ಕಿರಿಯ ವೈದ್ಯರ ಪ್ರತಿಭಟನೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸದೆ ಅನುಕಂಪದಿಂದ ವರ್ತಿಸಿ: ದೀದಿಗೆ ಹರ್ಷವರ್ಧನ್​ ಸಲಹೆ

ನವದೆಹಲಿ: ಕಿರಿಯ ವೈದ್ಯರ ಪ್ರತಿಭಟನೆಯನ್ನು ವೈಯಕ್ತಿಕ ಪ್ರತಿಷ್ಠೆಯ ದೃಷ್ಟಿಕೋನದಿಂದ ನೋಡುವ ಬದಲು ಅನುಕಂಪದಿಂದ ನೋಡುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಸಲಹೆ ನೀಡಿದ್ದಾರೆ.

ಕಿರಿಯ ವೈದ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮನ್ನು ಭೇಟಿಯಾಗಿದ್ದ ದೆಹಲಿ ಏಮ್ಸ್​ನ ವೈದ್ಯರ ನಿಯೋಗದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಕಿರಿಯ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ರೋಗಿಯ ಸಂಬಂಧಿಕರು ತಮ್ಮನ್ನು ಚೆನ್ನಾಗಿ ಥಳಿಸಿದ್ದರೂ, ವೈದ್ಯರು ಕಾನೂನಿನ ವ್ಯಾಪ್ತಿಯಲ್ಲಿ ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದಷ್ಟೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ. ಅನುಕಂಪದಿಂದ ಇದನ್ನು ಪರಿಗಣಿಸುವ ಬದಲು ಮಮತಾ ಬ್ಯಾನರ್ಜಿ ಕರ್ತವ್ಯಕ್ಕೆ ಮರಳುವಂತೆ ಕಿರಿಯ ವೈದ್ಯರಿಗೆ ಸಮಯದ ಗಡುವು ನಿಗದಿಪಡಿಸಿರುವುದು ಸರಿಯಲ್ಲ. ಇದರಿಂದಾಗಿ ಇಂದು ಪ್ರತಿಭಟನೆ ದೇಶವನ್ನೆಲ್ಲಾ ವ್ಯಾಪಿಸುವಂತಾಗಿದೆ. ಆದ್ದರಿಂದ, ಈ ವಿಷಯದಲ್ಲಿ ಅವರು ತಮ್ಮ ನಿಲುವನ್ನು ಬದಲಿಸಿಕೊಂಡು, ಕಿರಿಯ ವೈದ್ಯರ ನೆರವಿಗೆ ಮುಂದಾಗಬೇಕು ಎಂದರು.

ಪ್ರತಿಭಟನೆಗೆ ರಾಷ್ಟ್ರದಾದ್ಯಂತ ಬೆಂಬಲ
ಕೋಲ್ಕತದ ಎನ್​ಆರ್​ಎಸ್​ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರು ಭದ್ರತೆಗೆ ಆಗ್ರಹಿಸಿ ನಡೆಸಿರುವ ಪ್ರತಿಭಟನೆಗೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಗಿದೆ. ಮಹಾರಾಷ್ಟ್ರದ ಸ್ಥಾನಿಕ ವೈದ್ಯರ ಸಂಘ, ಹೈದರಾಬಾದ್​ನ ನಿಜಾಂ ವೈದ್ಯಕೀಯ ವಿಜ್ಞಾನಗಳ ಸಂಘ, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಎಂಎಂಎಸ್​) ವೈದ್ಯಕೀಯ ಸಂಘ ಮತ್ತು ಸ್ಥಾನಿಕ ವೈದ್ಯರ ಸಂಘ, ಎಐಎಂಎಂಎಸ್​ನ ಪಟನಾ ಮತ್ತು ರಾಯ್ಪರದ ವೈದ್ಯರು ಕೂಡ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ಇದೇ ಮೊದಲ ಬಾರಿಗೆ ಕಾರ್ಪೊರೇಟ್​ ಆಸ್ಪತ್ರೆಗಳ ವೈದ್ಯರು ಕೂಡ ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಎದುರು ವೈದ್ಯರು ಪ್ರತಿಭಟನೆ ನಡೆಸಿ, ಪಶ್ಚಿಮ ಬಂಗಾಳದ ಕಿರಿಯ ವೈದ್ಯರ ಪ್ರತಿಭಟನೆಯನ್ನು ಬೆಂಬಲಿಸಿದರು.

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತಿರುಗಿ ಬಿದ್ದಿರುವ ವೈದ್ಯರು
ಕೋಲ್ಕತದ ಎನ್​ಆರ್​ಎಸ್​ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರಾದ ಪ್ರತಿಭಾ ಮುಖ್ಯೋಪಾಧ್ಯಾಯ ಮತ್ತು ಯಶ್​ ತೇಕ್ವಾನಿ ಎಂಬುವರ ಮೇಲೆ ರೋಗಿಯ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಕಿರಿಯ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದರು. ಕೆಲಸ ಮಾಡುವಾಗ ಭದ್ರತೆ ಮತ್ತು ಸುರಕ್ಷತೆ ಇರುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಇವರೆಲ್ಲರ ಆಗ್ರಹವಾಗಿತ್ತು. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಕೊಡಿಸುತ್ತಾರೆ ಎಂಬುದು ಇವರೆಲ್ಲರ ನಿರೀಕ್ಷೆಯಾಗಿತ್ತು.

ಆದರೆ, ಗುರುವಾರ ಪ್ರತಿಭಟನಾನಿರತ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಭರವಸೆ ನೀಡಲು ವಿಫಲರಾದ ಮಮತಾ ಬ್ಯಾನರ್ಜಿ ಪ್ರತಿಭಟನೆ ನಿಲ್ಲಿಸಿ, ಇನ್ನು ನಾಲ್ಕು ಗಂಟೆಗಳಲ್ಲಿ ಕೆಲಸಕ್ಕೆ ಮರಳಬೇಕು ಎಂದು ತಾಕೀತು ಮಾಡಿದ್ದರು. ಆದರೆ ಇದನ್ನು ಬೆದರಿಕೆ ಎಂದು ಪರಿಗಣಿಸಿದ ವೈದ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಸಾಲದ್ದಕ್ಕೆ ಕೋಲ್ಕತದ ಮುನ್ಸಿಪಲ್​ ಕಾರ್ಪೋರೇಷನ್​ ಆಸ್ಪತ್ರೆಗಳ 300 ವೈದ್ಯರು ಕೂಡ ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಆನಂತರದಲ್ಲಿ ಈ ಪ್ರತಿಭಟನೆ ದೇಶದಾದ್ಯಂತ ವಿಸ್ತರಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *