Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸ್ಮಾರ್ಟ್​ಫೋನ್, ಚಿನ್ನ-ಬೆಳ್ಳಿ ದುಬಾರಿ

Friday, 02.02.2018, 3:05 AM       No Comments

ವಿದೇಶಿ ಮೊಬೈಲ್ ಫೋನ್​ಗಳು, ಟಿವಿಗಳು, ಚಿನ್ನ-ಬೆಳ್ಳಿ, ತಂಪು ಕನ್ನಡಕಗಳು ದುಬಾರಿಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡುವ ಉದ್ದೇಶದಿಂದ 2018-19ನೇ ಸಾಲಿನಲ್ಲಿ ಇವುಗಳ ಮೇಲಿನ ಸೀಮಾ ಸುಂಕವನ್ನು ಹೆಚ್ಚಿಸಿರುವುದು ಇದಕ್ಕೆ ಕಾರಣ. ಮೊಬೈಲ್​ಫೋನ್​ಗಳ ಮೇಲಿನ ಸೀಮಾ ಸುಂಕ ಶೇ.15ರಿಂದ ಶೇ.20ಕ್ಕೆ ಹೆಚ್ಚಳವಾಗಿದ್ದರೆ, ಶೇ.7.5-ಶೇ.10 ಇದ್ದ ಅವುಗಳ ಬಿಡಿಭಾಗಗಳು ಮತ್ತಿತರ ಪರಿಕರಗಳ ಮೇಲಿನ ಸುಂಕ ಶೇ.15ಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ ಸ್ಮಾರ್ಟ್ ಕೈಗಡಿಯಾರಗಳು, ಚಪ್ಪಲಿಗಳ ಮೇಲಿನ ಸೀಮಾ ಸುಂಕ ಶೇ.10ರಿಂದ ಶೇ.20ಕ್ಕೆ ಹೆಚ್ಚಾಗಿದೆ.

ಎಲ್​ಸಿಡಿ/ಎಲ್​ಇಡಿ/ಒಎಲ್​ಇಡಿ ಪ್ಯಾನೆಲ್​ಗಳು, ಟಿವಿಯ ಬಿಡಿಭಾಗಗಳ ಮೇಲಿನ ಆಮದು ಸುಂಕ ಶೇ.15 ಹೆಚ್ಚಾಗಿದೆ. ಇದರಿಂದಾಗಿ ಟಿವಿಗಳ ಬೆಲೆಯಲ್ಲೂ ಹೆಚ್ಚಳವಾಗಲಿದೆ. ಆಮದು ಮಾಡಿಕೊಳ್ಳಲಾಗುವ ಕಾರುಗಳು ಮತ್ತು ಮೋಟಾರ್​ಸೈಕಲ್​ಗಳು, ಸುಗಂಧ ದ್ರವ್ಯಗಳು, ಆಫ್ಟರ್​ಶೇವ್, ಡಿಯೋಡ್ರಂಟ್, ಸೇರಿ ಹಲವು ವೈಯಕ್ತಿಕ ಬಳಕೆಯ ವಸ್ತುಗಳ ಮೇಲಿನ ಸೀಮಾ ಸುಂಕ ಹೆಚ್ಚಾಗಿದ್ದು, ಅವುಗಳ ಬೆಲೆಯೂ ಹೆಚ್ಚಾಗಲಿದೆ. ಹಣ್ಣಿನ ರಸಗಳ ಮೇಲಿನ ಆಮದು ಸುಂಕ ಶೇ.30ರಿಂದ ಶೇ.50ಕ್ಕೆ ಹೆಚ್ಚಾಗಿದೆ.

ಬಸ್ ಮತ್ತು ಲಾರಿಗಳ ಟೈರ್​ಗಳು, ಆಯ್ದ ಪೀಠೋಪಕರಣಗಳು, ತಂಪು ಕನ್ನಡಕಗಳು, ಸಿಗರೇಟ್ ಲೈಟರ್​ಗಳು, ಗೊಂಬೆಗಳ ಮೇಲಿನ ಸೀಮಾ ಸುಂಕದಲ್ಲೂ ಹೆಚ್ಚಳವಾಗಿದೆ. ಆಮದು ಮಾಡಿಕೊಳ್ಳುವ ಕಚ್ಚಾ ಗೋಡಂಬಿ, ಸೋಲಾರ್ ಟೆಂಪರ್ಡ್ ಗ್ಲಾಸ್ ಮತ್ತಿತರ ಕಚ್ಚಾವಸ್ತುಗಳು, ಕೋಕ್ಲಿಯರ್ ಇಂಪ್ಲಾಟ್​ಗಳ ಮೇಲಿನ ಆಮದು ಸುಂಕ ಇಳಿಕೆಯಾಗಲಿದ್ದು, ಅವುಗಳ ಬೆಲೆ ಕಡಿಮೆಯಾಗಲಿದೆ.

