ಯಲ್ಲಾಪುರ: ಬಾಂಗ್ಲಾದಲ್ಲಿ ಆಕ್ರಮಣಕ್ಕೆ ಗುರಿಯಾದ ಹಿಂದುಗಳ ಬೆಂಬಲಕ್ಕೆ ನಿಲ್ಲಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕಾರ್ಯಪ್ರವೃತ್ತವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದಲ್ಲಿ ಹಿಂದು ಸಮಾಜ, ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಹೊರತಾಗಿ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಹಿಂದು ಸಮಾಜದಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ, ಬಾಂಗ್ಲಾದ ಹಿಂದುಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಮುಡಾ ಹಗರಣ, ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿದ ಪ್ರಕರಣ ಸೇರಿದಂತೆ ಅನೇಕ ಹಗರಣಗಳ ಮೂಲಕ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿ ಸಲಿದೆ. ಸದ್ಯದಲ್ಲೇ ಹೋರಾಟ ಇನ್ನಷ್ಟು ಚುರುಕುಗೊಳ್ಳಲಿದೆ ಎಂದರು.
ಐತಿಹಾಸಿಕ ದಾಖಲೆ: ಸಂಘಟನಾ ಪರ್ವದಡಿ ದೇಶಾದ್ಯಂತ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಎರಡು ತಿಂಗಳ ಅವಧಿಯಲ್ಲಿ 10 ಕೋಟಿಗಿಂತ ಹೆಚ್ಚು ಜನ ಸದಸ್ಯತ್ವ ಪಡೆದಿದ್ದಾರೆ. ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿ, ಐತಿಹಾಸಿಕ ದಾಖಲೆ ನಿರ್ಮಿಸಿದೆ. ರಾಜ್ಯದಲ್ಲೂ ಹಿಂದಿಗಿಂತ ಶೇ. 30ರಷ್ಟು ಸದಸ್ಯತ್ವದ ಪ್ರಮಾಣ ಹೆಚ್ಚಾಗಿದೆ. ಉ.ಕ. ಜಿಲ್ಲೆಯ 1.70 ಲಕ್ಷಕ್ಕೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ ಎಂದರು.
ಪಕ್ಷದ ಸಾಂಸ್ಥಿಕ ಸಂರಚನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೂತ್‌ನಿಂದ ಹಿಡಿದು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಸದಸ್ಯತ್ವ ಅಭಿಯಾನದಲ್ಲಿ ದೊರೆತ ಜನಬೆಂಬಲದಿಂದ ಪಕ್ಷದ ಬಲ ಹೆಚ್ಚಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಯಲ್ಲಾಪುರ ತಾಲೂಕಿನಲ್ಲಿ ಹಿಂದುಳಿದ ವರ್ಗದವರ ಮೇಲೆ ಕೇಸ್ ಹಾಕುವ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಹಿಂದುಳಿದ ವರ್ಗದವರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಕಾರ್ಯದರ್ಶಿ ರವಿ ಕೈಟ್ಕರ್, ಮುಂಡಗೋಡ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಆಹ್ವಾನಿತ ಸದಸ್ಯರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಮಾಧ್ಯಮ ಸಂಚಾಲಕ ಕೆ.ಟಿ. ಹೆಗಡೆ ಇತರರು ಇದ್ದರು.