ರಾಜ್ಯಕ್ಕೆ ಮಧ್ಯಂತರ ನಿರಾಳ: 1200 ಕೋಟಿ ರೂ. ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಆಕ್ರೋಶಭರಿತ ದನಿಗೆ ಕೊನೆಗೂ ಕಿವಿಯಾದ ಕೇಂದ್ರ ಸರ್ಕಾರ 22 ಜಿಲ್ಲೆಗಳ ಸಂತ್ರಸ್ತರ ತುರ್ತು ಪರಿಹಾರಕ್ಕೆಂದು 1200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದೆ.

ರಾಜ್ಯ ಸಲ್ಲಿಸಿರುವ ನೆರೆಪರಿಹಾರ ಬೇಡಿಕೆ ವರದಿಯಲ್ಲಿನ ಕೆಲವು ಆಕ್ಷೇಪಣೆಗಳಿಗೆ ಸ್ಪಷ್ಟನೆ ದೊರೆತ ಕೂಡಲೇ ಉಳಿದ ಮೊತ್ತ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿರುವ ಕೇಂದ್ರ, ನೆರೆ ಪರಿಹಾರ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವ ವಾಗ್ದಾನ ಮಾಡಿದೆ.

ಆಗಸ್ಟ್ ಮೊದಲ ವಾರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆ ಹಾನಿಯಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಪೀಡಿತ ಪ್ರದೇಶ ಗಳನ್ನು ವೀಕ್ಷಿಸಿ ಸಮೀಕ್ಷೆಗಾಗಿ ಕೇಂದ್ರ ತಂಡವನ್ನು ಕಳುಹಿಸಿದ್ದರು. ಆ ಬಳಿಕವೂ ಪರಿಹಾರ ಬಿಡುಗಡೆಗೆ ತಡವಾಗಿತ್ತು. ಇದು ರಾಜ್ಯದ ಜನರನ್ನು ಕೆರಳಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದ್ದಂತೆ ಸಂಪುಟ ಸಭೆಯಲ್ಲೇ ಕೇಂದ್ರದ ವಿರುದ್ಧ ಆಕ್ರೋಶ ಸ್ಪೋಟಗೊಂಡಿತ್ತು. ‘

ಈ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳು ರಾಜ್ಯದ ವರದಿ ಬಗ್ಗೆ ಪರಾಮರ್ಶೆ ನಡೆಸಿ ಕೆಲ ವಿಚಾರಗಳಲ್ಲಿ ಸ್ಪಷ್ಟನೆ ಬಯಸಿದ್ದರು. ಈ ನಡುವೆ ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನೇ ತಿರಸ್ಕರಿಸಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಶುಕ್ರವಾರ ಸಂಜೆ ವೇಳೆಗೆ 1200 ಕೋಟಿ ರೂ. ಬಿಡುಗಡೆಗೊಳಿಸಿರುವ ಬಗ್ಗೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿತು.

ಈ ನೆರವು ಆಸ್ತಿ, ಬೆಳೆ ನಷ್ಟ, ಬೆಳೆ ಹಾನಿಗೆ ಪರಿಹಾರವಲ್ಲ. ಬದಲಿಗೆ ತುರ್ತು ಪ್ರತಿಕ್ರಿಯೆಗೆ ಆಗುವ ಖರ್ಚು ತೂಗಿಸಲು, ತಕ್ಷಣದ ಪರಿಹಾರ ಮತ್ತು ಪುನರ್ವಸತಿಗಾಗಿ ಖರ್ಚುಗಳನ್ನು ಪೂರೈಸಲು ಬಳಕೆ ಮಾಡಬಹುದು. ಆದರೆ ರಾಜ್ಯ ಸರ್ಕಾರ ಈ ಕಾರ್ಯಕ್ಕೆ ತನ್ನ ಬೊಕ್ಕಸದ ಹಣವನ್ನು ಈಗಾಗಲೇ ಹಂಚಿಕೆ ಮಾಡಿರುವುದರಿಂದ ಕೇಂದ್ರದಿಂದ ಬಂದ ಹಣವನ್ನು ಇತರ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ನಾವು ಕೂಡ ಸ್ಪಷ್ಟನೆಯನ್ನು ಶೀಘ್ರದಲ್ಲೇ ನೀಡುತ್ತೇವೆ. ಎನ್​ಡಿಆರ್​ಎಫ್​ನ ಪರಿಹಾರ ನಿರೀಕ್ಷಿಸಿದಷ್ಟು ಸಿಗುವ ವಿಶ್ವಾಸವಿದೆ ಎಂದರು.

