ಸೈಬರ್ ವಂಚನೆಗೆ ಕೇಂದ್ರದ ಬೇಲಿ; ನಿತ್ಯ 1.35 ಕೋಟಿ ವಂಚನೆ ಕರೆ ಬ್ಲಾಕ್​

Cyber Crime

ನವದೆಹಲಿ: ದೇಶದ ಜನತೆ ಡಿಜಿಟಲೀಕರಣಕ್ಕೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಸೈಬರ್ ಅಪರಾಧಗಳ ಪ್ರಮಾಣವೂ ಮಿತಿಮೀರುತ್ತಿದೆ. ದಿನಕ್ಕೊಂದು ವೇಷ, ಆಮಿಷದ ಮೂಲಕ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿರುವ ಸೈಬರ್ ಕಳ್ಳರ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೈಟೆಕ್ ತಂತ್ರಜ್ಞಾನದೊಂದಿಗೆ ಬಿಗಿ ಬೇಲಿ ಹಾಕಿದೆ.

ದೂರ ಸಂಪರ್ಕ ಇಲಾಖೆಯು ಕೆವೈಸಿ ಅಪ್​ಡೇಟ್ ಹಾಗೂ ಬ್ಯಾಂಕ್ ಖಾತೆ ನವೀಕರಣದ ಹೆಸರಲ್ಲಿ ವಂಚನೆ ಪ್ರಕರಣಗಳ ದೂರು ದಾಖಲಿಸಲು ಸಂಚಾರ ಸಾಥಿ ಪೋರ್ಟಲ್​ನಲ್ಲಿ (https://sancharsaathi.gov.in) ಡಿಜಿಟಲ್ ಇಂಟಲಿಜೆನ್ಸ್ ಪ್ಲಾಟ್​ಫಾಮ್ರ್ (ಡಿಐಪಿ) ಹಾಗೂ ಚಕ್ಷು ಸೌಲಭ್ಯ ಪರಿಚಯಿಸಿದೆ. ಮೊಬೈಲ್ ಕರೆ, ಸಂದೇಶ ಅಥವಾ ವಾಟ್ಸ್​ಆಪ್ ಮೆಸೇಜ್​ನಲ್ಲಿ ಸೈಬರ್ ವಂಚನೆ ಬಗ್ಗೆ ನಿಮಗೆ ಅನುಮಾನ ಮೂಡಿದಲ್ಲಿ ತಕ್ಷಣ ಪೋರ್ಟಲ್​ನಲ್ಲಿ ದೂರು ದಾಖಲಿಸಬಹುದಾಗಿದೆ. ಈ ವ್ಯವಸ್ಥೆ ಅಡಿ ನಿತ್ಯ 1.35 ಕೋಟಿ ವಂಚನೆ ಕರೆಗಳನ್ನು ತಾಂತ್ರಿಕ ವ್ಯವಸ್ಥೆ ಮೂಲಕ ಬ್ಲಾಕ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಅಂದಾಜು 2500 ಕೋಟಿ ರೂ. ಹಣ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

‘ಫ್ರಾಡ್ ಅಥವಾ ಸ್ಪ್ಯಾಮ್ ಕಾಲ್​ಗಳು ಸಾಮಾನ್ಯವಾಗಿ ಹೊರದೇಶಗಳ ಸರ್ವರ್​ಗಳ ಮೂಲಕ ಬರುತ್ತವೆ. ಆ ಪೈಕಿ ಬಹುತೇಕ ಕರೆಗಳನ್ನು ದೂರಸಂಪರ್ಕ ಇಲಾಖೆಯ ವಂಚನೆ ಪತ್ತೆ ಜಾಲದ (ಫ್ರಾಡ್ ಡಿಟೆಕ್ಷನ್ ನೆಟ್​ವರ್ಕ್) ಮೂಲಕ ತಡೆ ಹಿಡಿಯಲಾಗುತ್ತಿದೆ. ಇದಕ್ಕಾಗಿ ಸಂಚಾರಸಾಥಿ ಪೋರ್ಟಲ್ ಮತ್ತು ಸಂಶಯಾಸ್ಪದ- ಅನಗತ್ಯ ಕರೆಗಳ ವಿರುದ್ಧ ದೂರು ನೀಡಲು ರೂಪಿಸಲಾಗಿರುವ ‘ಚಕ್ಷು’ ವ್ಯವಸ್ಥೆ ಸಹಾಯ ಮಾಡುತ್ತಿವೆ.