ಕಚ್ಚಾ ಗೋಡಂಬಿ ಸಂಸ್ಕರಣೆ ಕೈಗಾರಿಕೆಗೆ ಒತ್ತು ನೀಡುವ ಉದ್ದೇಶದಿಂದ ಸೀಮಾ ಸುಂಕವನ್ನು ಶೇ.5ರಿಂದ ಶೇ.2.5ಕ್ಕೆ ಕಡಿಮೆ ಮಾಡುತ್ತಿರುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು. ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶ ಸೇರಿ ಒಟ್ಟು 14 ರಾಜ್ಯಗಳಲ್ಲಿ 4 ಸಾವಿರಕ್ಕು ಹೆಚ್ಚು ಗೋಡಂಬಿ ಸಂಸ್ಕರಣೆ ಕೈಗಾರಿಕೆಗಳು ಇವೆ. ಒಡಿಶಾ, ಪಶ್ಚಿಮಬಂಗಾಳ, ಗುಜರಾತ್ ಮತ್ತು ಪುದುಚೆರಿ ಸೇರಿ ಹಲವು ರಾಜ್ಯಗಳಲ್ಲಿ ಗೋಡಂಬಿಯನ್ನು ಬೆಳೆಯಲಾಗುತ್ತದೆ.

ಅಡುಗೆ ಎಣ್ಣೆ ಬೆಲೆ ಹೆಚ್ಚಳ: ಶೇಂಗಾ (ಕಡಲೇಕಾಯಿ) ಎಣ್ಣೆ, ಕುಸುಬೆ ಎಣ್ಣೆ ಒಳಗೊಂಡಂತೆ ಅಡುಗೆಗೆ ಬಳಸುವ ಎಣ್ಣೆಗಳ ಮೇಲಿನ ಸೀಮಾ ಸುಂಕವನ್ನು ಶೇ.12.5ರಿಂದ ಶೇ.30ಕ್ಕೆ ಹೆಚ್ಚಿಸಲಾಗಿದೆ. ಸಂಸ್ಕರಿಸಿದ ಎಣ್ಣೆಗಳ ಮೇಲಿನ ಸೀಮಾ ಸುಂಕ ಶೇ.20ರಿಂದ ಶೇ.35ಕ್ಕೆ ಹೆಚ್ಚಾಗಿದೆ. ಇದರಿಂದಾಗಿ ಅಡುಗೆ ಎಣ್ಣೆಗಳ ಬೆಲೆಗಳು ಗಗನಮುಖಿಯಾಗಲಿವೆ.

ಮನಗೆಲ್ಲುವ ತಂತ್ರ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 2019ರ ಲೋಕಸಭೆ ಚುನಾವಣೆ ಗೆಲ್ಲಬೇಕೆಂಬ ಸರ್ಕಾರದ ಮಹದಾಸೆಗೆ ಮುಂಗಡಪತ್ರದ ಮೂಲಕ ನೀರೆರೆದಿದ್ದಾರೆ. ಬಜೆಟ್ ಮೂಲಕವೇ ನಿರ್ದಿಷ್ಟ ಮತದಾರರಿಗೆ ಸಂದೇಶ ರವಾನಿಸಿದ್ದಾರೆ.

ಸೂಟು ಬೂಟಿನ ಸರ್ಕಾರ ಅಲ್ಲ

ದೀರ್ಘಾವಧಿ ಬಂಡವಾಳ ಲಾಭ ಪಡೆಯುವ ಕಂಪನಿಗಳಿಗೆ ತೆರಿಗೆ ವಿಧಿಸುವ ಮೂಲಕ ಪ್ರತಿಪಕ್ಷದ ‘ಸೂಟು-ಬೂಟಿನ ಸರ್ಕಾರ’ಆರೋಪ ಸುಳ್ಳಾಗಿಸಿದ್ದು, ನಮ್ಮದು ಶ್ರೀಮಂತರ ಪೋಷಿಸುವ ಸರ್ಕಾರ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ ನಮ್ಮದು ಬಡವರು ಹಾಗೂ ರೈತರ ಪರ ಸರ್ಕಾರ ಎಂಬ ಸಂದೇಶ ಸಾರಿದೆ.

ಮಧ್ಯಮವರ್ಗಕ್ಕೆ ಸೀಮಿತವಲ್ಲ

ಪ್ರಸಕ್ತ ವರ್ಷದಲ್ಲಿ ಛತ್ತೀಸ್​ಗಡ ಹಾಗೂ ಮದ್ಯಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ತನ್ನ ಮೇಲಿದ್ದ ‘ನಗರಕೇಂದ್ರಿತ’ ಎಂಬ ಆಪಾದನೆಗೆ ಉತ್ತರ ನೀಡಿದ್ದು, ಗ್ರಾಮೀಣ ಕೇಂದ್ರಿತವಾಗಿ ಬಜೆಟ್ ಮಂಡಿಸಿದೆ. ಹಾಗಾಗಿಯೇ ರೈತರಿಗೆ ಸೌಲಭ್ಯ ನೀಡಿದೆ.

ಅತಿ ಸಣ್ಣ ಉದ್ಯಮಿಗಳ ಪರ

ಜಿಎಸ್​ಟಿ ಜಾರಿಯಿಂದ ಸರ್ಕಾರ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ಆಕ್ರೋಶ ಎದುರಿಸಬೇಕಾಯಿತು. ಇದನ್ನು ಅರಿತ ಜೇಟ್ಲಿ, 250 ಕೋಟಿ ರೂ. ವಹಿವಾಟು ಇರುವ ಕಂಪನಿಗಳ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಿ ಉದ್ಯಮಿಗಳ ಮನಗೆಲ್ಲಲು ಪ್ರಯತ್ನಿಸಿದೆ.

ರೇಷ್ಮೆ ಜವಳಿ ಸುಂಕ ಹೆಚ್ಚಳ

ರೇಷ್ಮೆ ಜವಳಿ ಮೇಲಿನ ಸೀಮಾಸುಂಕವನ್ನು ಶೇ.20ಕ್ಕೆ ಹೆಚ್ಚಿಸಲಾಗಿದೆ. ದೇಶಿಯ ರೇಷ್ಮೆ ಕೈಗಾರಿಕೆಗಳ ಹಿತಾಸಕ್ತಿ ಕಾಯಲು ಈ ಕ್ರಮ ಅನಿವಾರ್ಯವೆಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೇಷ್ಮೆ ಜವಳಿ ಮೇಲೆ ಶೇ.10 ಸೀಮಾಸುಂಕ ವಿಧಿಸಲಾಗುತ್ತಿತ್ತು. ಭಾರತೀಯ ಜವಳಿ ಉದ್ಯಮಗಳ ಮಹಾಒಕ್ಕೂಟ ಹಣಕಾಸು ಸಚಿವರ ಈ ನಿರ್ಧಾರವನ್ನು ಸ್ವಾಗತಿಸಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಿ ದೇಶಿಯ ಮಾರುಕಟ್ಟೆಗೆ ಅನುಕೂಲವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದೆ. ಆದರೆ, ರೇಷ್ಮೆ ಉತ್ಪನ್ನಗಳ ರಫ್ತು ಇಳಿಕೆಯಾಗಿದ್ದು, ಸೀಮಾ ಸುಂಕ ಹೆಚ್ಚಳದಿಂದಾಗಿ ರಫ್ತು ಸಂಪೂರ್ಣವಾಗಿ ನಿಂತುಹೋಗುವ ಸಾಧ್ಯತೆ ಇದೆ ಎಂದು ಭಾರತೀಯ ರೇಷ್ಮೆ ರಫ್ತು ಉತ್ತೇಜನಾ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಚೀನಾದಿಂದ ರೇಷ್ಮೆ ಆಮದು ಹೆಚ್ಚಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಾಗದೆ ಪರಿತಪಿಸುತ್ತಿದ್ದೇವೆ ಎಂದಿದ್ದಾರೆ.

 ಏರಿಕೆ

#ಲಾರಿ ಮತ್ತು ಬಸ್ ಟೈರ್​ಗಳು

#ಕಣ್ಣಿನ ರಸಗಳು

#ಸುಗಂಧ ದ್ರವ್ಯಗಳು

#ಸನ್​ಸ್ಕ್ರೀನ್, ಸನ್​ಟ್ಯಾನ್, ವಜ್ರಗಳು

ಇಳಿಕೆ

# ಕಚ್ಚಾ ಗೋಡಂಬಿ

# ಸೋಲಾರ್ ಟೆಂಪರ್ಡ್ ಗ್ಲಾಸ್, ಸೌರವಿದ್ಯುತ್ ಪ್ಯಾನೆಲ್​ಗಳಿಗೆ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್

ರಾಜ್ಯಗಳ ಸಮ್ಮತಿ ಬೇಕು

ಹಣಕಾಸು ಸಚಿವ ಅರುಣ್ ಜೇಟ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಲೀ.ಗೆ 2 ರೂ.ನಂತೆ ಇಳಿಸಿದ್ದಾರೆ. ಹೆಚ್ಚುವರಿ ಅಬಕಾಶರಿ ಸುಂಕದಲ್ಲೂ ಲೀ.ಗೆ 6 ರೂ. ಕಡಿತಗೊಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್​ಗೆ 70 ಡಾಲರ್ ಇರುವುದರಿಂದ, ಅಬಕಾರಿ ಸುಂಕ ಕಡಿತಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಬಗ್ಗೆ ಪ್ರಧಾನಿ ಮೋದಿ ಮತ್ತು ಜೇಟ್ಲಿ ಒಲವು ಹೊಂದಿದ್ದಾರೆ. ಇದಕ್ಕಾಗಿ ಎಲ್ಲ ರಾಜ್ಯ ಸರ್ಕಾರಗಳ ಸಮ್ಮತಿಯನ್ನು ನಿರೀಕ್ಷಿಸುತ್ತಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು ಸಮ್ಮತಿಸಿದರೆ, ಅವೆರಡೂ ಜಿಎಸ್​ಟಿ ವ್ಯಾಪ್ತಿಗೆ ಬರಲಿವೆ.

ರಾಷ್ಟ್ರ ರಾಜಧಾನಿಯಲ್ಲಿ ಮೂಲ ಸೌಕರ್ಯ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲಿದೆ ಎಂಬ ಹಲವು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಯಾವುದೇ ಘೋಷಣೆ ಮಾಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮುಂದುವರಿಸಿದೆ. ರಾಜ್ಯಗಳಿಗೆ ಎನ್​ಡಿಎ ಸರ್ಕಾರ ಇದೇ ಧೋರಣೆ ಅನುಸರಿಸುತ್ತಿದ್ದು, ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ.

| ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ

ಯಶಸ್ವಿಯಾಗಿ ಮುಂಗಡಪತ್ರ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅಭಿನಂದನೆಗಳು. ವಿತ್ತೀಯ ಭಾಷಣದ ಎಲ್ಲ ಅಂಶ ಕೇಳಲಾಗಲಿಲ್ಲ. ಆದರೂ ಸರ್ಕಾರ ಕೃಷಿಗೆ ನಿಗದಿಪಡಿಸಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಶೇ.1.5 ಹೆಚ್ಚಿಸಿದ್ದು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಪಾರ ಹಣ ಮೀಸಲಿಟ್ಟು, 50 ಕೋಟಿ ಜನರಿಗೆ ಆರೋಗ್ಯ ಭದ್ರತೆ ನೀಡಿರುವುದು ಸ್ವಾಗತಾರ್ಹ.

| ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ

ಮುಂಗಡ ಪತ್ರದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ.1.5 ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಐತಿಹಾಸಿಕ. ಇದರಿಂದ ರೈತರ ಜೇಬು ಭರ್ತಿಯಾಗಿ, ನೆಮ್ಮದಿಯ ಜೀವನ ಸಾಗಿಸಲು ಸಹಕಾರಿಯಾಗಲಿದೆ. ಆದಾಗ್ಯೂ, ಮೂಲಸೌಕರ್ಯ, ಕೈಗಾರಿಕೆ ಸೇರಿ ಹಲವು ಕ್ಷೇತ್ರಗಳ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.

| ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ

ಇದೊಂದು ಐತಿಹಾಸಿಕ ಬಜೆಟ್. ಬಜೆಟ್​ನಲ್ಲಿ ಕೃಷಿಗೆ ವಿಶೇಷ ಪ್ರಾತಿನಿಧ್ಯ ನೀಡಿದ್ದೇವೆ. ಹಳ್ಳಿಯಿಂದಲೇ ರೈತರು ಸ್ವತಂತ್ರ ಮಂಡಿ ನಡೆಸಬಹುದು. ಎಪಿಎಂಸಿಯಿಂದ ನೇರ ಮಾರಾಟ ಮಾಡಬಹುದು. ಕೃಷಿ ಆದಾಯ ಡಬಲ್ ಮಾಡುವ ಗುರಿ ಹೊಂದಿದ್ದೇವೆ. ರೈತರು, ಕಾರ್ವಿುಕರು, ರೈತರು ಸೇರಿ ಎಲ್ಲ ವರ್ಗದ ಜನರಿಗೆ ವಿಶೇಷವಾದ ಆದ್ಯತೆ ನೀಡಿರುವ ಬಜೆಟ್ ಇದಾಗಿದೆ.

| ಸುರೇಶ ಅಂಗಡಿ ಸಂಸದ, ಬೆಳಗಾವಿ

ದೀರ್ಘಾವಧಿ ಬಂಡವಾಳ ಲಾಭಾಂಶಕ್ಕೆ ತೆರಿಗೆ ಬಿಸಿ

ಷೇರುಗಳ ಮಾರಾಟ ಮತ್ತು ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್​ಗಳ ಮೇಲೆ ದೀರ್ಘಾವಧಿ ಬಂಡವಾಳದ ಮೇಲಿನ ಲಾಭಾಂಶಕ್ಕೆ ತೆರಿಗೆ ವಿಧಿಸುವ ಪದ್ಧತಿಯನ್ನು ಮರುಜಾರಿಗೊಳಿಸಲಾಗಿದೆ. 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭಾಂಶ ಹೊಂದಿರುವ ಷೇರು ಮತ್ತು ಇಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್​ಗಳ ಮಾರಾಟದ ಮೇಲೆ ಶೇ.10 ದೀರ್ಘಾವಧಿ ಬಂಡವಾಳ ಲಾಭಾಂಶ ತೆರಿಗೆ ವಿಧಿಸಲಾಗುವುದು. ಪ್ರಸ್ತುತ ಒಂದು ವರ್ಷದ ನಂತರ ಷೇರು ಮಾರಾಟದ ಮೇಲಿನ ಲಾಭಾಂಶಗಳಿಗೆ ದೀರ್ಘಾವಧಿ ಬಂಡವಾಳ ಲಾಭಾಂಶದ ವಿನಾಯಿತಿ ಇತ್ತು. 12 ತಿಂಗಳೊಳಗಿನ ಷೇರುಗಳ ಮಾರಾಟದ ಮೇಲಿನ ಅಲ್ಪಕಾಲೀನ ಬಂಡವಾಳ ಲಾಭಾಂಶದ ಮೇಲೆ ಶೇ.15 ತೆರಿಗೆ ಮುಂದುವರಿಯಲಿದೆ ಎಂದರು. 2018ರ ಜ.31ರವರೆಗಿನ ವಹಿವಾಟಿನ ಮೇಲೆ ದೀರ್ಘಾವಧಿ ಬಂಡವಾಳ ಲಾಭಾಂಶ ತೆರಿಗೆ ಅನ್ವಯವಾಗುವುದಿಲ್ಲ. ಆದರೆ, ಫೆ.1ರಿಂದ ಮಾಡುವ ಎಲ್ಲ ವಹಿವಾಟಿಗೂ ತೆರಿಗೆ ಅನ್ವಯವಾಗುತ್ತದೆ. ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್​ಗಳಿಗೆ ಹಂಚಲಾಗುವ ಸಮಾನ ಲಾಭಾಂಶದ ಮೇಲೂ ಶೇ.10 ತೆರಿಗೆ ವಿಧಿಸಲಾಗುವುದು. ಷೇರು, ಬಾಂಡ್, ಡಿಬೆಂಚರ್ಸ್, ಡಿರೈವೇಟಿವ್ಸ್ ಮತ್ತು ಷೇರು ಹಾಗೂ ಈಕ್ವಿಟಿ ಮ್ಯೂಚುಯಲ್ ಫಂಡ್​ಗಳ ಬಡ್ಡಿ ಮೇಲೆ ಹಾಲಿ ವಿಧಿಸಲಾಗುತ್ತಿರುವ ಷೇರು ವಹಿವಾಟು ತೆರಿಗೆಯ

