Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸಂಚಲನ ಮೂಡಿಸಿದ ಮೋದಿಕೇರ್

Friday, 02.02.2018, 3:05 AM       No Comments

ಆರೋಗ್ಯ ಕ್ಷೇತ್ರ ಬಲವರ್ಧನೆಯಾಗದೆ ದೇಶದ ಅಭಿವೃದ್ಧಿಗೆ ಅತಿ ದೊಡ್ಡ ಜನಸಂಖ್ಯೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಅರುಣ್ ಜೇಟ್ಲಿ, ಪ್ರಾಥಮಿಕ ಆರೋಗ್ಯಕ್ಕೆ ಒಂದು ಹಾಗೂ ದ್ವಿತೀಯ- ತೃತೀಯ ಚಿಕಿತ್ಸೆಗೆ ಮತ್ತೊಂದು ಫ್ಲಾಗ್​ಷಿಪ್ ಯೋಜನೆ ಘೋಷಿಸಿದ್ದಾರೆ. 50 ಕೋಟಿ ಜನರಿಗೆ ಆರೋಗ್ಯ ರಕ್ಷಣೆ ನೀಡಿಕೆ, ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಹಾಗೂ ಪ್ರತಿ ಮೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ವೈದ್ಯಕೀಯ ಕಾಲೇಜು ಘೋಷಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ಹಣ ನೀಡಲಾಗದೆ ಕೈಚೆಲ್ಲುವ ಇಲ್ಲವೇ ಸಾವಿಗೀಡಾಗುವ ಆರ್ಥಿಕ ದುರ್ಬಲರಿಗೆ ಕೇಂದ್ರ ಬಜೆಟ್ ಬಲ ನೀಡಿದೆ. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ರೂಪಿಸಿದ ಒಬಾಮ ಕೇರ್ ಮಾದರಿಯಲ್ಲಿ ವಿಶ್ವದಲ್ಲೆ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಸೇವಾ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ದೇಶದ 10 ಕೋಟಿ ಬಡ ಹಾಗೂ ತೊಂದರೆಯಲ್ಲಿರುವ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗಿನ ಆರೋಗ್ಯ ಸೇವೆ ಒದಗಿಸುವ ಫ್ಲಾಗ್​ಷಿಪ್ ಯೋಜನೆಯನ್ನು ಘೋಷಿಸಲಾಗಿದೆ. ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ಎರಡು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ರಾಷ್ಟ್ರೀಯ ಆರೋಗ್ಯ ರಕ್ಷಾ ಯೋಜನೆಯಲ್ಲಿ(ಎನ್​ಎಚ್​ಪಿಎಸ್) 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಸಿಗಲಿದ್ದು, ಸುಮಾರು 50 ಕೋಟಿ ಅಂದರೆ ಭಾರತದ ಶೇ.40 ಜನ ಫಲಾನುಭವಿಗಳಾಗಿದ್ದಾರೆ. ಇಲ್ಲಿಯವರೆಗೆ ವಿಶ್ವದ ಅತಿ ದೊಡ್ಡ ಆರೋಗ್ಯ ಸೇವಾ ಯೋಜನೆ ಎಂಬ ಹೆಗ್ಗಳಿಕೆ ಪಡೆದಿದ್ದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯನ್ನೂ (ಆರ್​ಎಸ್​ಬಿವೈ) ಇದು ಮೀರಿಸಲಿದೆ. ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆ ಅಂದರೆ ಶಸ್ತ್ರಚಿಕಿತ್ಸೆ, ತೀವ್ರನಿಗಾ ಘಟಕದಂತಹ ದುಬಾರಿ ಆರೋಗ್ಯ ಸೇವೆಗಳನ್ನೂ ಈ ಯೋಜನೆ ಒಳಗೊಳ್ಳಲಿದೆ. 2016ರಲ್ಲಿ ನೀತಿ ಆಯೋಗ ಸಲ್ಲಿಸಿದ್ದ ಆರ್ಥಿಕ ಸಮೀಕ್ಷೆಯಲ್ಲಿ, ಖಾಸಗಿ ಮತ್ತು ಸರ್ಕಾರಿ ಸೇವೆಗಳ ಶುಲ್ಕದಲ್ಲಿ ಭಾರಿ ವ್ಯತ್ಯಾಸ ಇರುವುದನ್ನು ಗುರುತಿಸಲಾಗಿತ್ತು. ಈ ಅಂತರ ಕಡಿಮೆ ಮಾಡಲು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿತ್ತು. ಯೋಜನೆಗೆ ಎಷ್ಟು ಹಣಕಾಸು ವೆಚ್ಚ ತಗಲುತ್ತದೆ? ಯಾವ ಮಾರ್ಗದಲ್ಲಿ ಭರಿಸಲಾಗುವುದು ಎಂದು ಸ್ಪಷ್ಟಪಡಿಸಿಲ್ಲ. ಆದರೆ, ಯೋಜನೆ ಸರಾಗವಾಗಿ ಜಾರಿಯಾಗಲು ಅಗತ್ಯ ಹಣ ಒದಗಿಸಲಾಗುತ್ತದೆ ಎಂಬ ಭರವಸೆಯನ್ನು ಜೇಟ್ಲಿ ನೀಡಿದ್ದಾರೆ. ಒಟ್ಟಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಕಳೆದ ವರ್ಷವಿದ್ದ 47,353 ಕೋಟಿ ರೂ. ಹೆಚ್ಚಿಸಿ 52,800 ಕೋಟಿ ರೂ. ನಿಗದಿಪಡಿಸಲಾಗಿದೆ.

ಅಂಗವಿಕಲರಿಗಾಗಿ ಸೌಲಭ್ಯ

ಅಂಗವಿಕಲರಿಗಾಗಿ 35 ವಿವಿಧ ಉಪಕರಣೆಗಳ ಖರೀದಿಗೆ 220 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನ 71,250 ಮಹಿಳೆಯರು ಸೇರಿ 2.85 ಲಕ್ಷ ಮಂದಿಗೆ ಉಪಯೋಗವಾಗಲಿದೆ. ಅಲ್ಲದೆ, ಕೌಶಲ ತರಬೇತಿ, ವಿವಿಧ ಮಾಧ್ಯಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಜತೆಗೆ ಅಂಗವಿಕಲರನ್ನು ಮುಖ್ಯವಾಹಿನಿಗೆ ಕರೆ ತರಲು ಹಲವು ಕಾರ್ಯಕ್ರಮಗಳಿಗಾಗಿ ಒಟ್ಟು 330 ಕೋಟಿ ರೂ. ನೀಡಲಾಗಿದೆ.

ವೇಗದಲ್ಲಿ ಗಂಗಾ ಶುದ್ಧಿ

ಗಂಗಾ ನದಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, 16,713 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ 187 ಯೋಜನೆಗಳಲ್ಲಿ 47 ಪೂರ್ಣಗೊಂಡಿದ್ದು, ಉಳಿದವು ಪ್ರಗತಿ ಹಂತದಲ್ಲಿವೆ. ಅಲ್ಲದೆ, ಗಂಗಾತೀರದ 4465 ಗ್ರಾಮಗಳು ಬಯಲು ಶೌಚಮುಕ್ತ ಎಂದು ಘೋಷಿಸಲ್ಪಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಗಂಗಾ ನದಿ ಸ್ವಚ್ಛತೆಗೆ ಒತ್ತು ಕೊಡುತ್ತಲೇ ಬಂದಿದ್ದು, ಇದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿರುವುದನ್ನು ಸ್ಮರಿಸಬಹುದು.

3 ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು

ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಲು ಪ್ರತಿ ಮೂರು ಲೋಕಸಭೆ ಕ್ಷೇತ್ರಕ್ಕೊಂದು ವೈದ್ಯಕೀಯ ಕಾಲೇಜು ಸ್ಥಾಪಿಸಲು ಜೇಟ್ಲಿ ಪ್ರಸ್ತಾಪಿಸಿದ್ದಾರೆ. ಮೊದಲ ಹಂತದಲ್ಲಿ ಸದ್ಯ ದೇಶದ 24 ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಉನ್ನತೀಕರಿಸಲಾಗುತ್ತದೆ. ಹಾಗೂ ಪ್ರತಿ ರಾಜ್ಯದಲ್ಲಿ ಕನಿಷ್ಠ ಒಂದಾದರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಘೊಷಣೆ ಮಾಡಿದ್ದಾರೆ. ಸರ್ಕಾರದಿಂದ ಸೇವೆ ಒದಗಿಸುವ ಜತೆಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಜತೆ ಸಹಭಾಗಿತ್ವಕ್ಕೂ ಮುಂದಾಗಿದ್ದು, ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್​ಆರ್) ವ್ಯಾಪ್ತಿಯಲ್ಲಿ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳು ದತ್ತು ಪಡೆಯಲು ಅಥವಾ ಹೂಡಿಕೆ ಮಾಡಲು ಅವಕಾಶವಿದೆ.

ಮನೆ ಬಾಗಿಲಲ್ಲಿ ಪ್ರಾಥಮಿಕ ಆರೋಗ್ಯ

ದ್ವಿತೀಯ ಹಾಗೂ ತೃತೀಯ ಆರೋಗ್ಯ ಸೇವೆಗಳಿಗೆ ಎನ್​ಎಚ್​ಪಿಎಸ್ ಘೋಷಿಸಿದ್ದು, ಪ್ರಾಥಮಿಕ ಆರೋಗ್ಯಕ್ಕೂ ವಿಶೇಷ ಪ್ಯಾಕೇಜ್ ನೀಡಲಾಗಿದೆ. 2014ರಿಂದ ಚರ್ಚೆಯಾಗಿ 2017ರಲ್ಲಿ ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಪುಷ್ಟೀಕರಿಸಲು 1,200 ಕೋಟಿ ರೂ. ಒದಗಿಸಲಾಗಿದೆ.

ಆರೋಗ್ಯ ಹದಗೆಟ್ಟ ನಂತರ ಚಿಕಿತ್ಸೆಯಷ್ಟೆ ಅಲ್ಲದೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ದೇಶಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಜತೆಗೆ ಹೃದಯ ಸಮಸ್ಯೆ, ರಕ್ತದೊತ್ತಡ, ಮಧುಮೇಹದಂತಹ ಅಸಾಂಕ್ರಾಮಿಕ ಕಾಯಿಲೆಗಳು, ಗರ್ಭಿಣಿ ಆರೈಕೆ, ಮಕ್ಕಳ ಚಿಕಿತ್ಸೆಯಂತಹ ಸಮಗ್ರ ಆರೋಗ್ಯ ಸೇವೆಯನ್ನು ಈ ಕೇಂದ್ರಗಳು ಒಳಗೊಳ್ಳಲಿವೆ. ಅಲೋಪತಿಯಷ್ಟೆ ಅಲ್ಲದೆ ಆಯುರ್ವೆದ, ಯುನಾನಿ, ನ್ಯಾಚುರೋಪತಿ (ಆಯುಶ್) ಸೇವೆಗಳು, ಮಾನಸಿಕ ಆರೋಗ್ಯ ಸೇವೆಗಳನ್ನೂ ಒದಗಿಸಲಾಗುತ್ತದೆ.

ಮಹಿಳೆಯರಿಗೆ ಉದ್ಯೋಗ

ಈ ಯೋಜನೆಗಳಿಂದ 2022ರ ವೇಳೆಗೆ ಹೊಸ ಭಾರತ ನಿರ್ವಣವಾಗಿ, ದೇಶದ ಉತ್ಪಾದಕತೆ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ವೇತನ ಕಡಿತಗೊಳ್ಳುವಿಕೆ ಹಾಗೂ ನಿಗಾ ಇಲ್ಲದಂತಾಗುವುದು ತಪು್ಪತ್ತದೆ. ಈ ಸೇವೆಗಳಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದ್ದು, ಪ್ರಮುಖವಾಗಿ ಮಹಿಳೆಯರಿಗೆ ಅನುಕೂಲವಾಗಲಿದೆ. ಸರ್ವರಿಗೂ ಆರೋಗ್ಯ ರಕ್ಷೆಯೆಡೆಗೆ ನಿಧಾನವಾಗಿಯಾದರೂ ಸ್ಥಿರವಾಗಿ ಗುರಿಯತ್ತ ಸಾಗುತ್ತಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿಕರ ಅಭಿವೃದ್ಧಿಗಾಗಿ ಕೃಷಿ ಬೆಳೆಗೆ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಶೇ.1.5 ಏರಿಕೆ ಮಾಡಲಾಗಿದೆ. ಉಪನಗರ ರೈಲು ಯೋಜನೆ ನೀಡಿರುವುದು ಕರ್ನಾಟಕಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಬಜೆಟ್ ಅತ್ಯುತ್ತಮವಾಗಿದ್ದು, ದೇಶದ ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗಿದೆ.

| ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ

ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ. ಕೃಷಿ ಬಗ್ಗೆ ಘೋಷಣೆಯೇನೂ ಇಲ್ಲವಾಗಿದೆ. ಆರೋಗ್ಯ ವಿಮೆ ಕುರಿತ ಘೋಷಣೆಗೆ ಬಜೆಟ್ ಅನುದಾನ ಎಷ್ಟು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸಾಮಾಜಿಕ ವಲಯ, ಕೃಷಿ ವಲಯದಲ್ಲಿ ಯಾವುದೇ ಗಮನಾರ್ಹ ಯೋಜನೆಗಳಿಲ್ಲ. ಬಜೆಟ್ ರೈತಪರವಾಗಿಯೂ ಇಲ್ಲ. ರಾಜ್ಯಕ್ಕೆ ಹೆಚ್ಚಿನ ಕೊಡುಗೆಗಳಿಲ್ಲ.

| ಮುದ್ದಹನುಮೇಗೌಡ ಸಂಸದ

 ಇದೊಂದು ನಾಜೂಕು ಬಜೆಟ್. ವೈದ್ಯಕೀಯ ವಿಮೆಯಲ್ಲಿ ಹಿರಿಯ ನಾಗರಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಸರ್ಕಾರಿ ನೌಕರರ ಸಂಬಳದಲ್ಲಿ 40 ಸಾವಿರದವರೆಗೂ ಸ್ಟಾ್ಯಂಡರ್ಡ್ ಡಿಡಕ್ಷನ್ ಮಾಡಿರುವುದು ಒಳ್ಳೆಯದು. ಕೈಗಾರಿಕೆಗಳಿಗೆ ಅನುಕೂಲವಾಗಿಲ್ಲ. ತೈಲ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಯಾಗಿಲ್ಲ. ಒಟ್ಟಾರೆ ಬಜೆಟ್ ಚೆನ್ನಾಗಿದೆ. ಆದರೆ, ಚಪ್ಪರಿಸಲು ಏನೂ ಇಲ್ಲ.

| ಆರ್.ಜಿ. ಮುರಳೀಧರ್ ಆರ್ಥಿಕ ಸಲಹೆಗಾರರು

ಕೇಂದ್ರದ ಬಜೆಟ್ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ನಿರಾಶಾದಾಯಕ. ಬಡವರ, ಗ್ರಾಮೀಣ, ರೈತಪರ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ಕೌಶಲಾಭಿವೃದ್ಧಿ, ಉತ್ಪಾದನೆ, ಉದ್ಯೋಗ ಸೃಷ್ಟಿ, ಮುದ್ರಾ ಬ್ಯಾಂಕ್​ಗೆ ಒತ್ತು ನೀಡಲಾಗಿದೆ. ರಿಯಲ್ ಎಸ್ಟೇಟ್, ರೈಲ್ವೆ ವಿವಿ ಸ್ಥಾಪನೆ, ಆರೋಗ್ಯ ವಿಮೆ ಒದಗಿಸಿರುವುದು ಆಶಾದಾಯಕವಾಗಿದೆ.

| ಆರ್.ಹನುಮಂತೇಗೌಡ ಕಾಸಿಯಾ ಅಧ್ಯಕ್ಷ

 ವಯೋವಂದನ ವಿಸ್ತರಣೆ

ಪ್ರಧಾನ ಮಂತ್ರಿ ವಯೋವಂದನ ಯೋಜನೆ 2020ರ ಮಾರ್ಚ್​ವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಈ ಯೋಜನೆಯಲ್ಲಿನ ಹೂಡಿಕೆ ಮೊತ್ತದ ಮಿತಿಯನ್ನು 7.5 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿನ ಠೇವಣಿ ಮೇಲಿನ ಆದಾಯ ತೆರಿಗೆಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಆರೋಗ್ಯ ವಿಮೆ ಅಡಿಯಲ್ಲೂ 50 ಸಾವಿರದವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಈವರೆಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ 10 ಸಾವಿರ ರೂ.ಗಿಂತ ಮೇಲ್ಪಟ್ಟು ಠೇವಣಿ ಇಟ್ಟಲ್ಲಿ ಅದಕ್ಕೆ ತೆರಿಗೆ ಕಟ್ಟಬೇಕಿತ್ತು. ಇನ್ನು ಮುಂದೆ 50 ಸಾವಿರ ರೂ. ಗೂ ಮೇಲ್ಪಟ್ಟ ಠೇವಣಿಗಳಿಗೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 194ಎಯಡಿ ಟಿಡಿಎಸ್(ಟ್ಯಾಕ್ಸ್ ಡಿಡಕ್ಷನ್ ಫ್ರಂ ಸೋರ್ಸ್) ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ವಿಮೆ ಪಾವತಿ ಹಾಗೂ ವೈದ್ಯಕೀಯ ಖರ್ಚಿನಲ್ಲಿನ ತೆರಿಗೆ ವಿನಾಯಿತಿಯನ್ನು 30 ರಿಂದ 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಲ್ಲಿ ತೀವ್ರ ಅನಾರೋಗ್ಯಕ್ಕೆ ಗರಿಷ್ಠ 60 ಸಾವಿರ ರೂ. 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿಯನ್ನು 1 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ.

ಸರ್ವೆ ಭವಂತು ಸುಖಿನಃ

ಸರ್ವೆ ಭವಂತು ಸುಖಿನಃ, ಸರ್ವೆ ಸಂತು ನಿರಾಮಯಾಃ ಎಂಬ ಶ್ಲೋಕವನ್ನು ಅರುಣ್ ಜೇಟ್ಲಿ ಬಜೆಟ್ ಭಾಷಣದ ವೇಳೆ ಉದ್ಗರಿಸಿದರು. ಎಲ್ಲರೂ ಸುಖವಾಗಿರಬೇಕು, ಎಲ್ಲರೂ ನಿರಾಳರಾಗಿರಬೇಕು. ಸ್ವಸ್ಥ ಭಾರತದಿಂದ ಮಾತ್ರವೇ ಸಮೃದ್ಧ ಭಾರತ ನಿರ್ಮಾಣ ಸಾಧ್ಯ. ದೇಶದ ಜನರು ಆರೋಗ್ಯದಿಂದ ಇಲ್ಲದಿದ್ದರೆ ನಮ್ಮ ಜನಸಂಖ್ಯಾ ಬಲದ ಉಪಯೋಗವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜೇಟ್ಲಿ ತಿಳಿಸಿದರು.

ಆರೋಗ್ಯ ವಿಮೆಯಲ್ಲೂ ತೆರಿಗೆ ವಿನಾಯಿತಿ

ಅರವತ್ತು ವರ್ಷ ಮೇಲ್ಪಟ್ಟ ಪಾಲಕರಿಗಾಗಿ ಆರೋಗ್ಯ ವಿಮೆ ಪಾವತಿಸಿದಲ್ಲಿ ಆದಾಯ ತೆರಿಗೆಯಲ್ಲಿ ಗರಿಷ್ಠ 55 ಸಾವಿರ ರೂ. ವರೆಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಪಾಲಕರು ತೆರಿಗೆ ಪಾವತಿದಾರರ ಅವಲಂಬಿತರಲ್ಲದೆ ಇದ್ದರೂ, ಈ ಸೌಲಭ್ಯ ಸಿಗಲಿದೆ. 60 ವರ್ಷ ಮೇಲ್ಪಟ್ಟ ತೆರಿಗೆ ಪಾವತಿದಾರರು ಅವರ ಪಾಲಕರಿಗೆ ಆರೋಗ್ಯ ವಿಮೆ ಪಾವತಿಸುತ್ತಿದ್ದರೆ 60 ಸಾವಿರ ರೂ. ವರೆಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.

ಸ್ತ್ರೀಶಕ್ತಿಗೆ ಉಘೇ.. ಉಘೇ..

ಬಡವರ್ಗಕ್ಕೆ ಉಚಿತ ವಿದ್ಯುತ್ ಸಂಪರ್ಕ, ಎಲ್​ಪಿಜಿ ಸಿಲಿಂಡರ್ ವಿತರಣೆ, ಮಹಿಳಾ ಸ್ವಾವಲಂಬನೆಗೆ ಆದ್ಯತೆ ಸೇರಿ ಬಡಮಧ್ಯಮ ವರ್ಗದ ಮಹಿಳೆಯರಿಗೆ ಅನುಕೂಲವಾಗುವಂಥ ಬಜೆಟ್ ಈ ಬಾರಿ ಮಂಡಿಸಲಾಗಿದ್ದು, ಬಹಳ ವರ್ಷಗಳ ಬೇಡಿಕೆಯಾದ ಹೆರಿಗೆ ರಜೆಯ ಹೆಚ್ಚಳಕ್ಕೆ ಈ ಬಾರಿ ಅಸ್ತು ಎನ್ನಲಾಗಿದೆ.

# ಉಜ್ವಲಾ ಝುಗಮಗ: ಬಡ ಮಹಿಳೆಯರಿಗಾಗಿ ಈಗಾಗಲೇ ಪ್ರಧಾನಮಂತ್ರಿ ಉಜ್ವಲಾ ಯೋಜನೆಯನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಈ ಯೋಜನೆಯಡಿ 5 ಕೋಟಿ ಮಹಿಳೆಯರಿಗೆ ಎಲ್​ಪಿಜಿ ಸಿಲಿಂಡರ್​ಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿತ್ತು.ಆದರೆ, ಉಜ್ವಲಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ 8 ಕೋಟಿ ಬಡ ಮಹಿಳೆಯರಿಗೆ ಎಲ್​ಪಿಜಿ ಕನೆಕ್ಷನ್ ನೀಡಲು ಉದ್ದೇಶಿಸಲಾಗಿದೆ.

# ಸುಕನ್ಯಾ ಸಮೃದ್ಧಿಯಡಿ 1.26 ಕೋಟಿ ಖಾತೆ: ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಯಡಿ 2015ರಲ್ಲಿಯೇ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಆರಂಭಿಸಲಾಗಿದ್ದು, ದೇಶಾದ್ಯಂತ ಯಶಸ್ಸು ಕಂಡಿದೆ. ಈ ಯೋಜನೆಯಡಿ 2017ರ ನವೆಂಬರ್ ವೇಳೆಗೆ 1.26 ಕೋಟಿಗೂ ಹೆಚ್ಚು ಖಾತೆಗಳನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆಯಲಾಗಿದ್ದು, ಒಟ್ಟಾರೆ 19,183 ಕೋಟಿ ರೂ. ಹೆಣ್ಣುಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗಿದೆ.

