ಕಳೆದ ವರ್ಷವಷ್ಟೇ ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿತ್ತು. ಚೀನಾ ಮತ್ತು ಅಮೆರಿಕದ ಜತೆಜತೆಗೆ ಭಾರತವೂ ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಮುಂಚೂಣಿಯಲ್ಲಿ ನಿಲ್ಲಲ್ಲಿದೆ ಎಂಬ ವಿಶ್ವಾಸ ಮೂಡಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿ ಆ ಲೆಕ್ಕಾಚಾರ ತಲೆಕೆಳಗಾಗಿದೆ. ಭಾರತದ ಆರ್ಥಿಕತೆ 42 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಫೋರ್ಬ್ಸ್ ಅಂದಾಜು ಮಾಡಿದೆ. ಗ್ರಾಹಕರ ವಿಶ್ವಾಸಮಟ್ಟ 2014 ರಿಂದ ಈಚೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಇದರ ಜತೆಗೆ ಉದ್ಯೋಗ ಕೊರತೆಯ ಮಟ್ಟ ಶೇ 6.1ಕ್ಕೆ ಏರಿಕೆಯಾಗಿದ್ದು , 45 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ಬಳಕೆದಾರರ ವಿಶ್ವಾಸ ಹೆಚ್ಚಿಸುವ ಜತೆಗೆ ಆರ್ಥಿಕ ಬೆಳವಣಿಗೆಯ ಪ್ರಮುಖ ಅಂಶವಾದ ಹೂಡಿಕೆಗೂ ವಿತ್ತ ಸಚಿವರು ಗಮನ ಕೇಂದ್ರೀಕರಿಸಬೇಕಿದೆ. ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ 6 ತಿಂಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಆದರೆ ನಿರೀಕ್ಷೆ ಬೆಟ್ಟದಷ್ಟಿದ್ದರೆ, ಸವಾಲು ಸಾಗರದಷ್ಟಿದೆ.
ಮೂಲಸೌಕರ್ಯವೇ ಬೆಳವಣಿಗೆಗೆ ಆಧಾರ
ವಿಶ್ವದ ಪ್ರಮುಖ ಆರ್ಥಿಕತೆಗಳು ಮೂಲಸೌಕರ್ಯದಲ್ಲಿನ ಹೂಡಿಕೆ ಬಳಸಿಕೊಂಡು ಕುಂಠಿತವಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಿವೆ. ಮೂಲಸೌಕರ್ಯಕ್ಕೆ ವೆಚ್ಚ ಮಾಡಿದಾಗ ಉದ್ಯೋಗ ಸೃಷ್ಟಿ, ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಳದ ಜತೆಗೆ ಹೂಡಿಕೆ ಆಕರ್ಷಣೆ ಕೂಡ ಸಾಧ್ಯವಾಗಲಿದೆ. ರಾಷ್ಟ್ರೀಯ ಮೂಲಸೌಕರ್ಯ ಯೋಜನೆ (ಎನ್ಐಪಿ) ಕಾರ್ಯಪಡೆಯು ಮೂಲಸೌಕರ್ಯ ವಲಯದಲ್ಲಿ 2020-25 ಅವಧಿಯಲ್ಲಿ 102 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಮಾಡಲು ನೀಲಿನಕ್ಷೆ ರೂಪಿಸಿದೆ. ಬಜೆಟ್ನಲ್ಲಿ ಯೋಜನೆಗೆ ಸರಿಯಾದ ಸಂಪನ್ಮೂಲದ ಜತೆಗೆ ರೂಪುರೇಷೆ ಸಿಗುವ ನಿರೀಕ್ಷೆಯಿದೆ. ಈಗಾಗಲೇ ರೇಲ್ವೆ ವಲಯದಲ್ಲಿ ಖಾಸಗೀಕರಣ, ವಿಮಾನ ನಿಲ್ದಾಣಗಳ ಉನ್ನತೀಕರಣ, ಹೊಸ ವಿಮಾನಗಳ ಖರೀದಿ, ಫಾಸ್ಟಾ್ಯಗ್ ಯೋಜನೆ ಸೇರಿದಂತೆ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕೆಲ ಕ್ರಮಗಳು ಅಭಿನಂದನಾರ್ಹ.
ವಾಹನ ಸಂಕಷ್ಟಕ್ಕೆ ಬೇಕು ಸೂಕ್ತ ಸ್ಪಂದನೆ
ವಾಹನ ಮಾರಾಟ ಉದ್ಯಮ 19 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕೆಲ ಕಂಪನಿಗಳು ಉತ್ಪಾದನೆ ತಗ್ಗಿಸುವ ಜತೆಗೆ ಉದ್ಯೋಗ ಕಡಿತಕ್ಕೂ ಮುಂದಾಗಿವೆ. 10 ವರ್ಷಗಳಿಗಿಂತ ಹಳೆಯದಾಗಿರುವ ಸುಸ್ಥಿತಿಯಲ್ಲಿ ಇಲ್ಲದ ವಾಹನಗಳು ರಸ್ತೆಗಿಳಿಯದಂತೆ ಕಟ್ಟಿನಿಟ್ಟಿನ ನಿಯಮ ಜಾರಿಗೆ ತರುವ ಜತೆಗೆ ಹಳೆಯ ವಾಹನ ಮಾರಾಟ ಮಾಡಿ ಹೊಸ ವಾಹನ ಖರೀದಿಸುವವರಿಗೆ ಕೆಲ ವಿನಾಯಿತಿಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತಿಸಬೇಕಿದೆ. ಇಲೆಕ್ಟ್ರಿಕ್ ವಾಹನ ಖರೀದಿ ಸಾಲಕ್ಕೆ ತೆರಿಗೆ ವಿನಾಯಿತಿ ಕೊಡುವ ಜತೆಗೆ ಸಬ್ಸಿಡಿ ಕಲ್ಪಿಸುವ ಸರ್ಕಾರದ ತೀರ್ವನಕ್ಕೆ ವಾಹನ ತಯಾರಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರಮುಖ ಕಂಪನಿಗಳು ಈಗಾಗಲೇ ಇಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ವಾಣಿಜ್ಯ ವಾಹನಗಳ ಬೇಡಿಕೆ ಹೆಚ್ಚಳ ಮಾಡುವುದಕ್ಕೂ ಸರ್ಕಾರ ಬಜೆಟ್ನಲ್ಲಿ ಒಂದಿಷ್ಟು ಕಾರ್ಯಕ್ರಮಗಳನ್ನು ಘೊಷಿಸಬೇಕಿದೆ.
ರಿಯಲ್ ಎಸ್ಟೇಟ್ನಲ್ಲಿ ನೀಗಬೇಕು ನಗದು ಕೊರತೆ
ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಬಹಳ ಪ್ರಮುಖವಾದ ರಿಯಲ್ ಎಸ್ಟೇಟ್ ವಲಯಕ್ಕೆ ಬಲ ತುಂಬಲು ಸರ್ಕಾರ ಗೃಹ ಸಾಲ ಪಡೆದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ, ಸೆಕ್ಷನ್ 80 ಇಇಎ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ಹೆಚ್ಚುವರಿಯಾಗಿ ಗೃಹ ಸಾಲದ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕತೆಗೆ ಚೇತರಿಕೆ ನೀಡಲು ಈ ವಲಯದಲ್ಲಿ ಅರ್ಧಕ್ಕೇ ನಿಂತುಹೋಗಿರುವ ಸುಮಾರು 1600 ಯೋಜನೆಗಳ ಮರುಚಾಲನೆಗಾಗಿ 25 ಸಾವಿರ ಕೋಟಿ ರೂಪಾಯಿಗಳ ನಿಧಿ ಮೀಸಲಿಟ್ಟಿದೆ. ಕೈಗೆಟುಕುವ ದರದ ಮನೆ ಖರೀದಿಸಲು ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ನೀಡುವ ಜತೆಗೆ ಎರಡನೇ ಮನೆ ಖರೀದಿಗೆ ತೆರಿಗೆ ವಿನಾಯಿತಿ ಅವಕಾಶಗಳನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆಯಿದೆ. ಖರೀದಿದಾರರು ಮತ್ತು ಬಿಲ್ಡರ್ಗಳಿಗೆ ಬ್ಯಾಂಕುಗಳಿಂದ ನಗದು ಪೂರೈಕೆ ಸಲೀಸಾಗುವಂತೆ ಮಾಡಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಗೆಯೇ ಕಡಿಮೆ ಆದಾಯವಿರುವ ಗ್ರಾಹಕರಿಗೆ, ಮನೆ ಖರೀದಿಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎನ್ನುವ ನಿರೀಕ್ಷೆಯಿದೆ.
