ಇ ಸಿಗರೇಟ್​ ನಿಷೇಧಿಸಿದ ಕೇಂದ್ರ ಸರ್ಕಾರ; ನಿಯಮ ಉಲ್ಲಂಘಿಸಿದವರಿಗೆ 5 ಲಕ್ಷ ರೂ.ವರೆಗೆ ದಂಡ

ನವದೆಹಲಿ: ಸಿಗರೇಟ್​ ಬದಲಾಗಿ ಯುವಜನರಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಇ ಸಿಗರೇಟ್​ ಅಥವಾ ಎಲೆಕ್ಟ್ರಾನಿಕ್​ ನಿಕೋಟಿನ್​ ಡೆಲಿವರಿ ಸಿಸ್ಟಮ್ಸ್​ (ಇಎನ್​ಡಿಎಸ್​), ಇ ಹುಕ್ಕಾ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಕೇಂದ್ರ ಸಚಿವೆ, ‘ಇ ಸಿಗರೇಟ್​ಗಳ ಉತ್ಪಾದನೆ, ರಫ್ತು/ಆಮದು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಇ ಸಿಗರೇಟ್​ ಕುರಿತಾದ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಇ ಸಿಗರೇಟ್​ನಲ್ಲಿ ನಿಕೋಟಿನ್​ ಅಂಶವಿರುವ ದ್ರಾವಣ ಇರುತ್ತದೆ. ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುವ ಈ ಸಾಧನದಲ್ಲಿ ನಿಕೋಟಿನ್​ ಅಂಶ ಇರುವ ದ್ರಾವಣವನ್ನು ಬಿಸಿ ಮಾಡಿ ಹೊಗೆ ಉತ್ಪತ್ತಿ ಮಾಡುತ್ತದೆ. ಸಾಂಪ್ರದಾಯಿಕ ಸಿಗರೇಟ್​ಗಳಿಗೆ ಪರ್ಯಾಯವಾಗಿ ಇ ಸಿಗರೇಟ್​ಗಳನ್ನು ಬಳಕೆ ಮಾಡಲಾಗುತ್ತಿದೆ.

ಇ ಸಿಗರೇಟ್​ಗಳನ್ನು ಉತ್ಪಾದಿಸುವುದು ಅಥವಾ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದವರೆಗೆ 5 ಲಕ್ಷ ರೂ. ದಂಡ, 3 ವರ್ಷದವರೆಗೆ ಜೈಲುಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.

Leave a Reply

Your email address will not be published. Required fields are marked *