18 ಲಕ್ಷ ಹೆಡರ್ ಬ್ಲಾಕ್: ‘ಜನರಿಗೆ ಅನಗತ್ಯ ಮೆಸೇಜ್​ಗಳನ್ನು ಕಳಿಸಲು ಬಳಸುತ್ತಿದ್ದ 18 ಲಕ್ಷ ಹೆಡರ್​ಗಳನ್ನು ಬ್ಲಾಕ್ ಮಾಡಲಾಗಿದೆ. 2.9 ಲಕ್ಷ ಫೋನ್​ಗಳ ಸಂಪರ್ಕ ಕಡಿದುಹಾಕಲಾಗಿದೆ. ಕೆಲವರು ವಿದೇಶಗಳಿಂದ ಕರೆ ಮಾಡುತ್ತಿದ್ದರೂ ಭಾರತದ +91 ಕೋಡ್ ಡಿಸ್​ಪ್ಲೇ ಆಗುವಂತೆ ವ್ಯವಸ್ಥೆ ಮಾಡಿಕೊಂಡಿರುವುದು ಕಂಡುಬಂದಿದೆ. ಅಂತಹ ಕರೆಗಳನ್ನೂ ನಿರ್ದಿಷ್ಟ ಸಾಫ್ಟ್​ವೇರ್ ಬಳಸಿ ಬ್ಲಾಕ್ ಮಾಡಲಾಗುತ್ತಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿಕೊಂಡಿದ್ದಾರೆ.

ಭಾರತದಲ್ಲೇ ಟೆಲಿಕಾಂ ಸೆಟಪ್!: ಭಾರತೀಯ ಮೊಬೈಲ್ ಅಥವಾ ಲ್ಯಾಂಡ್​ಲೈನ್ ಸಂಖ್ಯೆಯೊಂದಿಗೆ ಸ್ವೀಕರಿಸಿದ ಅಂತಾರಾಷ್ಟ್ರೀಯ ಕರೆಗಳ ಬಗ್ಗೆ ಸಾಥಿ ಪೋರ್ಟಲ್​ನಲ್ಲಿ ಗ್ರಾಹಕರು ವರದಿ ಮಾಡಬಹುದು. ಇದಲ್ಲದೆ ಅಂತಹ ಕರೆಗಳು ಬಂದಲ್ಲಿ ತಕ್ಷಣ 1963 ಅಥವಾ 1800110420ಗೆ ವರದಿ ಮಾಡಬಹುದು. ಭಾರತದಲ್ಲೇ ಅಕ್ರಮವಾಗಿ ಟೆಲಿಕಾಂ ಸೆಟಪ್ ಮಾಡಿ, ಸೈಬರ್ ಕ್ರೖೆಂಗೆ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ. ಕೃತಕ ಬುದ್ಧಿಮತ್ತೆ ಬಳಸಿ ಎಸ್​ಎಂಎಸ್ ಆಧಾರಿತ ಸೈಬರ್ ವಂಚನೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಂದೇಶ ಕಳುಹಿಸಲು ಬಳಸುವ ಹೆಡರ್​ಗಳು ಮತ್ತು ವಿಷಯ ಟೆಂಪ್ಲೇಟ್​ಗಳನ್ನು ಬ್ಲಾಕ್ ಮಾಡಲಾಗಿದೆ. ಹೊಸ ತಂತ್ರಜ್ಞಾನದಿಂದಾಗಿ ರಾಷ್ಟ್ರೀಯ ಸೈಬರ್ ಕ್ರೖೆಮ್ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ)ನಲ್ಲಿ ವರದಿಯಾದ ಒಟ್ಟು ಸೈಬರ್ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ 2023ರ ಫೆಬ್ರವರಿಯಿಂದ 2023 ನವೆಂಬರ್ ಅವಧಿಯಲ್ಲಿ ಎಸ್ಸೆಮ್ಸೆಸ್ ಆಧಾರಿತ ಸೈಬರ್ ಅಪರಾಧದ ಪ್ರಮಾಣ ಶೇ.36 ಕಡಿಮೆಯಾಗಿದೆ ಎಂದು ದೂರ ಸಂಪರ್ಕ ಇಲಾಖೆ ಮಾಹಿತಿ ಕೊಟ್ಟಿದೆ.

ಈ ವರ್ಷ 1457 ಕೋಟಿ ವಂಚನೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಕೊಟ್ಟಿರುವ ಮಾಹಿತಿ ಪ್ರಕಾರ 2022-23ರಲ್ಲಿ 6669 ಸೈಬರ್ ವಂಚನೆ ಪ್ರಕರಣಗಳಲ್ಲಿ 277 ಕೋಟಿ ರೂ. ಎಗರಿಸಲಾಗಿತ್ತು. ಆದರೆ, 2023-24ರಲ್ಲಿ 29082 ಕೇಸ್​ಗಳು ವರದಿಯಾಗಿದ್ದು, ಬರೋಬ್ಬರಿ 1457 ಕೋಟಿ ರೂ. ವಂಚನೆಯಾಗಿದೆ.

ಮೋಸ ಹೋದರೆ 1930ಗೆ ಕರೆ ಮಾಡಿ: ಸೈಬರ್ ಅಪರಾಧಕ್ಕೆ ಒಳಗಾಗಿದ್ದೀರಿ ಎಂದು ಗೊತ್ತಾದ ತಕ್ಷಣ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ) ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಕೊಡಿ. ಕರೆ ಉಚಿತವಾಗಿದ್ದು, ಸ್ಥಳೀಯ ಭಾಷೆಯಲ್ಲೇ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿ, ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ತಿಳಿಸುತ್ತಾರೆ. ಹಣ ಕಳೆದುಕೊಂಡ ತಕ್ಷಣವೇ ದೂರು ಕೊಟ್ಟರೆ ಸಂತ್ರಸ್ತರ ಖಾತೆಯಿಂದ ಸೈಬರ್ ವಂಚಕರ ಖಾತೆಗೆ ವರ್ಗಾವಣೆಯಾದ ಹಣವನ್ನು ಫ್ರೀಜ್ ಮಾಡಲು ಅವಕಾಶ ಇರುತ್ತದೆ.

ಹೊಸ ವ್ಯವಸ್ಥೆಯ ವಿಶೇಷತೆ

  • ನಿತ್ಯ 1.35 ಕೋಟಿ ವಂಚನೆ ಕರೆ ನಿರ್ಬಂಧ
  • 2500 ಕೋಟಿ ರೂ.ಸಾರ್ವಜನಿಕ ಆಸ್ತಿ ರಕ್ಷಣೆ
  • ಸ್ವದೇಶಿ ವಂಚನೆ ಕರೆ ಪತ್ತೆ ಕಾರ್ಯ ಸುಲಭ
  • ವಿದೇಶಿ ಸರ್ವರ್ ನಿಯಂತ್ರಣ ಕಷ್ಟ ಕಷ್ಟ
  • +91 ಸಂಖ್ಯೆ ಎಂದು ಮರೆಮಾಚಿ ವಂಚನೆ
  •  ಹೊಸ ವ್ಯವಸ್ಥೆಯಲ್ಲಿ ಇಂತಹ ಕರೆ ತಡೆ ಸಾಧ್ಯ
  • 520 ಏಜೆನ್ಸಿಗಳನ್ನು ಮಟ್ಟಹಾಕಿರುವ ವ್ಯವಸ್ಥೆ

ಹೈಟೆಕ್ ತಂತ್ರದ ಪರಿಣಾಮ

  • ಸೈಬರ್ ಕ್ರೖೆಂನಲ್ಲಿದ್ದ 2.78 ಲಕ್ಷ ಮೊಬೈಲ್ ಸಂಪರ್ಕ ಬಂದ್
  • ನಕಲಿ ದಾಖಲೆಯಿಂದ ಪಡೆದಿದ್ದ 55.52 ಲಕ್ಷ ಸಂಪರ್ಕ ಕಡಿತ
  • ದೂರು ಆಧರಿಸಿ 13,42 ಲಕ್ಷ ಶಂಕಾಸ್ಪದ ಸಂಪರ್ಕ ಕಡಿತ
  • ಅಕ್ರಮವಾಗಿ ಸ್ಥಾಪಿಸಲಾಗಿದ್ದ 162 ಟೆಲಿಕಾಂ ಸಂಪರ್ಕ ಪತ್ತೆ
  • ನಕಲಿ ದಾಖಲೆಗೆ ಲಿಂಕ್ ಆಗಿದ್ದ 2.21 ಲಕ್ಷ ವಾಟ್ಸ್​ಆಪ್ ಬ್ಲಾಕ್
  • ನಕಲಿ ದಾಖಲೆಗೆ ಲಿಂಕ್ ಆಗಿದ್ದ 9.83 ಲಕ್ಷ ಬ್ಯಾಂಕ್ ಖಾತೆ ಜಪ್ತಿ
  • ಸೈಬರ್, ಆರ್ಥಿಕ ಅಪರಾಧದಡಿ 1.32 ಲಕ್ಷ ಮೊಬೈಲ್ ಬ್ಲಾಕ್