ಜೋಶಿ, ಗೌಡ ಒತ್ತಡ: ಪ್ರವಾಹ ಪರಿಹಾರ ನೀಡುವಲ್ಲಿ ವಿಳಂಬವಾದ್ದರಿಂದ ಪಕ್ಷದ ಸಂಸದರ ವಿರುದ್ಧ ದನಿ ಎದ್ದಿದೆ. ಹೀಗಾಗಿ ಕೂಡಲೇ ನೆರವಾಗುವಂತೆ ಸಚಿವ ಪ್ರಲ್ಹಾದ ಜೋಶಿ ಮತ್ತು ಸದಾನಂದ ಗೌಡ ಗೃಹ ಸಚಿವ ಅಮಿತ್ ಷಾ ಅವರನ್ನು ಒತ್ತಾಯಿಸಿದ್ದರು. ಆದರೆ, ಎಲ್ಲ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಪರಿಹಾರ ಘೊಷಣೆಯಾಗಬೇಕಿದೆ, ಕರ್ನಾಟಕಕ್ಕೆಂದು ಪ್ರತ್ಯೇಕವಾಗಿ ಮೊದಲೇ ಹಣ ಬಿಡುಗಡೆ ಮಾಡಿದರೆ, ಬೇರೆ ರಾಜ್ಯಗಳು ಕೇಳುವ ಪ್ರಶ್ನೆಗಳಿಗೆ ನಾವು ಉತ್ತರಿಸುವುದು ಹೇಗೆ ಎಂದು ಅಮಿತ್ ಷಾ ವಿವರಿಸಿದ್ದಾರೆನ್ನಲಾಗಿದೆ.

ರಾಜಕೀಯ ಲೆಕ್ಕಾಚಾರವಿಲ್ಲ: ಪರಿಹಾರ ಹಂಚಿಕೆಯಲ್ಲಿ ರಾಜಕೀಯ ಲಾಭದ ಬಗ್ಗೆ ಲೆಕ್ಕಾಚಾರ ಹಾಕುವುದಿದ್ದರೆ ನಾವು ಮಹಾರಾಷ್ಟ್ರಕ್ಕೆ ಮೊದಲೇ ನೆರವಿನ ಘೊಷಣೆ ಮಾಡುತ್ತಿದ್ದೆವು. ಅಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಾಗಿದ್ದರೂ, ಆ ರಾಜ್ಯಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ ಎಂದರೆ ನಾವು ರಾಜಕೀಯ ಮಾಡಿಲ್ಲ ಎಂದೇ ಅರ್ಥ. ಕರ್ನಾಟಕದ ಸಮಸ್ಯೆ ಅರಿವಿಗೆ ಬಂದಿದೆ. ಸ್ಪಷ್ಟೀಕರಣಕ್ಕೆ ಉತ್ತರ ಸಿಕ್ಕ ಕೂಡಲೇ ಗೃಹ ಇಲಾಖೆ ಅಧಿಕಾರಿಗಳು ಉನ್ನತ ಸಮಿತಿಗೆ ಪರಿಹಾರ ಪ್ರಮಾಣದ ಕುರಿತ ಶಿಫಾರಸು ಮಾಡಲಿದ್ದಾರೆ ಎಂದು ಷಾ ಇಬ್ಬರು ಸಚಿವರಿಗೆ ತಿಳಿಸಿದ್ದಾರೆ. ಮಧ್ಯಂತರ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು.

ವರದಿ ಬಗ್ಗೆ ಗೊಂದಲ

ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ಎಂದು ಅಂದಾಜು ರೂ.3000 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಮನವಿ ಸಲ್ಲಿಸಿತ್ತು. ಆದರೆ ಈ ವರದಿಗೆ ದಿಗ್ಭ›ಮೆ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಇಲಾಖೆ, ಇಷ್ಟೊಂದು ಪ್ರಮಾಣದಲ್ಲಿ ಮಧ್ಯಂತರ ಪರಿಹಾರ ನೀಡಿದ ಉದಾಹರಣೆಯೇ ಇಲ್ಲ ಎಂದಿತ್ತು.

