Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ನಮೋ ಬಜೆಟ್ ಹೆಚ್ಚು ಸಿಹಿ, ಸ್ವಲ್ಪ ಕಹಿ!

Friday, 02.02.2018, 3:06 AM       No Comments

| ಸಿ. ಎಸ್. ಸುಧೀರ್ ಸಿಇಒ ಇಂಡಿಯನ್ ಮನಿ ಡಾಟ್ ಕಾಂ

ಎನ್​ಡಿಎ ಸರ್ಕಾರದ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಜನಪ್ರಿಯತೆಯ ಲೆಕ್ಕಾಚಾರದ ಜತೆಗೆ ಅಭಿವೃದ್ಧಿ ಕೇಂದ್ರಿತ ಅಂಶಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದಾರೆ. ನೋಟ್ ಬ್ಯಾನ್, ಜಿಎಸ್​ಟಿ ಅನುಷ್ಠಾನದ ಸವಾಲುಗಳ ಬೆನ್ನಲ್ಲೇ, 2019ಕ್ಕೆ ಮತ್ತೆ ಚುನಾವಣೆ ಎದುರಿಸಬೇಕಿರುವ ಕಾರಣ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವುದನ್ನು ರೂಢಿಗೆ ತರುವ ಪ್ರಯತ್ನ ಮಾಡಿದ್ದಾರೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಈ ಸಲ ಪ್ರಮುಖ ಕ್ಷೇತ್ರಗಳಿಗೆ ಆಯವ್ಯಯದಲ್ಲಿ ಆದ್ಯತೆ ಸಿಕ್ಕಿದೆ. ಆದರೆ, ಕೇಂದ್ರ ಸರ್ಕಾರ ಅನುಷ್ಠಾನದಲ್ಲೂ ಬದ್ಧತೆ ತೋರಬೇಕಿದೆ.

ಎಲ್ಲ ಬಜೆಟ್​ಗಳಲ್ಲಿ ನಾವು ನೋಡಿರುವಂತೆಯೇ ಈ ಬಜೆಟ್​ನಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿವೆ. ಅನ್ನದಾತನಿಗೆ ನಮೋ ಎಂದಿರುವ ಜೇಟ್ಲಿ, ಕೃಷಿ ಕ್ಷೇತ್ರದ ಸಮಗ್ರ ಪ್ರಗತಿಗೆ 14.34 ಲಕ್ಷ ಕೋಟಿ ರೂ. ನೀಡಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪಾದನಾ ವೆಚ್ಚದ ಶೇ.1.5 ಹೆಚ್ಚಳ ಮಾಡಲಾಗಿದೆ. ಜತೆಗೆ 2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ರೂಪಿಸಿರುವ ಯೋಜನೆ ರೈತಾಪಿ ಕುಟುಂಬಗಳಲ್ಲಿ ಭರವಸೆ ಮೂಡಿಸಿದೆ. ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದಿರುವ ವಿತ್ತ ಸಚಿವರ ನಿರ್ಧಾರ ವೇತನದಾರರ ಕಣ್ಣು ಕೆಂಪಾಗಿಸಿದೆ. ಆದರೆ, ವೇತನದಾರರಿಗೆ ಹೆಚ್ಚುವರಿ ಪ್ರಮಾಣಿತ ವಿನಾಯಿತಿಯನ್ನು 40 ಸಾವಿರ ರೂ.ಗೆ ಹೆಚ್ಚಳ ಮಾಡಿರುವುದು ಸಮಾಧಾನ ತಂದಿದೆ.

ಆರೋಗ್ಯವೇ ಭಾಗ್ಯ ಎಂದಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆ ಅಡಿ 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ಸುರಕ್ಷತೆ ನೀಡಲು ಮುಂದಾಗಿದೆ. ಇದರಂತೆ ಸರ್ಕಾರವು ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಿದೆ. ಸಾಮಾನ್ಯವಾಗಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಖಾಸಗಿಯಾಗಿ ಮಾಡಿಸಬೇಕು ಎಂದಾದಲ್ಲಿ ವಾರ್ಷಿಕವಾಗಿ ಕನಿಷ್ಠ 12 ಸಾವಿರ ರೂ. ಖರ್ಚಾಗಲಿದೆ. ಅಂದರೆ ಕೇಂದ್ರ ಸರ್ಕಾರವು ಈ ಬಜೆಟ್​ನ ಮೂಲಕ ಪ್ರತಿ ಬಡ ಕುಟುಂಬಕ್ಕೆ 12 ಸಾವಿರ ರೂ. ನೆರವನ್ನು ನೇರವಾಗಿ ನೀಡಿದಂತಾಗುತ್ತದೆ.

ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ ನೀಡಿದೆ. ಆರೋಗ್ಯ ವಿಮೆ ಮೇಲೆ ನೀಡಲಾಗುತ್ತಿದ್ದ ತೆರಿಗೆ ವಿನಾಯಿತಿಯನ್ನು 30 ಸಾವಿರದಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. ಬ್ಯಾಂಕ್ ಪೋಸ್ಟ್ ಆಫೀಸ್ ಠೇವಣಿ ಮೇಲೆ ಬರುತ್ತಿದ್ದ ಬಡ್ಡಿಯ ತೆರಿಗೆ ವಿನಾಯಿತಿಯನ್ನು 10 ಸಾವಿರದಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. 2005ರ ಮುಂಚೆ ಸ್ಟಾ್ಯಂಡರ್ಡ್ ಡಿಡಕ್ಷನ್ ಎಂದು 40 ಸಾವಿರ ರೂ.ಗಳ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈಗ ಅದನ್ನು ಮರುಜಾರಿಗೊಳಿಸುವ ಮೂಲಕ ಹಿರಿಯ ನಾಗರಿಕರಿಗೆ ಕೊಡುಗೆ ನೀಡಲಾಗಿದೆ. ಇದಲ್ಲದೆ ತೀವ್ರ ಅನಾರೋಗ್ಯ ಇದ್ದ ಸಂದರ್ಭದಲ್ಲಿ 60 ಸಾವಿರ ರೂ. ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಮೊಬೈಲ್ ಮೇಲಿನ ಕಸ್ಟಮ್ಸ್ ತೆರಿಗೆ ಶೇ. 15ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದಲ್ಲದೆ ಆಮದು ಮಾಡಿಕೊಳ್ಳುವ ಚಿನ್ನ, ಕಾರು, ಬೈಕ್, ಟಿವಿ, ಚಪ್ಪಲಿ, ಸುಗಂಧದ್ರವ್ಯ ಸೇರಿ ಐಷಾರಾಮಿ ವಸ್ತುಗಳ ತೆರಿಗೆ ಹೆಚ್ಚಿಸಲಾಗಿದ್ದು ದೇಸಿ ಉತ್ಪಾದಕರಿಗೆ ಲಾಭವಾಗಲಿದೆ. 250 ಕೋಟಿ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇ.30ರಿಂದ 25ಕ್ಕೆ ಇಳಿಸಲಾಗಿದೆ. ಇದರಿಂದ ದೇಶದ ಶೇ.98 ಕಂಪನಿಗಳಿಗೆ ಅನುಕೂಲವಾಗಲಿದೆ. ಹೊಸದಾಗಿ ಕೆಲಸಕ್ಕೆ ಸೇರುವ ಕಾರ್ವಿುಕರ ಭವಿಷ್ಯ ನಿಧಿಯ ಉದ್ಯೋಗಿ ಪಾಲನ್ನು (ಮೂಲ ವೇತನದಲ್ಲಿ ಶೇ.12) ಸರ್ಕಾರವೇ ಪಾವತಿಸಲಿದೆ. ಇದರಿಂದ ಉದ್ಯೋಗಿಯ ನಿವ್ವಳ ವೇತನ ಹೆಚ್ಚಾಗಲಿದೆ. ಶಿಕ್ಷಣವೇ ಶಕ್ತಿ ಎನ್ನುವ ಧ್ಯೇಯದಂತೆ ಬಜೆಟ್​ನಲ್ಲಿ ಶೈಕ್ಷಣಿಕ ವಲಯಕ್ಕೂ ಕೊಡುಗೆ ಸಿಕ್ಕಿದೆ. ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಪ್ರಸ್ತಾವ, ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ, ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಏಕಲವ್ಯ ವಸತಿ ಶಾಲೆ ಸೇರಿ ಇನ್ನಿತರ ಯೋಜನೆಗಳು ಆಶಾದಾಯಕವಾಗಿವೆ. ದೇಶದ ಪ್ರಗತಿಗೆ ಮೂಲಸೌಕರ್ಯವೇ ಮೂಲ ಎನ್ನುವುದನ್ನು ಅರಿತಿರುವ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು 4.94 ಲಕ್ಷ ಕೋಟಿಯಿಂದ 6 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದೆ. ಉಪನಗರ ರೈಲು, ಮೆಟ್ರೋ, ವಿಮಾನ ನಿಲ್ದಾಣಗಳ ನಿರ್ವಣದಂತಹ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಬೆಂಗಳೂರು ಉಪನಗರ ರೈಲು ಯೋಜನಗೆ 17 ಸಾವಿರ ಕೋಟಿ ರೂ. ನೀಡಿರುವುದು ನಗರದ ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗಿದೆ. ಉಜ್ವಲ ಯೋಜನೆ ಅಡಿ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.

ಒಟ್ಟಾರೆ ಈ ಬಜೆಟ್​ನಲ್ಲಿ ಎಲ್ಲರಿಗೂ ಸಿಗುವಂತಹ ಒಂದಿಷ್ಟು ಅಂಶಗಳಿವೆ. ಅವನ್ನು ಸಮರ್ಥವಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧತೆ ತೋರಬೇಕಿದೆ.

ಮಾರುಕಟ್ಟೆಗಳಾಗಲಿವೆ ಸಂತೆಗಳು

ಈ ಬಾರಿಯ ಬಜೆಟ್ ರೈತ ಸ್ನೇಹಿಯಾಗಿದ್ದು, ಕೃಷಿ ಅಭಿವೃದ್ಧಿ ಹಾಗೂ ಕೃಷಿಕನ ಆದಾಯ ದುಪ್ಪಟ್ಟುಗೊಳಿಸಲು ಹಲವು ನೂತನ ಕ್ರಮಗಳನ್ನು ಘೋಷಿಸಲಾಗಿದೆ. ದೇಶದ ಶೇ.86 ಕೃಷಿಕರು ಉತ್ಪನ್ನಗಳ ಮಾರಾಟಕ್ಕೆ ಗ್ರಾಮೀಣ ಸಂತೆಗಳನ್ನೇ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸಂತೆಗಳನ್ನು ಗ್ರಾಮೀಣ ಕೃಷಿ ಮಾರುಕಟ್ಟೆಗಳಾಗಿ ಮೇಲ್ದರ್ಜೆಗೇರಿಸಲು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಬೆಂಗಳೂರು ಸಬ್​ಅರ್ಬನ್ ರೈಲ್ವೆಗೆ 17 ಸಾವಿರ ಕೋಟಿ ರೂ.

ಬೆಂಗಳೂರು ನಾಗರಿಕರ ಬಹುದಿನಗಳ ಬೇಡಿಕೆಯಾದ ಉಪನಗರ ರೈಲ್ವೆ ಯೋಜನೆಗೆ ಕೇಂದ್ರ ಬಜೆಟ್​ನಲ್ಲಿ 17 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. 160 ಕಿ.ಮೀ. ಮಾರ್ಗವು ಈ ಯೋಜನೆ ವ್ಯಾಪ್ತಿಗೆ ಬರಲಿದೆ. ಅಲ್ಲದೆ, ರಾಜ್ಯದ 13 ಕಡೆ 218.73 ಕಿ.ಮೀ. ರೈಲ್ವೆ ಟ್ರಾ್ಯಕ್ ಡಬ್ಲಿಂಗ್ ಹಾಗೂ ಗಂಗಾವತಿ-ಕಾರಟಗಿ ನಡುವೆ 28 ಕಿ.ಮೀ. ಉದ್ದದ ಹೊಸ ಮಾರ್ಗ ನಿರ್ವಣಕ್ಕೆ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ಗ್ರಾಮೀಣ ಜನರಿಗೂ ವೈ-ಫೈ

#ದೇಶದ 5 ಕೋಟಿ ಗ್ರಾಮೀಣ ಜನರಿಗೆ ಉಚಿತ ವೈ-ಫೈ ಒದಗಿಸಲು 5 ಲಕ್ಷ ವೈಫೈ ವ್ಯವಸ್ಥೆಗಳ ಘೋಷಣೆ

# ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿ ಸ್ಥಾಪನೆ. ಆರಂಭಿಕ ಹಂತಕ್ಕೆ 2,000 ಕೋಟಿ ರೂ. ಅನುದಾನ

# ಗ್ರಾಮೀಣ ಕೃಷಿ ಮಾರುಕಟ್ಟೆಗಳ ನಿರ್ಮಾಣ ಹಾಗೂ ಅಭಿವೃದ್ಧಿ. ನರೇಗಾ ಮೂಲಕ ಇದಕ್ಕೆ ಅಗತ್ಯ ಮೂಲಸೌಕರ್ಯ

# ಬಿದಿರು ಉದ್ಯಮಕ್ಕೆ ಚೈತನ್ಯ ನೀಡಲು ರಾಷ್ಟ್ರೀಯ ಬಿದಿರು ಅಭಿಯಾನಕ್ಕೆ ಚಾಲನೆ. ಇದಕ್ಕೆ 1,290 ಕೋಟಿ ರೂ. ಮೀಸಲು

# ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ ಮೂಲಕ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು 16,000 ಕೋಟಿ ರೂ.

# ಗ್ರಾಮಾಂತರ ಇ- ಬಜಾರ್ ನಿರ್ವಿುಸಲು ಯೋಜನೆ

ಗ್ರಾಮೀಣ ಜನ ಹಾಗೂ ರೈತರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮುಂಗಡಪತ್ರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಭರವಸೆಗೂ ಬಜೆಟ್​ನಲ್ಲಿರುವ ಅಂಶಗಳಿಗೂ ತಾಳೆಯೇ ಆಗುತ್ತಿಲ್ಲ. ಸರ್ಕಾರದ ಅಂದಾಜನ್ನೂ ಮೀರಿ ಗ್ರಾಮೀಣ ಜನ, ರೈತರು ಘೋರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಮರ್ಪಕ ಹಣ ಮೀಸಲಿಟ್ಟಿಲ್ಲ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಅನುಕೂಲಕರ ರೀತಿಯಲ್ಲಿ ಬಜೆಟ್ ರೂಪಿಸಲಾಗಿದೆ. ಸಾಲ ನೀಡಿಕೆ ಮೂಲಕ ಕೃಷಿ ಚಟುವಟಿಕೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಪನಗರ ರೈಲ್ವೆ ಯೋಜನೆ ಘೋಷಣೆಯಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲಿದೆ. ಬಜೆಟ್​ನಲ್ಲಿ ಕರ್ನಾಟಕದ ಹೆಸರನ್ನು ಪ್ರಸ್ತಾಪಿಸಿರುವುದು ಚುನಾವಣಾ ಗಿಮಿಕ್ ಎಂದೇ ಹೇಳಬಹುದು.

| ಕೆ.ರವಿ ಎಫ್​ಕೆಸಿಸಿಐ ಅಧ್ಯಕ್ಷ

ಬಜೆಟ್​ನಲ್ಲಿ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಘೋಷಿಸಿರುವುದು ಉತ್ತಮ ಬೆಳವಣಿಗೆ. ಆರೋಗ್ಯ ಕ್ಷೇತ್ರ ಸುಧಾರಣೆಗೆ ಹೊಸ ಯೋಜನೆಗಳ ಘೋಷಿಸಿರುವುದು ಶ್ಲಾಘನೀಯ. ಬೆಂಬಲ ಬೆಲೆ ನಿಗದಿ ಮಾಡುವ ವಿಚಾರ ಪ್ರಸ್ತಾಪಿಸಲಾಗಿದೆ. ರೈತರು ಬೆಳೆಯುವ ಬೆಳೆಗೆ ತಕ್ಕಂತೆ ಬೆಲೆ ಸಿಗಲಿದೆ. ಒಟ್ಟಾರೆ ಕೇಂದ್ರ ಬಜೆಟ್ ಸಮತೋಲನದಿಂದ ಕೂಡಿದೆ.

| ಡಾ.ಎಂ.ವಿ.ನಾಡಕರ್ಣಿ ಆರ್ಥಿಕ ತಜ್ಞ

ಜನಸಾಮಾನ್ಯರ ಜೀವನ ಬದಲಿಸುವ ಬಜೆಟ್ ಇದು. ರೈತರ ಆದಾಯ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಉತ್ತಮ ಕ್ರಮ ಕೈಗೊಳ್ಳಲಾಗಿದೆ. 50 ಕೋಟಿ ಜನರಿಗೆ ಲಾಭ ತರುವ ಐದು ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ಯೋಜನೆ ವಿಶಿಷ್ಟವಾಗಿದೆ. ಬೆಂಗಳೂರಿಗೆ ಉಪನಗರ ರೈಲ್ವೆಗಾಗಿ ನಡೆಸಿದ್ದ ಹೋರಾಟದ ಫಲವಾಗಿ 116 ಕಿ.ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ಕೇಂದ್ರದ ಸಮ್ಮತಿ ಸ್ತುತ್ಯರ್ಹ.

| ಅನಂತಕುಮಾರ್ ಕೇಂದ್ರ ಸಚಿವ


ಜನಪರವಲ್ಲದ ಆಯವ್ಯಯ…

ಸಿದ್ದರಾಮಯ್ಯ ಸಿಎಂ

ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದ ಅಚ್ಛೇದಿನ್ ಇದುವರೆಗೆ ಬಂದಿಲ್ಲ. ಈ ಬಜೆಟ್​ನಲ್ಲೂ ಬರಲಿಲ್ಲ. ಮುಂದೆ ಬರುವುದೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ದೂರದರ್ಶಿತ್ವ ಹಾಗೂ ದೃಷ್ಟಿಕೋನ ಇಲ್ಲದ, ಜನಪರವಲ್ಲದ ಕೇವಲ ಭರವಸೆಗಳ ಕಣ್ಣುಕಟ್ಟಿನ ಮುಂಗಡಪತ್ರವನ್ನು ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಯವ್ಯಯ ತಯಾರಿಸಿ ಹೊಸ ಯೋಜನೆಗಳನ್ನು ಘೊಷಿಸಲಾಗಿದೆ. ಆದರೆ, ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಅನುದಾನ ನಿಗದಿ ಮಾಡಿಲ್ಲ.

ಸೂರು ಇಲ್ಲದ ಎಲ್ಲರಿಗೂ 2022ರ ವೇಳೆಗೆ ವಸತಿ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೊಷಣೆ ಮಾಡಿತ್ತು. ತನ್ನದೇ ಮಹತ್ವಾಕಾಂಕ್ಷೆಯ ವಸತಿ ಯೋಜನೆಗೆ ಮುಂಗಡಪತ್ರದಲ್ಲಿ ಹಣಕಾಸು ನಿಗದಿ ಮಾಡಿಲ್ಲ. ಇನ್ನು ಸೂರು ಹೇಗೆ ಕಲ್ಪಿಸುತ್ತಾರೆ?

ಕೃಷಿ ವಲಯದ ಬೆಳವಣಿಗೆಗಾಗಿ ಸ್ವಾಮಿನಾಥನ್ ವರದಿ ಜಾರಿಗೆ ತರುವುದಾಗಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿತ್ತು. ಈಗ ಅದನ್ನು ಘೊಷಣೆ ಮಾಡಿದ್ದಾರೆ. ಆದರೆ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಉತ್ಪಾದನೆ ವೆಚ್ಚ ಗಮನಿಸಿಲ್ಲ. ಇನ್ನು ರೈತರ ಸಾಲ ಮನ್ನಾ ನಿರೀಕ್ಷೆಯೂ ಹುಸಿಯಾಗಿದೆ. ಬಜೆಟ್​ನಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದು ಎಂಬ ಆಶಯ ಇತ್ತು. ಕೃಷಿಗೆ ನಮ್ಮ ಆದ್ಯತೆ ಎಂದು ಕೇಂದ್ರವೇ ಹೇಳಿತ್ತು.

ಆದರೆ ರಾಜ್ಯಗಳತ್ತ ಬೆರಳು ತೋರಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್​ಗಳ ಮೂಲಕ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ಗೋಜಿಗೆ ಹೋಗಿಲ್ಲ. ನುಡಿದಂತೆ ಕೃಷಿಗೂ ಆದ್ಯತೆ ಕೊಟ್ಟಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಅವರ ಹೇಳಿಕೆ ಪ್ರಕಾರ ನಾಲ್ಕು ವರ್ಷದಲ್ಲಿ ಎಂಟು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆ ಕುರಿತಾಗಿಯೂ ಮುಂಗಡಪತ್ರದಲ್ಲಿ ಯಾವುದೆ ಸ್ಪಷ್ಟತೆ ಇಲ್ಲ.

ರಾಜ್ಯಕ್ಕೆ ನಿರಾಸೆ: ಕೇಂದ್ರದ ಘೊಷಣೆ ಪ್ರಕಾರ ರಾಷ್ಟ್ರೀಯ ಆರೋಗ್ಯ ರಕ್ಷಣಾ ವಿಮೆ ಯೋಜನೆಯೂ ಜಾರಿಗೆ ಬಂದಿಲ್ಲ. ಒಂದು ಕುಟುಂಬಕ್ಕೆ ಒಂದು ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದರು. ಈಗ ಐದು ಲಕ್ಷ ಎಂದಿದ್ದಾರೆ. ಇದೂ ಕನ್ನಡಿಯೊಳಗಿನ ಗಂಟು. ಏಕೆಂದರೆ ಕಳೆದ ವರ್ಷದ ಯೋಜನೆಯೇ ಜಾರಿಗೆ ಬಂದಿಲ್ಲ. ಈಗ ಘೊಷಣೆ ಮಾಡಿರುವುದಕ್ಕೂ ಅನುದಾನ ನಿಗದಿ ಮಾಡಿಲ್ಲ.

ಕಚ್ಛಾ ತೈಲ ದರ ಬ್ಯಾರಲ್​ಗೆ 110 ಡಾಲರ್ ಇದ್ದದ್ದು ಈಗ 43 ಡಾಲರ್​ಗೆ ಇಳಿದಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕಿತ್ತು. ಮೂರು ತಿಂಗಳಲ್ಲಿ ದರ 10 ರೂ. ಹೆಚ್ಚಾಗಿದೆ. ಉಳಿತಾಯವಾದ ಸಬ್ಸಿಡಿಯನ್ನು ಗ್ರಾಹಕರಿಗೆ ಸ್ವಲ್ಪವಾದರೂ ವರ್ಗಾವಣೆ ಮಾಡಬಹುದಾಗಿತ್ತು. ಆ ಕೆಲಸವೂ ಆಗಿಲ್ಲ.

ಕೆಲ ತೆರಿಗೆಗಳನ್ನು ಏರಿಕೆ ಮಾಡಿ ಕಾಪೋರೇಟ್ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಎಂಬುದು ಇದರಿಂದ ಮತ್ತೆ ಸಾಬೀತಾಗಿದೆ. ನೋಟು ಅಮಾನ್ಯದ ನಿರ್ಧಾರವೂ ಬಂಡವಾಳಶಾಹಿಗಳ ಪರವಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು.