ಕೈಗಾರಿಕೆ ಬಲಗೊಂಡರೆ ಆರ್ಥಿಕತೆಗೆ ಶಕ್ತಿ
ಭಾರತದ ಉದ್ಯೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ 40 ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಅರ್ಥವ್ಯವಸ್ಥೆಯ ಬೆನ್ನೆಲುಬು. ದೇಶದ ಜಿಡಿಪಿಗೆ ಶೇ 30 ರಷ್ಟು ಕೊಡುಗೆ ನೀಡುವ ಜತೆಗೆ ಈ ವಲಯ ಸುಮಾರು 11 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಸರ್ಕಾರ ಬಜೆಟ್ನಲ್ಲಿ ಏನು ಕೊಡುಗೆ ನೀಡಲಿದೆ ಎನ್ನುವುದಕ್ಕಿಂತ ಇರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಸದ್ಯ ಕೈಗಾರಿಕಾ ವಲಯ ಎದುರಿಸುತ್ತಿರುವ ಬಹಳ ದೊಡ್ಡ ಸಮಸ್ಯೆ ಸಾಲ ಸೌಲಭ್ಯದ್ದು. ಕೈಗಾರಿಕೆಗಳ ವಿಸ್ತರಣೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಇವತ್ತಿಗೂ ಸವಾಲಿನ ಕೆಲಸವಾಗಿದೆ. ದುಬಾರಿ ಬಡ್ಡಿ ದರಗಳಿಂದ ಸಣ್ಣ ಕೈಗಾರಿಕೆಗಳು ಸೊರಗುತ್ತಿವೆ. ಬಜೆಟ್ನಲ್ಲಿ ಹೆಚ್ಚು ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಕೈಗಾರಿಕೋದ್ಯಮಿಗಳಿದ್ದಾರೆ. ಇನ್ನು ತಮ್ಮ ವಿವಿಧ ಉತ್ಪನ್ನಗಳನ್ನು ಸರ್ಕಾರಿ ಸಂಸ್ಥೆಗಳಿಗೆ ಪೂರೈಕೆ ಮಾಡಿದಾಗ ಬಾಕಿ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಸಹ ಸಣ್ಣ ಉದ್ಯಮಗಳಿಗೆ ಭಾರವಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಕಾನೂನಿನ ರೂಪ ನೀಡಿದರೆ ಒಳಿತು.
ಬ್ಯಾಂಕಿಂಗ್ಗೆ ಮತ್ತಷ್ಟು ಬಲ
ಎನ್ಡಿಎ ಸರ್ಕಾರ ಬಂದ ನಂತರ ಬ್ಯಾಂಕಿಂಗ್ ವಲಯ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಜನಧನ ಯೋಜನೆ, ಡಿಜಿಟಲ್ ಪೇಮೆಂಟ್, ಇಂಟರ್ನೆಟ್ ಬ್ಯಾಂಕಿಂಗ್, ಭೀಮ್ ಯುಪಿಐ ಪೇಮೆಂಟ್, ಫಾಸ್ಟಾ್ಯಗ್, ಎಲ್ಪಿಜಿ ನೇರ ಸಬ್ಸಿಡಿ ವರ್ಗಾವಣೆ, ಮುದ್ರಾ ಯೋಜನೆ, ರೆಪೋ ದರ ಆಧರಿತ ಗೃಹ ಸಾಲ ಮಂಜೂರು ಸೇರಿ ಪ್ರಮುಖ ಯೋಜನೆಗಳು ಕಾರ್ಯಗತಗೊಂಡಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನಗೊಳಿಸಿ ಆಡಳಿತ ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಾಗಿ 70,000 ಕೋಟಿ ರೂ.ವನ್ನು ಸರ್ಕಾರಿ ಬ್ಯಾಂಕುಗಳಿಗೆ ನೀಡಲು ನಿರ್ಧರಿಸಲಾಗಿದೆ. ಸದ್ಯದ ಮಟ್ಟಿಗೆ ಎನ್ಬಿಎಫ್ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆಗಳು) ಮತ್ತು ಬ್ಯಾಂಕುಗಳಲ್ಲಿ ನಗದು ಕೊರತೆ ಇದೆ. ಸರಿಯಾದ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬ್ಯಾಂಕಿಂಗ್ ಮತ್ತು ಹೂಡಿಕೆ ಬಗ್ಗೆ ಜಾಗೃತಿ ಮೂಡಿಸಿ ಹಣಕಾಸು ಉತ್ಪನ್ನಗಳು ಜನರಿಗೆ ತಲುಪುವಂತೆ ಮಾಡಲು ಮುಂದಾಗಬೇಕಿದೆ.