂಪಡೆಯಲು ಕಲ್ಲೂರು ಮೇಘರಾಜ್ ಆಗ್ರಹ

    ಶಿವಮೊಗ್ಗ: ಕೇಂದ್ರ ಸರ್ಕಾರ 384 ಜೀವ ರಕ್ಷಕ ಔಷಧಗಳ ಬೆಲೆಯನ್ನು ಶೇ.12.12ರಷ್ಟು ಏರಿಕೆ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.
    ನೋವು ನಿರೋಧಕ ಔಷಧಗಳು, ಆಂಟಿಬಯೋಟಿಕ್ಸ್, ಸೋಂಕು ನಿರೋಧಕಗಳು, ಹೃದ್ರೋಗದ ಸಂಬಂಧಿತ ಔಷಧಿಗಳು, ಮಲೇರಿಯಾ ಸಂಬಂಧಿತ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ಔಷಧಗಳ ದರವನ್ನು ಏರಿಕೆ ಮಾಡಿ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಭಾರತದಲ್ಲಿ ತಯಾರಿಸುವ ಅಗತ್ಯ ಔಷಧಗಳಿಗೆ ಬೇಕಾಗಿರುವ ಕಚ್ಛಾ ವಸ್ತು ಎಪಿಐ(ಆಕ್ಟೀವ್ ಫಾರ್ಮಾಸ್ಯೂಟಿಕಲ್ ಇಂಗ್ರೀಡಿಯಂಟ್)ಗಳಿಗೆ ವಿದೇಶಗಳನ್ನೇ ಅವಲಂಬಿಸಬೇಕಾಗುತ್ತದೆ. ದೇಶೀಯಾವಾಗಿ ಎಪಿಐಗಳ ತಯಾರಿಕೆಯಲ್ಲಿ ಪ್ರಗತಿ ಸಾಧಿಸದ ಹಿನ್ನಲೆಯಲ್ಲಿ ವಿದೇಶಗಳ ಮೇಲಿನ ಅವಲಂಬನೆ ಹೆಚ್ಚಾಗಿದ್ದು ಇದು ದೇಶದಲ್ಲಿ ಜೀವ ರಕ್ಷಕ ಔಷಧಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಪ್ರಸಕ್ತ ಸಾಲಿನ ಜನವರಿ ಅಂತ್ಯದೊಳಗೆ ಚೀನಾದಿಂದಲೇ 1,502 ಕೋಟಿ ರೂ. ಮೌಲ್ಯದ ಎಪಿಐಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
    ದೇಶೀಯವಾಗಿ ಎಪಿಐ ಘಟಕಗಳನ್ನು ಉತ್ತೇಜಿಸಲು ವಿದ್ಯುತ್ ಲಭ್ಯತೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಸ್ಥಿರತೆಯ ಭದ್ರತೆಯನ್ನು ಔಷಧ ತಯಾರಿಕಾ ಕಂಪನಿಗಳಿಗೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಅಲ್ಲದೆ, ಜಿಎಸ್‌ಟಿಯನ್ನು ಶೇ.18ರವರೆಗೆ ಔಷಧ ಕಂಪನಿ ಘಟಕಗಳ ಮೇಲೆ ವಿಧಿಸಲಾಗುತ್ತಿದೆ. ಒಟ್ಟಾರೆ ಕಚ್ಛಾ ವಸ್ತು ಪೂರೈಕೆಯಲ್ಲಿ ನಷ್ಟದ ಹೊರೆಯನ್ನು ಔಷಧ ಬಳಕೆದಾರರ ಮೇಲೆ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖರಾದ ಶಂಕರನಾಯ್ಕ, ಶ್ರೀಧರ್, ರಾಮಕೃಷ್ಣ, ಪುಷ್ಪಾಲತಾ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts