ರಫೇಲ್ ಡೀಲ್ ಜನರಿಗೆ ಉತ್ತರ ಕೊಡಿ: ಸಚಿವ ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಜನರಿಗೆ ಹಾಗೂ ಕಾಂಗ್ರೆಸ್‌ಗೆ ಉತ್ತರ ನೀಡಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಯುದ್ಧ ವಿಮಾನ ಖರೀದಿಗೆ ಎಚ್‌ಎಎಲ್ ಕಂಪನಿಗೆ ನೀಡಿದ ಗುತ್ತಿಗೆಯನ್ನು ಫ್ರೆಂಚ್ ಕಂಪನಿಗೆ ನೀಡಿದ ಔಚಿತ್ಯ ಏನು? ಆರಂಭವಾಗಿ 15 ದಿನವೂ ಆಗದ ಕಂಪನಿಗೆ ನೀಡಿದ ಉದ್ದೇಶ ಏನು ಎಂದು ದೇಶದ ಜನ ಕೇಳುತ್ತಿದ್ದಾರೆ. ಅವರಿಗೆ ಸಂಸದೀಯ ಸಮಿತಿ ರಚಿಸಿ ಸ್ಪಷ್ಟ ಉತ್ತರ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಫೇಲ್‌ನಲ್ಲಿ ಅವ್ಯವಹಾರ ಆಗಿರದಿದ್ದರೆ ಪ್ರಧಾನಿ ಕಚೇರಿಯಿಂದ ರಾತ್ರಿ ಮೇಲ್ ಬಂದ ಬಳಿಕ ಸಿಬಿಐ ಮುಖ್ಯಸ್ಥರು ಯಾಕೆ ಅನಿರ್ದಿಷ್ಟಾವಧಿ ರಜೆಯಲ್ಲಿ ತೆರಳುತ್ತಾರೆ? ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ನೀಡಬಹುದು. ಆದರೆ ಜಂಟಿ ಸದನ ಸಮಿತಿಗೆ ಸುಳ್ಳು ಸಾಕ್ಷಿ ನೀಡಲು ಆಗುವುದಿಲ್ಲ ಎಂದರು.

ಅಧಿವೇಶನದಲ್ಲಿ ಪ್ರತಿಪಕ್ಷ ವಿಫಲ: ಬೆಳಗಾವಿ ಅಧಿವೇಶನ ಯಶಸ್ವಿಯಾಗಿ ನಡೆದು ಹಲವು ಮಸೂದೆಗಳು ಅಂಗೀಕೃತಗೊಂಡಿವೆ. ಕೊನೆಯ ಎರಡು ದಿನಗಳಲ್ಲಿ ಅನಗತ್ಯ ವಿಚಾರಗಳಾದ ಟಿಪ್ಪು ಜಯಂತಿ, ನ್ಯಾಯಾಲಯದ ವಕ್ಫ್ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯರ್ಥ ಪ್ರತಿಭಟನೆ ನಡೆಸಿ ಸದನಕ್ಕೆ ಅಡ್ಡಿಪಡಿಸಲಾಯಿತು. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗೆ ಒಂದಿಷ್ಟೂ ಕಾಳಜಿ ಇದ್ದಂತೆ ಕಂಡಿಲ್ಲ. ಗೊಂದಲ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು ಎಂದು ಖಾದರ್ ಆರೋಪಿಸಿದರು.
ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಕುತ್ಲೂರಿಗೆ ಆಂಗ್ಲಮಾಧ್ಯಮ ಶಾಲೆ: ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ ಗ್ರಾಮ ವಾಸ್ತವ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗ್ರಾಮ ವಾಸ್ತವ್ಯ ಮಾಡಿದ ಪತ್ರಕರ್ತರಿಗೆ ತಲಾ 5 ಸಾವಿರ ರೂ. ಬಹುಮಾನ ವಿತರಿಸಿದ ಸಚಿವರು, ಕಾರ್ಯಕ್ರಮ ನಡೆದ ಕುತ್ಲೂರು ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆ ಮುಂದಿನ ವರ್ಷ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಲಾಗುವುದು. ಕಂದಾಯ, ಆರೋಗ್ಯ ಮೊದಲಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯ, ಕುದುರೆಮುಖ ಉದ್ಯಾನವನದ ಸಮಸ್ಯೆಯನ್ನು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದರು. ಬಹುಮಾನದ ಹಣವನ್ನು ಕುತ್ಲೂರು ಶಾಲೆಗೆ ಕಂಪ್ಯೂಟರ್ ಒದಗಿಸಲು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ತಿಳಿಸಿದರು.

ನಿಗಮ ಮಂಡಳಿಗಳಿಗೆ ನೇಮಕ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಕಾಂಗ್ರೆಸ್ ಶಾಸಕರು ಹೆಚ್ಚಿರುವ ಕಡೆ ಕಾಂಗ್ರೆಸ್‌ಗೆ ಹಾಗೂ ಜೆಡಿಎಸ್ ಸದಸ್ಯರು ಹೆಚ್ಚಿರುವ ಕಡೆ ಜೆಡಿಎಸ್‌ನ ಶಾಸಕರನ್ನು ಅಧ್ಯಕ್ಷತೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ. ತನ್ನಲ್ಲಿ ಇರುವ ಎರಡು ಖಾತೆಗಳ ಪೈಕಿ ಯಾವುದನ್ನು ಬಿಟ್ಟು ಕೊಡಬೇಕು ಎನ್ನುವುದರ ಬಗ್ಗೆ ಚಿಂತಿಸಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಸಚಿವ ಖಾದರ್ ಹೇಳಿದರು.