ವಿಜಯವಾಣಿ ಕಳಕಳಿ 

  • ಡ್ರಗ್ಸ್, ಆಪ್ತರ ಕಿಡ್ನಾಪ್ ಆಗಿರುವುದಾಗಿ ಕರೆ ಮಾಡಿದರೆ ನಂಬಬೇಡಿ
  • ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚುತ್ತಿದೆ. ಈ ಬಗ್ಗೆ ಅರಿವಿರಲಿ
  • ಕೆವೈಸಿ ಅಪ್​ಡೇಟ್, ಖಾತೆ ನವೀಕರಣ ಕರೆ, ವಾಟ್ಸ್​ಆಪ್ ಮಾಹಿತಿ ನಂಬಬೇಡಿ
  • ಯಾವುದೇ ರೀತಿ ವೈಯಕ್ತಿಕ ವಿವರ, ಒಟಿಪಿ ಯಾರೊಂದಿಗೂ ಹಂಚಿಕೊಳ್ಳಬೇಡಿ
  • ವಂಚನೆ ಒಳಗಾಗಿರುವುದು ಗೊತ್ತಾದರೆ ತಕ್ಷಣ ಕಾರ್ಡ್ ಬ್ಲಾಕ್ ಮಾಡಿಸಿ
  • ಪದೇಪದೆ ವೆಬ್​ಸೈಟ್​ಗಳಲ್ಲಿ ಆನ್​ಲೈನ್ ಪಾವತಿಯನ್ನು ಸಾಧ್ಯವಾದಷ್ಟು ತಪ್ಪಿಸಿ
  • ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಅಥವಾ ಇಂಟರ್​ನೆಟ್ ಸಂಪರ್ಕ ಪಡೆಯದಿರಿ
  • ಕಂಪ್ಯೂಟರ್, ಮೊಬೈಲ್ ಅಪ್ಲಿಕೇಷನ್ ಅನ್ನು ನಿರಂತರವಾಗಿ ಅಪ್​ಡೇಟ್ ಮಾಡಿ

ಸೈಬರ್ ಕ್ರೖೆಂ ವಿರುದ್ಧ ಕೇಂದ್ರ ಕೈಗೊಂಡಿರುವ ಕ್ರಮಗಳು ಅತ್ಯುತ್ತಮವಾಗಿವೆ. ಈ ಕ್ರಮಗಳ ತುರ್ತು ಅಗತ್ಯತೆ ಇತ್ತು. ಕಳ್ಳ ಸಾಗಾಣಿಕೆ ಮಾಡಿ ಭಾರತದ ಸಿಮ್ ಕಾರ್ಡ್​ಗಳನ್ನು ಸೈಬರ್ ವಂಚಕರು ವಿದೇಶದಲ್ಲಿಯೂ ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆಯೂ ಕಠಿಣ ಕ್ರಮ ಜರುಗಿಸಬೇಕು.

| ಡಾ.ಎಂ.ಎ.ಸಲೀಂ ಡಿಜಿಪಿ, ಸಿಐಡಿ

ನಿತ್ಯ 1.35 ಕೋಟಿಯಷ್ಟು ವಂಚನೆ ಕರೆಗಳನ್ನು ಸರ್ಕಾರ ಸ್ಥಾಪಿಸಿರುವ ತಾಂತ್ರಿಕ ವ್ಯವಸ್ಥೆ ಬ್ಲಾಕ್ ಮಾಡುತ್ತಿದ್ದು, ಅದರಿಂದ ಈವರೆಗೆ ಸಾರ್ವಜನಿಕರ ಸುಮಾರು 2500 ಕೋಟಿ ರೂ. ಹಣ, ಆಸ್ತಿಪಾಸ್ತಿ ರಕ್ಷಣೆಯಾಗಿದೆ.

| ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ದೂರಸಂಪರ್ಕ ಸಚಿವ

ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?

Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court​ ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ

 

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…