ನಾಲ್ಕೂವರೆ ವರ್ಷ ಕಾದಿದ್ದೇವೆ, ಈಗ ಕೇಳುತ್ತಿದ್ದೇವೆ: ಮಂದಿರದ ವಿಚಾರವಾಗಿ ಕೇಂದ್ರ ದಿಟ್ಟ ನಿರ್ಧಾರ ಕೈಗೊಳ್ಳಲಿ: ಪೇಜಾವರ ಶ್ರೀ

ಉಡುಪಿ: “ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆಯ್ತು. ಇನ್ನು ರಾಮ ಮಂದಿರ ನಿರ್ಮಾಣವಾಗಿಲ್ಲ. ನಾವು ಕಾದಿದ್ದೇವೆ. ಈಗ ಒತ್ತಾಯ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ,” ಎಂದು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದ ಕುರಿತು ಉಡುಪಿಯಲ್ಲಿ ಮಾತನಾಡಿರುವ ಅವರು, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೂರು ಮಾರ್ಗಗಳಿವೆ. ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸುವುದು, ಅಧಿವೇಶನದಲ್ಲಿ ತೀರ್ಮಾನಿಸುವುದು, ಸುಗ್ರೀವಾಜ್ಞೆ ಹೊರಡಿಸುವುದು. ಈ ಮೂರು ಮಾರ್ಗಗಳಲ್ಲಿ ಮಾತ್ರ ಮಂದಿರ ನಿರ್ಮಿಸಲು ಸಾಧ್ಯವಿದೆ,” ಎಂದು ಅವರು ಹೇಳಿದರು.

“ಈ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ದಾರ ತೆಗೆದುಕೊಳ್ಳಬೇಕು. ದೃಢ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರ್ಕಾರಕ್ಕೂ ಅನುಕೂಲವಾಗಲಿದೆ. ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ವಾಜಪೇಯಿ ಸರ್ಕಾರಕ್ಕಿಂತ ಹೆಚ್ಚು ಅನುಕೂಲವಿದೆ. ಕಾಂಗ್ರೆಸ್ ಕೂಡ ಈಗ ವಿರೋಧ ಮಾಡಲಿಕ್ಕಿಲ್ಲ. ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ. ಕಾಂಗ್ರೆಸ್ ಬೆಂಬಲಿಸುತ್ತಲೂ ಇಲ್ಲ, ವಿರೋಧಿಸಲೂ ಹೋಗುತ್ತಿಲ್ಲ. ಚುನಾವಣೆ ಹತ್ತಿರ ಇರುವುದರಿಂದ ಯಾರು ವಿರೋಧ ಮಾಡಲಿಕ್ಕಿಲ್ಲ. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ. ಮಂದಿರ ನಿರ್ಮಾಣಕ್ಕೆ ಈಗ ಅನುಕೂಲವಾದ ವಾತಾವರಣವಿದೆ,” ಎಂದು ತಿಳಿಸಿದರು.

ರಾಮಮಂದಿರ ಭಾವನಾತ್ಮಕ ವಿಚಾರ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾಯಿತು. ನಾವೂ ಕಾದಿದ್ದೇವೆ. ಈಗ ಒತ್ತಾಯ ಮಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಮಂದಿರದ ಚರ್ಚೆ ಮಾಡುತ್ತಿಲ್ಲ. ಸಂತರಿಗೆ ಚುನಾವಣೆಯ ಯಾವುದೇ ಅಗತ್ಯವಿಲ್ಲ. ಚುನಾವಣೆ ನಂತರ ಮುಂದೇನು ಎಂಬ ಪರಿಸ್ಥಿತಿ ಗೊತ್ತಿಲ್ಲ. ಆದ್ದರಿಂದ ಈಗಲೇ ಮಂದಿರ ನಿರ್ಮಾಣ ಮಾಡಿ ಎಂದು ವಿಶ್ವೇಶತೀರ್ಥ ಶ್ರೀ ಒತ್ತಾಯಿಸಿದ್ದಾರೆ.