(ಎಸ್​ಟಿಟಿ) ಜತೆಗೆ ಈ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ ಎಂದರು.

 

ಕಾರ್ಪೆರೇಟ್ ತೆರಿಗೆ ವಿಸ್ತರಣೆ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಾರ್ಪೆರೇಟ್ ತೆರಿಗೆಯ ವಹಿವಾಟಿನ ಮಿತಿ ಏರಿಕೆ ಮಾಡಿದೆ. ಹಿಂದಿನ ಬಜೆಟ್​ನಲ್ಲಿ ವಾರ್ಷಿಕ 50 ಕೋಟಿ ವ್ಯವಹಾರ ಹೊಂದಿರುವ ಉದ್ಯಮಕ್ಕೆ ಕಾರ್ಪೆರೇಟ್ ತೆರಿಗೆ ಪ್ರಮಾಣವನ್ನು ಶೇ.30ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಈ ವಾರ್ಷಿಕ ವ್ಯವಹಾರ ಮಿತಿಯನ್ನು 250 ಕೋಟಿ ರೂಗಳಿಗೆ ಏರಿಸಲಾಗಿದ್ದು, ತೆರಿಗೆ ಪಾವತಿಸುವ ಶೇ.99ರಷ್ಟು ಉದ್ಯಮಕ್ಕೆ ಇದರಿಂದ ಲಾಭವಾಗಲಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 7 ಸಾವಿರ ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ. ಹಣಕಾಸು ಇಲಾಖೆ ಮಾಹಿತಿ ಪ್ರಕಾರ 250 ಕೋಟಿ ರೂಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಶೇ.1ರಷ್ಟು ಕಂಪನಿಗಳ ಸಂಖ್ಯೆ ಸುಮಾರು 7 ಸಾವಿರದಷ್ಟಿದ್ದು, ಇವುಗಳು ಶೇ.30ರ ಕಾರ್ಪೆರೇಟ್ ತೆರಿಗೆ ವ್ಯಾಪ್ತಿಯಲ್ಲೇ ಉಳಿಯಲಿವೆ. ಮುಂದಿನ ಬಜೆಟ್​ನಲ್ಲಿ ಇದನ್ನು ಕೂಡ ಪರಿಷ್ಕರಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ.

 

 ಹಿರಿಯ ನಾಗರಿಕರಿಗೆ ಜೇಟ್ಲಿ ನಮೋಸ್ಕಾರ…

ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರು ನೆಮ್ಮದಿ ಹಾಗೂ ಆರಾಮದಾಯಕ ಬದುಕು ಸಾಗಿಸಲು ಅನುಕೂಲ ಮಾಡಿಕೊಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್​ನಲ್ಲಿ ಆದ್ಯತೆ ನೀಡಿದ್ದಾರೆ. ಹಿರಿಯ ನಾಗರಿಕರು ಪಡೆಯುವ ನಿಶ್ಚಿತ ಠೇವಣಿಗಳ ಬಡ್ಡಿ ಆದಾಯದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಿದ್ದಾರೆ. ಜತೆಗೆ, ಅವರು ಮತ್ತು ಅತಿ ಹಿರಿಯ ನಾಗರಿಕರು ಪಾವತಿಸುವ ಆರೋಗ್ಯವಿಮೆ ಹಣ ಮತ್ತು ಚಿಕಿತ್ಸೆಗೆ ಮಾಡುವ ವೆಚ್ಚದ ಮೇಲಿನ ಆದಾಯ ತೆರಿಗೆ ಮಿತಿಯಲ್ಲೂ ಏರಿಕೆ ಮಾಡಿದ್ದಾರೆ. ನಿವೃತ್ತಿ ಜೀವನ ಸಾಗಿಸುತ್ತಿರುವ ಹಿರಿಯ ನಾಗರಿಕರು ತಮ್ಮ ಗಳಿಕೆಯನ್ನು ಬ್ಯಾಂಕ್ ಅಥವಾ ಅಂಚೆಕಚೇರಿಯ ನಿಶ್ಚಿತ ಠೇವಣಿ ಯೋಜನೆಯಲ್ಲಿ ತೊಡಗಿಸಿ, ಅದರಿಂದ ಬರುವ ಬಡ್ಡಿ ಆದಾಯದಲ್ಲಿ ಜೀವನ ನಡೆಸುತ್ತಾರೆ. ಈ ರೀತಿಯ 10 ಸಾವಿರ ರೂ.ವರೆಗಿನ ಆದಾಯಕ್ಕೆ ಇದುವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. 2018-19ನೇ ಸಾಲಿನಲ್ಲಿ ಬಡ್ಡಿ ಆದಾಯದ ಮೇಲಿನ ತೆರಿಗೆ ವಿನಾಯಿತಿಯ ಮಿತಿಯನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಿರುವುದರಿಂದ, ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಜತೆಗೆ, ಆದಾಯ ತೆರಿಗೆ ಕಾಯ್ದೆಯ 194ಎ ವಿಧಿ ಅನ್ವಯ ಮೂಲದಲ್ಲೇ ತೆರಿಗೆ ಕಡಿತಗೊಳಿಸುವ ಅವಶ್ಯಕತೆ ಇರುವುದಿಲ್ಲ. ಈ ಸೌಲಭ್ಯವು ಹಿರಿಯ ನಾಗರಿಕರ ಸಂಚಿತ ಠೇವಣಿಗೂ ಅನ್ವಯವಾಗುತ್ತದೆ.

ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಯ ವೆಚ್ಚದ ವಿನಾಯಿತಿಯ ಮಿತಿಯಲ್ಲೂ ಹೆಚ್ಚಳ: ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಚಿಕಿತ್ಸೆಗಾಗಿ ಮಾಡುವ ವೆಚ್ಚದ ಮೇಲಿನ ಆದಾಯ ತೆರಿಗೆ ವಿನಾಯಿತಿಯನ್ನು 60 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಅಂತೆಯೇ ಅತಿ ಹಿರಿಯ ನಾಗರಿಕರ ಚಿಕಿತ್ಸಾ ವೆಚ್ಚದ ಮೇಲಿನ 80ಡಿಡಿಬಿಯಲ್ಲಿ ತೆರಿಗೆ ವಿನಾಯಿತಿಯನ್ನು 80 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ್ಝರಿಯ ನಾಗರಿಕರಿಗೆ 4 ಸಾವಿರ ಕೋಟಿ ರೂ.ವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿಯ ಸೌಲಭ್ಯ ್ಝಾರತೀಯ ಜೀವ ವಿಮಾ ನಿಗಮದ ವತಿಯಿಂದ ನೀಡಲಾಗುವ ಶೇ.8 ಲಾಭಾಂಶದ ಪ್ರಧಾನಮಂತ್ರಿ ವಯೋ ವಂದನ ಯೋಜನೆ 2020ರ ಮಾರ್ಚ್​ವರೆಗೆ ವಿಸ್ತರಣೆ ್ಝ ಯೋಜನೆಯಲ್ಲಿನ ಹೂಡಿಕೆಯ ಮಿತಿ 7.5 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಳ

ಆರೋಗ್ಯ ವಿಮೆಯಲ್ಲೂ ವಿನಾಯ್ತಿ

ಹಿರಿಯ ನಾಗರಿಕರು ಪಾವತಿಸುವ ಆರೋಗ್ಯವಿಮೆ ಮತ್ತು ಚಿಕಿತ್ಸೆಗಾಗಿ ಮಾಡುವ ವೆಚ್ಚದ ಮೇಲಿನ 80ಡಿ ಅಡಿಯ ವಿನಾಯ್ತಿ ಮಿತಿಯನ್ನು 30 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ, ಹಿರಿಯ ನಾಗರಿಕರು ಆರೋಗ್ಯವಿಮೆಗೆ/ಚಿಕಿತ್ಸೆಗಾಗಿ ಮಾಡುವ 50 ಸಾವಿರ ರೂ.ವರೆಗಿನ ವೆಚ್ಚದ ಮೇಲೆ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.