ಪುಂಗಿ ಗಿರಾಕಿಗಳು: 3 ಲೋಕಸಭಾ ಕ್ಷೇತ್ರಕ್ಕೆ ಒಂದ ರಂತೆ ಮೆಡಿಕಲ್ ಕಾಲೇಜು ತೆರೆಯುವುದಾಗಿ ಹೇಳಿದ್ದಾರೆ. ಆದರೆ, ನಾವು ಜಿಲ್ಲೆಗೊಂದರಂತೆ ಕಾಲೇಜು ಮಾಡಲು ಮುಂದಾಗಿದ್ದೇವೆ. ಐದು ವರ್ಷ ದಲ್ಲಿ ಬಿಜೆಪಿಯವರು ಒಂದೇ ಒಂದು ಕಾಲೇಜು ತೆರೆಯಲಿಲ್ಲ. ಸಿಎಂಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಮೆಡಿಕಲ್ ಕಾಲೇಜುಗಳ ಬಗ್ಗೆ ಗಮನ ಹರಿಸಲಿಲ್ಲ. ಬಿಜೆಪಿಯವರು ಕೇವಲ ಪುಂಗಿ ಗಿರಾಕಿಗಳು. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಸೋಲುವುದು ಗ್ಯಾರಂಟಿ ಎಂಬುದು ಮನವರಿಕೆ ಆಗಿರುವುದರಿಂದಲೇ ಕರ್ನಾಟಕಕ್ಕೆ ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ. ಇದು ಜನಪರವಲ್ಲದ, ಬೆಳವಣಿಗೆಗೆ ಪೂರಕವಲ್ಲದ, ದೂರದರ್ಶಿತ್ವ ಇಲ್ಲದ ಬಜೆಟ್.

‘ಉಪನಗರ ರೈಲಿಗೆ’ ಸ್ವಾಗತ

ಬೆಂಗಳೂರು ಉಪನಗರ ರೈಲು ವ್ಯವಸ್ಥೆ ಬಗ್ಗೆ ಹೇಳಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಆದರೆ, ಈ ಯೋಜನೆಯ ವೆಚ್ಚದಲ್ಲಿ ತಲಾ ಶೇ.20 ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸಬೇಕು. ಉಳಿದ ಶೇ.60 ಸಾಲ ಮಾಡಬೇಕು. ಅದರ ಹೊರೆ ರಾಜ್ಯದ ಮೇಲೆ ಬೀಳುತ್ತದೆ. ಕೇಂದ್ರವೇ ಪೂರ್ತಿ ಹಣ ನೀಡಬೇಕಾಗಿತ್ತು. ಮೆಟ್ರೋ ರೈಲು ಕಾಮಗಾರಿ ಭರದಿಂದ ಸಾಗಿದೆ. ಜತೆಗೆ ಸಬ್ ಅರ್ಬನ್ ರೈಲು ವ್ಯವಸ್ಥೆ ಕುರಿತು ಬುಧವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ಈಕ್ವಿಟಿ ತೀರ್ಮಾನ ಮಾಡಿದ್ದೇವೆ. ಕೇಂದ್ರವೂ ಈಕ್ವಿಟಿ ಘೊಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ.


 ರೈತರತ್ತ ಜೇಟ್ಲಿ ಒಲವು: ಕೃಷಿ ಸಾಲ ಗುರಿ 11 ಸಾವಿರ ಕೋಟಿ ರೂ.ಗೆ ಏರಿಕೆ

 ಬಡ ಕುಟುಂಬಗಳಿಗೆ ಬಜೆಟ್ ಬಂಪರ್

# ಉಜ್ವಲ ಯೋಜನೆಯಡಿ 8 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ

# ಸೌಭಾಗ್ಯ ಯೋಜನೆಯಡಿ 4 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ

# 51 ಲಕ್ಷ ಹೊಸ ಮನೆಗಳ ನಿರ್ಮಾಣ

# ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ

# ಸ್ವಚ್ಛ ಭಾರತ ಅಭಿಯಾನದಡಿ 6 ಕೋಟಿಗೂ ಹೆಚ್ಚು ಶೌಚಗೃಹ ನಿರ್ವಣ. 2019ರೊಳಗೆ 2 ಕೋಟಿ ಶೌಚಗೃಹ ನಿರ್ಮಾಣ ಗುರಿ

# 2022ರೊಳಗೆ ಪ್ರತಿ ಬಡವನಿಗೊಂದು ಸೂರು

# ಗ್ರಾಮೀಣ ಬಡ ಜನರ ಜೀವನಾಂಶಕ್ಕೆ 2018-19ನೇ ಸಾಲಿಗೆ -ಠಿ;14 ಸಾವಿರ ಕೋಟಿಗೂ ಹೆಚ್ಚು ವೆಚ್ಚ

ಉದ್ಯಮಿಗಳಿಗೆ ನಮೋ ಸರ್ಕಾರ ವರ

# ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾದರೂ, ಉದ್ಯಮಗಳ ಅಭಿವೃದ್ಧಿಗೆ ಹಲವು ತೆರಿಗೆ ಉತ್ತೇಜನ ಕ್ರಮ ಘೋಷಿಸಲಾಗಿದೆ.

# 250 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳ ಕಾಪೋರೇಟ್ ತೆರಿಗೆಯಲ್ಲಿ ಶೇ.25 ಕಡಿತಕ್ಕೆ ಪ್ರಸ್ತಾವ ಥಿಕೃಷಿ ಉತ್ಪನ್ನ ಕಂಪನಿಗಳಿಗೆ ಶೇ.100ರ ತೆರಿಗೆ ವಿನಾಯಿತಿ

# ಸಹಕಾರಿ ಸಂಘಗಳಿಗೆ ಶೇ.100 ತೆರಿಗೆ ವಿನಾಯಿತಿ

# ವೈದ್ಯಕೀಯ ವೆಚ್ಚ ಮತ್ತು ಸಾರಿಗೆ ಭತ್ಯೆ ತೆರಿಗೆ ವಿನಾಯಿತಿ 40 ಸಾವಿರ ರೂ.ಗೆ ಹೆಚ್ಚಳ

# ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮಿತಿ 10 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಹೆಚ್ಚಳ

# ಕೃಷಿ ಉತ್ಪನ್ನ ಸಂಸ್ಥೆಗಳಿಗೆ ಮೊದಲ ಐದು ವರ್ಷ ಶೇ.100 ತೆರಿಗೆ ವಿನಾಯಿತಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಜಿಗಿತ

 

# ಕೃತಕ ಬುದ್ಧಿಮತ್ತೆಯ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವಲಯವನ್ನು ನಿರ್ದೇಶಿಸಲು ರಾಷ್ಟ್ರೀಯ ಕಾರ್ಯಸೂಚಿ ರಚಿಸಲಿರುವ ನೀತಿ ಆಯೋಗ

# ಯಂತ್ರೋಪಕರಣ, ರೋಬಾಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಸರ್ಕಾರದಿಂದ ಬೆಂಬಲ

# ಸೆಂಟರ್ ಆಫ್ ಎಕ್ಸಲೆನ್ಸ್ ಸಹಯೋಗದಲ್ಲಿ ಸೈಬರ್ ಭದ್ರತೆಗೆ ಕ್ರಮ

# ದೂರಸಂಪರ್ಕ ಕ್ಷೇತ್ರದ ಸುಧಾರಣೆಗೆ 10 ಸಾವಿರ ಕೋಟಿ ರೂ. ಮೀಸಲು

# 2019ರೊಳಗೆ 2.5 ಲಕ್ಷ ಗ್ರಾಮಪಂಚಾಯಿತಿಗೆ ಭಾರತ್​ನೆಟ್ ಪ್ರಾಜೆಕ್ಟ್ ಗುರಿ

# 5ಜಿ ಅಭಿವೃದ್ಧಿಗೆ ಚೆನ್ನೈನ ಐಐಟಿಯೊಂದಿಗೆ ಸೇರಿ 5ಜಿ ಕೇಂದ್ರಗಳ ಸ್ಥಾಪಿಸಲಿರುವ ಸರ್ಕಾರ

# ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ -ಠಿ;3,073 ಕೋಟಿ ಮೀಸಲು

# ಬ್ಲಾಕ್ ಚೈನ್ ಬಳಕೆಯ ತಂತ್ರಜ್ಞಾನ ಅನ್ವೇಷಿಸಲಿರುವ ಸರ್ಕಾರ

 ಬಡವರಿಗೆ ಆರೋಗ್ಯ ಭಾಗ್ಯ

# ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ಮಿತಿ 40 ಸಾವಿರ ರೂ.ಗೆ ಹೆಚ್ಚಳ.

# ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ಘೋಷಣೆ. 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ಸೌಲಭ್ಯ

# ಕ್ಷಯ ರೋಗಿಗಳಿಗೆ ಆಯುಷ್ಮಾನ್ ಯೋಜನೆ. ಪೌಷ್ಟಿಕಾಂಶ ಒದಗಿಸಲು 600 ಕೋಟಿ ರೂ. ಮೀಸಲು

# ಜಿಲ್ಲಾಸ್ಪತ್ರೆಗಳ ನವೀಕರಣ.

# ಪ್ರತಿ ಮೂರು ಸಂಸದೀಯ ಕ್ಷೇತ್ರಕ್ಕೆ ಒಂದು ವೈದ್ಯಕೀಯ ಕಾಲೇಜು

# ಹಿರಿಯ ನಾಗರಿಕರಿಗೆ ವೈದ್ಯಕೀಯ ವಿಮಾ ಪ್ರೀಮಿಯಂ ಅಡಿ 50 ಸಾವಿರ ರೂ. ವಿನಾಯಿತಿ

# 1.5 ಲಕ್ಷ ಆರೋಗ್ಯ ಕೇಂದ್ರಗಳಲ್ಲಿ ಸಮಗ್ರ ಆರೋಗ್ಯ ಸೇವೆ ಸೌಲಭ್ಯ

 

ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ

# ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾವಯವ ಕೃಷಿ ಪ್ರಗತಿಗೆ ಉತ್ತೇಜನ

# ದೇಶದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲವನ್ನು 2019ರ ಮಾರ್ಚ್ ವೇಳೆಗೆ 75 ಸಾವಿರ ರೂ.ಗೆ ಹೆಚ್ಚಳ

# ಆಯುಷ್ಮಾನ್ ಭಾರತ್ ಯೋಜನೆಯಡಿ ವಿಶೇಷವಾಗಿ ಮಹಿಳೆಯರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿ

# ಮಹಿಳೆಯರ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಕ್ಕೆ ವಿಸ್ತರಣೆ

# ಹೊಸದಾಗಿ 45,084 ಅಂಗನವಾಡಿ ಕೇಂದ್ರಗಳ ಆರಂಭ

# ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ 2,400 ಕೋಟಿ ರೂ. ಮೀಸಲು.

# ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಸಹಾಯವಾಣಿ


ಅಸ್ಥಿರ ಪ್ರದರ್ಶನ ತೋರಿದ ಸೆನ್ಸೆಕ್ಸ್

ಮುಂಬೈ: ಷೇರುಪೇಟೆ ಸಂವೇದಿ ಸೂಚ್ಯಂಕ ಬಜೆಟ್​ನ ಪ್ರಭಾವಕ್ಕೆ ಸಿಲುಕಿ ಗುರುವಾರ ಭಾರಿ ಅಸ್ಥಿರ ಪ್ರದರ್ಶನ ತೋರಿತು. ಅರುಣ್ ಜೇಟ್ಲಿ ಬಜೆಟ್ ಮಂಡಿಸಲು ಆರಂಭಿಸಿದಾಗ ಸಕಾರಾತ್ಮಕವಾಗಿ ವಹಿವಾಟು ನಡೆದು, ಗೂಳಿಯ ಓಟ ಭರ್ಜರಿಯಾಗೇ ಇತ್ತು. ಆದರೆ, ದೀರ್ಘಾವಧಿ ಬಂಡವಾಳ ಲಾಭಾಂಶದ ಮೇಲಿನ ತೆರಿಗೆ ಮರುಜಾರಿ ಕುರಿತು ಘೋಷಿಸುತ್ತಿರುವಂತೆ ಕುಸಿದ ಗೂಳಿ, ಕರಡಿ ಆಟಕ್ಕೆ ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಷೇರುಗಳ ಮಾರಾಟದ ಭರಾಟೆ ಹೆಚ್ಚಾಗಿ, ಸೆನ್ಸೆಕ್ಸ್ 460 ಅಂಕಗಳ ಕುಸಿತ ಕಂಡಿತು. ಆದರೆ, ದಿನದ ವಹಿವಾಟಿನ ಕೊನೆಯ ಕ್ಷಣಗಳಲ್ಲಿ ದೇಶಿಯ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ, ದಿನದ ಅಂತ್ಯದಲ್ಲಿ ಒಟ್ಟಾರೆ 58.36 ಅಂಕಗಳ ಇಳಿಕೆಯೊಂದಿಗೆ 35,906.66 ಅಂಕಗಳಿಗೆ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 10.80 ಅಂಕಗಳ ಇಳಿಕೆಯೊಂದಿಗೆ 11,016.90 ಅಂಕಗಳಿಗೆ ವಹಿವಾಟು ಅಂತ್ಯಗೊಳಿಸಿತು.

ರೂಪಾಯಿ ಮೌಲ್ಯ44 ಪೈಸೆ ಕುಸಿತ: ಬಜೆಟ್ ಮಂಡನೆ ಯಾಗುತ್ತಿದ್ದಂತೆ ತೀವ್ರ ಕುಸಿತ ಕಾಣಲಾರಂಭಿಸಿತು. ದಿನದ ಕೊನೆಯಲ್ಲಿ 44 ಪೈಸೆ ಕುಸಿತದೊಂದಿಗೆ ಒಂದು ಡಾಲರ್​ಗೆ 64.03ರಲ್ಲಿ ವಹಿವಾಟು ಕೊನೆಗೊಳಿಸಿತು.

ಚಿನ್ನದ ಬೆಲೆ 95 ರೂ. ಏರಿಕೆ

ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿ ದರಗಳನ್ನು ಬದಲಾವಣೆ ಮಾಡಿದ್ದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಚಿನ್ನದ ಬೆಲೆ ಕುಸಿದಿದೆ. ಆದರೂ, ಭಾರತದ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 95 ರೂ.ನಂತೆ ಏರಿಕೆ ದಾಖಲಿಸಿ 30,061 ರೂ. ತಲುಪಿತು.

Leave a Reply

Your email address will not be published. Required fields are marked *

Back To Top