ಸಿದ್ಧಾರ್ಥ ಕನಸಿನ ಕೂಸು ಕೆಫೆ ಕಾಫಿ ಡೇ ಉಳಿಸಲು ಮುಖ್ಯಮಂತ್ರಿ ಭೇಟಿ

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಉದ್ಯಮ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಸಲುವಾಗಿ ಕಾಫಿ ಬೆಳೆಗಾರ ಸಂಘಟನೆಗಳು, ರೈತ ಸಂಘಟನೆಗಳು ಮಲೆನಾಡ ಕಾಫಿ ಸಂಸ್ಥೆ ಹಾಗೂ ಕಾಫಿ ಕುಟುಂಬದ ಕಾರ್ವಿುಕರನ್ನು ಉಳಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದಲ್ಲದೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಬೇಕಿದೆ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಉದ್ಯಮಿ ಸಿದ್ಧಾರ್ಥ ಅವರ ಬೃಹತ್ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಕೆಫೆ ಕಾಫಿ ಡೇಯಲ್ಲಿ ಉದ್ಯೋಗ ಪಡೆದ 50 ಸಾವಿರಕ್ಕೂ ಹೆಚ್ಚು ಕುಶಲಕರ್ವಿುಗಳಲ್ಲದ ಕಾರ್ವಿುಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಬೀದಿಗೆ ಬರುತ್ತಾರೆ. ಜತೆಗೆ ಇಡೀ ಕಾಫಿ ಉದ್ಯಮಕ್ಕೆ ನಾಯಕತ್ವದ ಕೊರತೆ ಉಂಟಾಗಲಿದೆ. ಹೀಗಾಗಿ ಸಂಸ್ಥೆ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಒಟ್ಟಾಗಬೇಕು ಎಂದರು.

ಸಿದ್ಧಾರ್ಥ ಅವರ ಸಾವು ಅವರನ್ನು ನಂಬಿದ ಇಡೀ ಕಾಫಿ ಕುಟುಂಬಕ್ಕೆ ಆದ ದೊಡ್ಡ ಆಘಾತ. ಚಿಕ್ಕಮಗಳೂರು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಬೇಕೆಂಬುದು ಅವರ ಇಚ್ಛೆಯಾಗಿತ್ತು. ಕಾಫಿ ಡೇ ಸೇರಿದಂತೆ ಎಲ್ಲ ಯೋಜನೆಗಳ ಕೇಂದ್ರ ಕಚೇರಿಯನ್ನು ಇಲ್ಲೇ ಸ್ಥಾಪಿಸಿದ್ದರು. ಪ್ರಚಾರದಿಂದ ದೂರವೇ ಉಳಿದಿದ್ದ ಅವರು, ಅಗಲಿದ ಬಳಿಕ ದೇಶದ ಎಲ್ಲ 200 ಭಾಷೆಯ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರು. ಜನರ ಹೃದಯದಲ್ಲಿ ಅಷ್ಟೊಂದು ಜಾಗ ಪಡೆದಿರುವುದೇ ಇದಕ್ಕೆ ಕಾರಣ ಎಂದರು.

ಆದಿ ಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧಮೇಗೌಡ, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಉದ್ಯಮಿ ಮುನೀರ್ ಅಹಮ್ಮದ್ ಮಾತನಾಡಿದರು.

ಬಡವರಿಗೆ ಉದ್ಯೋಗ ನೀಡುತ್ತಿದ್ದ ಉದ್ಯಮಿ: ಯಾರನ್ನಾದರೂ ಉದ್ಯೋಗಕ್ಕೆ ಸೇರಿಸಲು ಶಿಫಾರಸು ಮಾಡುವಾಗ ಕುಗ್ರಾಮದ ಬಡವರ ಆಯ್ಕೆಗೆ ಆಸಕ್ತಿ ಹೊಂದಿದ್ದರು. ಇಲ್ಲದಿದ್ದಲ್ಲಿ ಅವರೆಲ್ಲ ಸಮಾಜ ಘಾತುಕರಾಗುವವರ ಕೈಗೆ ಸಿಲುಕಿ ಅವರು ಬದಲಾಗುವ ಅಪಾಯವಿದೆ ಎನ್ನುತ್ತಿದ್ದರು ಎಂದು ಶಾಸಕ ಸಿ.ಟಿ.ರವಿ ಸ್ಮರಿಸಿದರು. ಯಾರಿಗೂ ಮೋಸ ಮಾಡದ ಅವರು ಪರಿಸ್ಥಿತಿ ಹಾಗೂ ಕಾಲದ ಹೊಡೆತಕ್ಕೆ ಸಿಲುಕಿದ ಪರಿಣಾಮ ಅಧೀರರಾಗಿ ಬದುಕಿಗೆ ಅಂತ್ಯ ತಂದುಕೊಂಡರು ಎಂದು ವಿಷಾದಿಸಿದರು. ಮಾನವೀಯ ನೆಲೆಯಲ್ಲಿ ಚಿಕ್ಕಮಗಳೂರು ಬಗ್ಗೆ, ಬಡವರ ಬಗ್ಗೆ ಚಿಂತನೆ ಮಾಡುತ್ತ, ಇಲ್ಲಿಗೆ ಉದ್ಯೋಗಾವಕಾಶ ಸಿಗಬೇಕು. ಇಲ್ಲಿನ ಕಾಫಿ ಒಂದು ಬ್ರ್ಯಾಂಡ್ ಆಗಬೇಕು ಎಂದುಕೊಂಡಿದ್ದ ಕನಸುಗಾರನನ್ನು ಕಳೆದುಕೊಂಡಿದ್ದೇವೆ. ಸಿದ್ಧಾರ್ಥ ಅವರ ಕಾಯ ಇಲ್ಲ. ಅವರ ಕನಸುಗಳಿಗೆ ನೀರೆರೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *