ಭ್ರಷ್ಟಾಚಾರ ರಹಿತ, ಬಡವರ ಪರ ಆಡಳಿತ

ಚಿಕ್ಕಮಗಳೂರು: ನರೇಂದ್ರ ಮೋದಿ ಭ್ರಷ್ಟಾಚಾರವಿಲ್ಲದೆ ಬಡವರ ಪರ ಸರ್ಕಾರ ನಡೆಸಿದ್ದು, ದೇಶ ಮತ್ತಷ್ಟು ಸಶಕ್ತವಾಗಲು ಮತ್ತೊಮ್ಮೆ ಅವರಿಗೆ ಶಕ್ತಿ ತುಂಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ಜೀ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿ ಸಮೀಪ ಗುರುವಾರ ಆಯೋಜಿಸಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗಡಿ ರಕ್ಷಣೆ ಹೇಗಿರಬೇಕೆಂದು ಮೊದಲ ಬಾರಿಗೆ ಪ್ರಧಾನಿಯೊಬ್ಬರು ನಿಶ್ಚಿಯಿಸಿದ್ದರಿಂದ ಕಾಶ್ಮೀರ ಹೊರತುಪಡಿಸಿ ದೇಶದ ಯಾವ ಭಾಗದಲ್ಲಿಯೂ ಬಾಂಬ್ ಸ್ಪೋಟವಾಗಿಲ್ಲ. ಐದು ವರ್ಷ ದಿನಕ್ಕೆ 18 ಗಂಟೆ ಕೆಲಸ ಮಾಡಿದ ಮೋದಿ ಹೆಮ್ಮೆಯಿಂದ ಮತ ಯಾಚನೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಪ್ರಧಾನಿಯಾದವರೊಬ್ಬರು, ಮುಖ್ಯಮಂತ್ರಿಯೊಬ್ಬರು ಮತ ಹಾಕುವಂತೆ ಕಣ್ಣೀರು ಹಾಕಿ ಅಳುತ್ತಿದ್ದಾರೆ. ಮೋದಿ ವಿಶ್ರಾಂತಿ ರಹಿತವಾಗಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ ಕರ್ನಾಟಕದ ಸಿಎಂ ಜನತಾ ದರ್ಶನ ಬಿಟ್ಟು ಹೆಂಡತಿ ಮಕ್ಕಳೊಂದಿಗೆ ವಿದೇಶ ಪ್ರವಾಸ ಮಾಡುತ್ತಾರೆ. ವಿರೋಧ ಪಕ್ಷಗಳ ಇಂಥ ಅಸಡ್ಡೆತನಗಳನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನರೇಂದ್ರ ಮೋದಿ ಬಂದಿದ್ದು, ಬಡವರ ಕಣ್ಣೀರು ಒರೆಸಲು. ಮಕ್ಕಳು, ಮೊಮ್ಮಕ್ಕಳು ಕಣ್ಣೀರು ಒರೆಸಲು ಅಲ್ಲ. ದೇಶದಲ್ಲಿ ಮೊದಲ ಬಾರಿಗೆ ಸಂಪನ್ಮೂಲ ಎಲ್ಲ ಜಾತಿ, ಧರ್ಮದ ಬಡವರಿಗೂ ಸೇರಬೇಕೆಂದು ಕೆಲಸ ಮಾಡಿದ್ದಾರೆ. ಮುದ್ರಾ, ಆಯುಷ್ಮಾನ್, ಉಜ್ವಲ ಯೋಜನೆಗಳನ್ನು ಮೋದಿ ಜಾತಿ ಹುಡುಕದೆ ಬಡವರನ್ನು ಹುಡುಕಿ ನೀಡಿದರು. ಏಳು ಕೋಟಿ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕೊಟ್ಟು ಅವರನ್ನು ಹೊಗೆಯಿಂದ ಸಂರಕ್ಷಿಸಲಾಗಿದೆ ಎಂದರು.

ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಮನಮೋಹನ್​ಸಿಂಗ್ ಅವರು ಕಲ್ಲು ಹಾಕಿ ಬಿಟ್ಟು ಹೋದ ನೂರಾರು ಯೋಜನೆಗಳನ್ನು ದಕ್ಷ ಪ್ರಧಾನಿ ಮೋದಿ ಪೂರ್ಣಗೊಳಿಸಿ ಉದ್ಘಾಟಿಸಿದ್ದಾರೆ. ಆಕಾಶದ ಬೇಹುಗಾರಿಕೆ ಸ್ಯಾಟ್​ಲೈಟ್ ಹೊಡೆದು ಹಾಕುವ ಎ-ಸ್ಯಾಟ್ ಯೋಜನೆಗೆ 2014ರ ಪ್ರಧಾನಿ ಮನ ಮೋಹನ್​ಸಿಂಗ್ ಸಹಿ ಹಾಕಲಿಲ್ಲ. ಆದರೆ, ಮೋದಿ ಆ ಯೋಜನೆ ಯಶಸ್ವಿಯಾಗಿ ಪೂರ್ಣಗೊಳಿಸಿ ವಿಶ್ವದ ಮೂರು ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರುವಂತೆ ಮಾಡಿದರು. ಪ್ರಧಾನಿಗಳಾದವರು ಯೋಚನೆ ಮಾಡಿದರೆ ಸಾಲದು, ಕಾರ್ಯಗತ ಮಾಡಬೇಕು. ಸಹಿ ಮಾಡಲು ಪೆನ್ನಿನಲ್ಲಿ ಇಂಕು ಇದ್ದರೆ ಸಾಲು, ಎದೆಯಲ್ಲಿ ಕೆಲಸ ಮಾಡುವ ಛಲ ಇರಬೇಕು ಎಂದರು.

ಕೇಂದ್ರ ಸರ್ಕಾರ ಐದು ವರ್ಷದಲ್ಲಿ 20 ಲಕ್ಷ ಕೋಟಿ ರೂ. ರಸ್ತೆ, ಇತರೆ ಯೋಜನೆ ಟೆಂಡರ್ ಮಾಡಿದ್ದಾರೆ. 10 ಲಕ್ಷ ಕೋಟಿ ರೂ. ಗ್ಯಾಸ್ ಮತ್ತು ಕಲ್ಲಿದ್ದಲು ಟೆಂಡರ್ ಕರೆದಿದ್ದಾರೆ. ಕೇಂದ್ರದ ಸಂಪುಟದ ಸಚಿವರು, 120ಕ್ಕೂ ಕಾರ್ಯದರ್ಶಿಗಳ ಮೇಲೆ ಈವರೆಗೂ ಭ್ರಷ್ಟಾಚಾರದ ಒಂದೂ ಆರೋಪ ಬಂದಿಲ್ಲ. ಮೋದಿ ಸರ್ಕಾರದಲ್ಲಿ ಬೆಲೆ ಏರಿಕೆ ಚರ್ಚೆಯೇ ಆಗಿಲ್ಲ. ಇದಕ್ಕೆ ಮೋದಿ ಅವರ ದೂರದೃಷ್ಟಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಕಾರಣ ಎಂದರು.

ಮೋದಿಯಿಂದ ಗೌರವ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಗಡಿ ಪ್ರದೇಶದಲ್ಲಿ ರಸ್ತೆಯಂತಹ ಮೂಲ ಸೌಲಭ್ಯ ಮೊದಲ ಬಾರಿಗೆ ಪ್ರಧಾನಿ ಕಲ್ಪಿಸಿದ್ದರಿಂದ ಇವತ್ತು ಚೀನಾ ಗಡಿ ಉಲ್ಲಂಘಿಸಿ ಒಳಬರಲಾಗುತ್ತಿಲ್ಲ ಎಂದರು. ಸೈನಿಕ ಕುಟುಂಬ ನೆಮ್ಮದಿಯಾಗಿದ್ದರೆ ದೇಶ ಸುರಕ್ಷವೆಂಬುದನ್ನು ಅರಿತ ಪ್ರಧಾನಿ ಸೈನಿಕರ ಬೇಡಿಕೆ ಈಡೇರಿಸಿದರು. ಹಿಂದಿನ ಸರ್ಕಾರಗಳು ರಾತ್ರಿ ವೇಳೆ ಸೈನಿಕರು ಶತ್ರು ವೀಕ್ಷಣೆ ಮಾಡಲು ನೈಟ್ ವಿಷನ್ ಗ್ಲಾಸ್ ಸಹ ಕೊಟ್ಟಿರಲಿಲ್ಲ. ಪುಲ್ವಾಮಾ ಘಟನೆ ನಂತರ ವಿಶ್ವದಲ್ಲಿ ಮೋದಿಯವರು ದೇಶಕ್ಕೆ ರಾಜತಾಂತ್ರಿಕ ಗೆಲುವು ತಂದು ಕೊಟ್ಟು ಜಗತ್ತಿನ ಗಮನ ಸೆಳೆದಿದ್ದಾರೆ ಎಂದರು.

ನಗರಾಧ್ಯಕ್ಷ ಕೋಟೆ ರಂಗನಾಥ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ, ಕಲ್ಮರಡಪ್ಪ, ಜಸಂತಾ ಅನಿಲ್​ಕುಮಾರ್, ಪುಷ್ಪಾ ಮೋಹನ್, ಹಿರಿಗಯ್ಯ, ಬಿ.ಸೋಮಶೇಖರ್ ಇತರರು ಇದ್ದರು.

ಗೌಡರಿಂದ ಚನ್ನಮ್ಮನಿಗೆ ಅನ್ಯಾಯ!

ಮಾಜಿ ಪ್ರಧಾನ ಎಚ್.ಡಿ.ದೇವೇಗೌಡರಿಂದ ಚನ್ನಮ್ಮನಿಗೆ ದೊಡ್ಡ ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎ.ಎನ್. ಪ್ರಾಣೇಶ್ ಹೇಳಿದಾಗ ಸ್ವಲ್ಪ ಸಮಯ ಬಿಜೆಪಿ ಕಾರ್ಯಕರ್ತರು ಕಕ್ಕಬಿಕ್ಕಿಯಾದರು. ಯಾಕೆ ಗೌಡರಿಂದ ಅನ್ಯಾಯವಾಗಿದೆ ಎಂದು ಪ್ರಾಣೇಶ್ ಬಿಡಿಸಿ ಹೇಳಿದಾಗಲೆ ಕಾರ್ಯಕರ್ತರು ನಗೆ ಗಡಲಲ್ಲಿ ಮುಳುಗಿ ಹೋದರು. ಗೌಡರ ರಾಜಕೀಯ ಹೋರಾಟದಲ್ಲಿ ಹೆಗಲು ಕೊಟ್ಟು ನಿಂತವರು ಚನ್ನಮ್ಮ. ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿಗೆ ತಾಯಿಯಾಗಿ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರಿಗೆ ಅತ್ತೆಯಾಗಿ, ಪ್ರಜ್ವಲ್ ರೇವಣ್ಣ, ನಿಖಿಲ್ ಅವರಿಗೆ ಅಜ್ಜಿಯಾಗಿ ಜೀವನ ಸವೆಸಿದ್ದಾರೆ. ಇವರೊಬ್ಬರನ್ನು ರಾಜ್ಯ ಸಭೆ ಸದಸ್ಯೆಯನ್ನಾಗಿ ಮಾಡದೆ ಗೌಡರು ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಹಾಸ್ಯ ಚಟಾಕಿ ಮೂಲಕ ಗೌಡರ ವಂಶ ರಾಜಕಾರಣವನ್ನು ಕಟುವಾಗಿ ಟೀಕಿಸಿದರು.

ಚೌಕಿದಾರ-ಚೋರರ ನಡುವಿನ ಚುನಾವಣೆ

ಭಾರತದಲ್ಲಿ ಈಗ ನಡೆಯುತ್ತಿರುವುದು ಚೌಕಿದಾರ ಮತ್ತು ಚೋರರ ತಂಡದ ನಡುವಿನ ಚುನಾವಣೆ ಎಂದು ಶಾಸಕ ಸಿ.ಟಿ.ರವಿ ವಿಶ್ಲೇಷಿಸಿದರು. ಬಿಜೆಪಿ ಇಂಡಿಯಾ ಫಸ್ಟ್ ಎನ್ನುತ್ತಿದ್ದರೆ, ಕಾಂಗ್ರೆಸ್, ಜೆಡಿಎಸ್ ಫ್ಯಾಮಿಲಿ ಫಸ್ಟ್ ಎನ್ನುತ್ತಿದೆ. ಇಲ್ಲಿ ಕುಟುಂಬವಲ್ಲ ದೇಶ ಗೆಲ್ಲಬೇಕಿದೆ. ಮೊದಲ ಬಾರಿಗೆ ಯಾವುದೇ ಮಧ್ಯವರ್ತಿ ಇಲ್ಲದೆ ನೇರ ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಡಿಬಿಟಿ ಯೋಜನೆ ಮೋದಿ ಜಾರಿಗೆ ತಂದರು. ಈ ಮೊದಲು ನೂರು ಕೇಂದ್ರ ನೀಡಿದರೆ 16 ರೂ .ಮಾತ್ರ ಫಲಾನುಭ ಕೈಗೆ ಸಿಗುತ್ತಿತ್ತು. ಬಿಜೆಪಿ ಹಾಗೂ ಮೋದಿ ಮಾಡುತ್ತಿರುವುದು ಶುದ್ಧೀಕರಣ ರಾಜಕಾರಣ ಎಂದರು. ಡಿಎನ್​ಎ ಮೇಲೆ ಜನ ಪ್ರತಿನಿಧಿಗಳ ಆಯ್ಕೆಯಾಗಬಾರದು. ಜನರ ನಡುವೆ ಇರುವ ವ್ಯಕ್ತಿ ನಾಯಕನಾಗಿ ಆಯ್ಕೆಯಾಗಿ ಆಡಳಿತ ನಡೆಸಬೇಕು. ಅಜ್ಜನಿಂದ ಮೊಮ್ಮಗಿನಿಗಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬವನ್ನೂ ಕಟುವಾಗಿ ರವಿ ಟೀಕಿಸಿದರು.

ಪ್ಪು ಹಣ ಇದ್ದವರಿಗೆ ನೋಟ್ ಬ್ಯಾನ್​ನಿಂದ ತೊಂದರೆಯಾಗಿದೆ. ನ್ಯಾಯಯುತ ಹಣ ಇಟ್ಟುಕೊಂಡವರಿಗೆ ಏನೂ ಆಗಿಲ್ಲ. ಜಿಎಸ್​ಟಿ ಮಾಡಿದ್ದರಿಂದ ತೆರಿಗೆ ವಂಚನೆ ತಪ್ಪಿದೆಯಲ್ಲದೆ, ಅಂತಾರಾಜ್ಯಗಳ ನಡುವೆ ಇದ್ದ ವ್ಯತ್ಯಾಸದ ತೆರಿಗೆ ಸಮಸ್ಯೆ ಪರಿಹಾರವಾಗಿದೆ. ದೇಶದಲ್ಲಿ ಇನ್ನು ಆಗಬೇಕಾದ ಅನೇಕ ಕಾರ್ಯ ಪೂರ್ಣಗೊಳಿಸಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. | ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತಾರೆ ಎಂಬು ಹಸಿ ಸುಳ್ಳು ವಿರೋಧ ಪಕ್ಷಗಳು ಹೇಳುತ್ತಿವೆ. ಮೋದಿ ಯಾವಾಗ ಇಂಥ ಹೇಳಿಕೆ ನೀಡಿದ್ದಾರೆೆ? ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಆಗುವುದಿಲ್ಲ. ಆದರೆ, ಬಿಜೆಪಿ ಮೋದಿ ಮಾಡಿರುವ ಯೋಜನೆಗಳ ಸತ್ಯ ಹೇಳಿ ಮತ್ತೆ ಅಧಿಕಾರಕ್ಕೆ ಬರಲಿದೆ.
| ಬಿ.ಎಲ್.ಸಂತೋಷಜೀ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನೆ ಪ್ರಧಾನ ಕಾರ್ಯದರ್ಶಿ