ರಾಜ್ಯ ಸರ್ಕಾರದ 35,000 ಕೋಟಿ ರೂ. ನಷ್ಟ ವರದಿಗೆ ವಿರುದ್ಧವಾಗಿ ಕೇಂದ್ರ 1,200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ. ಇದು ಬಿಎಸ್​ವೈ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಅವಿಶ್ವಾಸ ಹೊಂದಿರುವುದನ್ನು ಎತ್ತಿ ತೋರಿಸುತ್ತದೆ. ನರೇಂದ್ರ ಮೋದಿಯವರು ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.

| ಕೆಪಿಸಿಸಿ

ಕೇಂದ್ರದ ಪ್ರಶ್ನೆಗಳು

  • ಹಾನಿ, ಭಾಗಶಃ ಹಾನಿಯಾದ ಎಲ್ಲ 2.5 ಲಕ್ಷ ಮನೆಗಳಿಗೂ ಏಕಪ್ರಕಾರದ ನೆರವು ನೀಡಲು ಸಾಧ್ಯವೇ?
  • ಪ್ರತಿ ಮನೆಗೆ 5 ಲಕ್ಷ ರೂ. ನಿಗದಿ ಮಾಡಬೇಕು ಎಂದು ಹೇಳಿದ್ದೀರಿ. ಆದರೆ ಎಲ್ಲ ಮನೆಗಳಿಗೂ ಅಷ್ಟು ಮೊತ್ತದ ಹಾನಿ ಆಗಿದೆಯೇ?
  • ಮನೆಯ ಅಂದಾಜು ಮೂಲ ವೆಚ್ಚ, ಆ ನಷ್ಟ ಭರಿಸಲು ತಗಲುವ ಹಣ ಎಷ್ಟೆಂಬುದನ್ನು ನಿಗದಿಪಡಿಸಿ

ಕೇಂದ್ರ ಸರ್ಕಾರ ರಾಜ್ಯಕ್ಕೆ ಮುಂಗಡವಾಗಿ ಎನ್​ಡಿಆರ್​ಎಫ್ ನಿಂದ 1200 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುತ್ತೇನೆ.

| ಬಿ.ಎಸ್.ಯಡಿಯೂರಪ್ಪ ಸಿಎಂ

ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದುದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.

| ಕುಮಾರಸ್ವಾಮಿ ಮಾಜಿ ಸಿಎಂ

ಮುಂದೇನು?

1. ರಾಜ್ಯದ ಹಣಕಾಸು ಅಗತ್ಯ ಮನಗಂಡು ‘ಆನ್ ಅಕೌಂಟ್ ಬೇಸಿಸ್’ ಆಧಾರದಲ್ಲಿ ಕೇಂದ್ರ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ. ಮುಂದೆ ರಾಜ್ಯ ನೀಡಿದ ವರದಿಯನುಸಾರ ಲೆಕ್ಕಾಚಾರದಡಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ

2. ರಾಜ್ಯದ ಒಟ್ಟಾರೆ ನಷ್ಟ ಪ್ರಮಾಣದ ಅಂದಾಜು 35160 ಕೋಟಿ ರೂ. ಕೇಂದ್ರ ಎಷ್ಟು ಪ್ರಮಾಣದಲ್ಲಿ ಪರಿಹಾರ ಘೊಷಿಸಿದರೂ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ

3. ಬೆಳೆ ಹಾನಿ ನಷ್ಟದ ಪರಿಹಾರ, ಜನ ಜಾನುವಾರು ಜೀವಹಾನಿ ಮತ್ತಿತರ ಪರಿಹಾರಕ್ಕೆಂದು ರಾಜ್ಯಕ್ಕೆ 3891 ಕೋಟಿ ರೂಪಾಯಿವರೆಗೆ ಲಭ್ಯವಾಗಬಹುದು

4. ಕಾಫಿ, ಅಡಕೆ, ಸಾಂಬಾರು ಬೆಳೆ ನಾಶ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡ ಮರುನಿರ್ವಣಕ್ಕೆ ಬೇರೆ ನಿಧಿ ನೀಡಬೇಕೆಂದು ಕೋರಲಾಗಿದೆ

5. ವಸತಿ ಯೋಜನೆಯಡಿ ಕೇಂದ್ರ ಪ್ರತಿ ಮನೆಗೆ -ಠಿ;1.30 ಲಕ್ಷ ನೀಡುತ್ತಿದ್ದು, ವಸತಿ ಸಂಖ್ಯೆ ಹೆಚ್ಚಿಸಬೇಕೆಂದು ಬೇಡಿಕೆ ಇಡಲಾಗಿದೆ

Leave a Reply

Your email address will not be published. Required fields are marked *