ನವೋದ್ಯಮಗಳಿಗೆ ಉತ್ತೇಜನಕಾರಿ

| ಎನ್. ರವಿಶಂಕರ್ ಸಂವಹನ ತಜ್ಞ

ಈ ಬಾರಿಯ ಕೇಂದ್ರ ಬಜೆಟ್ ನವೋದ್ಯಮಿಗಳಿಗೆ ಮತ್ತು ವೆಂಚರ್ ಕ್ಯಾಪಿಟಲಿಸ್ಟ್​ಗಳಿಗೆ ಉತ್ತೇಜನಕಾರಿಯಾಗಿದೆ. ನವೋದ್ಯಮಗಳಿಗೆ ನೇರವಾಗಿ ಹಣ ಕೊಡುವ ಬದಲು, ಸರಿಯಾದ ಫಲಾನುಭವಿಗಳಿಗೆ ಹಣ ಸಿಗುವಂತೆ ಮಾಡಲು ನೀತಿ ನಿರೂಪಿಸುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದರಿಂದಾಗಿ ನವೋದ್ಯಮಿಗಳಿಗೆ ಪರೋಕ್ಷ ಉತ್ತೇಜನ ದೊರೆಯಲಿದ್ದು, ತಮ್ಮ ಶಕ್ತಿಸಾಮರ್ಥ್ಯವನ್ನು ಆಧರಿಸಿ, ಬಲವಾಗಿ ನಿಲ್ಲಲು ಅನುಕೂಲ ಮಾಡಿಕೊಡಲಿದೆ. ಸರ್ಕಾರ 2 ರಕ್ಷಣಾ ಕೈಗಾರಿಕಾ ಉತ್ಪಾದನಾ ಕಾರಿಡಾರ್ ನಿರ್ವಿುಸುವುದಾಗಿ ಹೇಳಿದೆ. ನವೋದ್ಯಮಿಗಳನ್ನು ಒಳಗೊಳಿಸಿಕೊಂಡೇ ಮಾಡಬೇಕಾಗುತ್ತದೆ. ಜತೆಗೆ, ರಕ್ಷಣಾ ಉತ್ಪಾದನೆ ಹೆಚ್ಚಳಕ್ಕೆ ಅತ್ಯಂತ ಸ್ನೇಹಮಯಿ ನೀತಿ ರೂಪಿಸಲಾಗುವುದು ಎಂದು ಹೇಳಲಾಗಿದೆ. ಜೇಟ್ಲಿಯವರು ಇದೇ ಮೊದಲ ಬಾರಿಗೆ ಮಷಿನ್ ಲರ್ನಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇಂಟರ್​ನೆಟ್ ಆಫ್ ಥಿಂಗ್ಸ್​ನಂತ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇವೆಲ್ಲಕ್ಕೂ ಡಿಜಿಟಲ್ ಇಂಡಿಯಾ, ಸ್ಟಾರ್ಟ್​ಅಪ್ ಇಂಡಿಯಾ ಅಡಿ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ನೀತಿ ಆಯೋಗ ಕೂಡ ಇದಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದ್ದಾರೆ. ಈ ಎಲ್ಲ ಅಂಶಗಳಿಂದಾಗಿ ಈ ಬಜೆಟ್ ಹೊಸ ಅನ್ವೇಷಣೆಗಳನ್ನು ಮಾಡಲು ನವೋದ್ಯಮಿಗಳಿಗೆ ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶಿಯಾಗಿ ನಿಲ್ಲಲಿದೆ. ಬಜೆಟ್​ನಲ್ಲಿ ಮೊದಲ ಬಾರಿಗೆ ವೆಂಚರ್ ಕ್ಯಾಪಿಟಲಿಸ್ಟ್ ಎಂಬ ಪದ ಬಳಕೆ ಮಾಡಲಾಗಿದೆ. ಆ ಮೂಲಕ ಬಂಡವಾಳ ಹೂಡುವ ಕಂಪನಿಗಳನ್ನು ಗುರುತಿಸಲಾಗಿದೆ. ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ಅನುವಾಗುವಂತೆ ಸ್ಟಾರ್ಟ್​ಅಪ್ ಇಂಡಿಯಾ ಅಡಿ ನೀತಿ ನಿರೂಪಿಸಲಾಗುತ್ತಿದೆ. ನವೋದ್ಯಮಗಳಿಗೆ ವಿದೇಶಿ ಹೂಡಿಕೆ ನೇರವಾಗಿ ಹರಿದುಬರುವಂತೆ ಮಾಡುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ. ಇದನ್ನು ಸುಗಮಗೊಳಿಸಲೆಂದೇ ಡೆಟ್ ಮತ್ತು ಈಕ್ವಿಟಿ ಗುಣಗಳನ್ನು ಹೊಂದಿರುವ ಹೈಬ್ರಿಡ್ ಮಾದರಿಯ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ನವೋದ್ಯಮಿಗಳ ಪಾಲಿಗೆ ಇದು ಉತ್ತೇಜನಕಾರಿ ಅಂಶ. ಭೌತಿಕ ಮತ್ತು ವರ್ಚುಯಲ್ ಪದ್ಧತಿಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಿಜಿಟಲ್ ಇಂಡಿಯಾ, ಸ್ಟಾರ್ಟ್​ಅಪ್ ಇಂಡಿಯಾ ಸೇರಿ ವಿವಿಧ ಇಲಾಖೆಗಳನ್ನು ಸಮಗ್ರಗೊಳಿಸಿ ರೋಬಾಟಿಕ್ಸ್, ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಕ್ವಾಂಟ್ ಕಮ್ಯುನಿಕೇಷನ್ ಸೇರಿ ವಿವಿಧ ಕಾರ್ಯಕ್ರಮಗಳಿಗಾಗಿ ನೀತಿ ನಿರೂಪಿಸಲಾಗುತ್ತಿದೆ. ಇವನ್ನು ಬಿಡಿಬಿಡಿಯಾಗಿ ಪರಿಗಣಿಸುತ್ತಿರುವುದು ದೂರದೃಷ್ಟಿಕೋನದ ಚಿಂತನೆ ಮಾಡಿರುವುದು ಸ್ಪಷ್ಟವಾಗುತ್ತದೆ.

ಮತ್ತೆ ಪಥಕ್ಕೆ ಬಂದ ಜಿಡಿಪಿ

ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಅನುಷ್ಠಾನದ ಬಳಿಕ ಕುಸಿತ ಕಂಡಿದ್ದ ಜಿಡಿಪಿ ಬೆಳವಣಿಗೆ ಚೇತರಿಕೆ ಕಾಣಿಸಿಕೊಳ್ಳುವ ವಿಶ್ವಾಸವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತೋರಿದ್ದಾರೆ. ಭಾರತದ ಜಿಡಿಪಿಯು ಮುಂದಿನ ಆರ್ಥಿಕ ವರ್ಷದಲ್ಲಿ ಶೇ.7.2ರಿಂದ ಶೇ.7.5ನ್ನು ತಲುಪುವ ನಿರೀಕ್ಷೆ ಮಾಡಲಾಗಿದೆ. ಐಎಂಎಫ್ ವರದಿ ಪ್ರಕಾರ ಜಿಡಿಪಿಯು ಶೇ.7.4ನ್ನು ತಲುಪುವ ಸಾಧ್ಯತೆಯಿದೆ. ಸಧ್ಯಕ್ಕೆ ಶೇ.6.3ರ ಬೆಳವಣಿಗೆ ದರವನ್ನು ಜಿಡಿಪಿ ಹೊಂದಿದೆ. ಉತ್ಪಾದನಾ ವಲಯದಲ್ಲಿನ ಚೇತರಿಕೆ ಹಾಗೂ ರಫ್ತು ಪ್ರಮಾಣ ಏರಿಕೆಯು ಜಿಡಿಪಿ ವೃದ್ಧಿಗೆ ಕಾರಣವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಉತ್ಪಾದನಾ ವಲಯದ ಬೆಳವಣಿಗೆ ಶೇ.8ನ್ನು ತಲುಪಿದ್ದು, ರಫ್ತು ಪ್ರಮಾಣ ಶೇ.15ನ್ನು ದಾಟುವ ಸಾಧ್ಯತೆಯಿದೆ. ಈ ಅಂದಾಜನ್ನು ಪಾರು ಮಾಡಿದರೆ ಭಾರತವು ಮತ್ತೆ ಶೇ.8ರ ಬೆಳವಣಿಗೆ ದರದಲ್ಲಿ ವಿಶ್ವದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರಾಸರಿ ಶೇ.7.5 ಬೆಳವಣಿಗೆ ದರವನ್ನು ದೇಶ ಕಂಡಿದೆ. ಸಧ್ಯ ಭಾರತವು 160 ಲಕ್ಷ ಕೋಟಿ ಆರ್ಥಿಕತೆ ಹೊಂದಿದ್ದು, ವಿಶ್ವದಲ್ಲೇ 7ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಶೀಘ್ರವೇ ಇದು 5ನೇ ಸ್ಥಾನ ತಲುಪುವ ನಿರೀಕ್ಷೆಯಿದೆ ಎಂದು ಜೇಟ್ಲಿ ಹೇಳಿದ್ದಾರೆ.

 

ವಿತ್ತೀಯ ಕೊರತೆ ಶೇ.3.3ಕ್ಕೆ?

ವಿತ್ತೀಯ ನಿರ್ವಹಣೆ ಸವಾಲನ್ನು ದಿಟ್ಟವಾಗಿ ಎದುರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಮುಂದಿನ ಆರ್ಥಿಕ ವರ್ಷಕ್ಕೆ ಶೇ.3.3ರ ವಿತ್ತೀಯ ಕೊರತೆಯೆ ಗುರಿ ಹಾಕಿಕೊಂಡಿದೆ. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಶೇ.4.4ರ ವಿತ್ತೀಯ ಕೊರತೆ ಇದ್ದಿದ್ದು, 2017-18ನೇ ಆರ್ಥಿಕ ವರ್ಷಕ್ಕೆ ಶೇ.3.5ಕ್ಕೆ ಇಳಿದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಶೇ.3.3ರನ್ನು ಸಾಧಿಸುವುದು ಕಷ್ಟವೇನಲ್ಲ ಎಂದು ಮೂಡಿ ಕೂಡ ಅಭಿಪ್ರಾಯಪಟ್ಟಿದೆ. ಈ ಮೂಲಕ ಕೇಂದ್ರ ಸರ್ಕಾರದ ಆಯವ್ಯಯದ ಅಂದಾಜನ್ನು ಮೂಡಿ ಕೂಡ ಸಮರ್ಥಿಸಿಕೊಂಡಂತಾಗಿದೆ. ಸದ್ಯಕ್ಕೆ 5.95 ಲಕ್ಷ ಕೋಟಿ ರೂಗಳ ವಿತ್ತೀಯ ಕೊರತೆಯನ್ನು ಭಾರತ ಹೊಂದಿದೆ. ಜೇಟ್ಲಿ ಪ್ರಕಾರ ಈ ಬಾರಿಯ ಜಿಎಸ್​ಟಿ ಸಂಗ್ರಹವು 11 ತಿಂಗಳಿಗೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆಯು ಶೇ.3.5ರಿಂದ ಇನ್ನಷ್ಟು ಕಳೆಗಿಳಿಯದಂತೆ ಮಾಡಿದೆ. ಆದರೆ ಆರ್ಥಿಕ ತಜ್ಞರು ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿತ್ತೀಯ ಕೊರತೆಯು ಶೇ.3.2ಕ್ಕೆ ಇಳಿಯಲಿದೆ ಎಂದು ಅಂದಾಜಿಸಿದ್ದಾರೆ. ಇವೆಲ್ಲ ಅಂಶಗಳನ್ನು ಪರಿಗಣಿಸಿ ಆಯವ್ಯವ ನಿರ್ವಹಣಾ ಸಮಿತಿಯ ಶಿಫಾರಸು ಒಪ್ಪಿಕೊಂಡು ವಿತ್ತೀಯ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ.

Leave a Reply

Your email address will not be published. Required fields are marked *

Back To Top