# ಬೆಳಕಿನ ಸೌಭಾಗ್ಯ: ದೇಶದ ಯಾವ ಮನೆಯಲ್ಲೂ ಕತ್ತಲಿರಬಾರದು, ವಿದ್ಯುತ್ ಸಮಸ್ಯೆಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ‘ಸೌಭಾಗ್ಯ ಯೋಜನೆ’ ಜಾರಿಗೆ ತಂದಿದೆ. 4 ಕೋಟಿ ಬಡಕುಟುಂಬಗಳಿಗೆ ಉಚಿತ ವಿದ್ಯುತ್ ಕಲ್ಪಿಸಲಾಗಿದೆ.

# ಸ್ವಸಹಾಯ ಸಂಘಗಳಿಗೆ ಬಲ: ದೇಶದಲ್ಲಿ ಮಹಿಳಾ ಸ್ವಾವಲಂಬಿತನವನ್ನು ಉತ್ತೇಜಿಸುವ ಸಲುವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ 2016-17ನೇ ಸಾಲಿನಲ್ಲಿ 42,500 ಕೋಟಿ ರೂ. ಸಾಲ ನೀಡಲಾಗಿತ್ತು. ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲವನ್ನು 2019ರ ಮಾರ್ಚ್ ವೇಳೆಗೆ 75 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ಹಾಗೇ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗೆ ನೀಡುವ ಅನುದಾನವನ್ನು 2019ರ ವೇಳೆಗೆ 5750 ಕೋಟಿ ರೂ.ಗೆ ಹೆಚ್ಚಳ ಮಾಡಲಾಗುವುದು.

ಹೆರಿಗೆ ರಜೆ ವಿಸ್ತರಣೆ

# ಮಹಿಳೆಯರ ಹೆರಿಗೆ ರಜೆ 12 ವಾರಗಳಿಂದ 26 ವಾರಕ್ಕೆ ಹೆಚ್ಚಳ.
# 2022ರ ನವ ಭಾರತ ನಿರ್ವಣಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ವಿಶೇಷವಾಗಿ ಮಹಿಳೆಯರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿ. # 20 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸೌಲಭ್ಯ ಮತ್ತು 70 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುವುದು.
# ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗೆ 2,400 ಕೋಟಿ ರೂ. ಮೀಸಲಿಡಲಾಗಿದ್ದು, ದೇಶದ ಎಲ್ಲ ಜಿಲ್ಲೆಗಳನ್ನೂ ಒಳಗೊಳ್ಳಲಿದೆ. ಜನಿಸಿದ ಮಗುವಿನ ಮರಣ ಪ್ರಮಾಣವನ್ನು ತಗ್ಗಿಸಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು.
# ದೇಶದ 36 ರಾಜ್ಯಗಳಲ್ಲಿ ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ತೆರೆದು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು.


ವಿತ್ತೀಯ ಶಿಸ್ತಿಗೆ ಆದ್ಯತೆ

ಕೇಂದ್ರ ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಣುತ್ತಿದ್ದು, ಹಣಕಾಸು ಕ್ರೋಡೀಕರಣಕ್ಕೆ ಅರುಣ್ ಜೇಟ್ಲಿ ಆದ್ಯತೆ ನೀಡಿದ್ದಾರೆ. ಚುನಾವಣೆ ಇನ್ನೊಂದು ವರ್ಷವಷ್ಟೇ ಇದ್ದರೂ ಇದು ಜನಪ್ರಿಯ ಬಜೆಟ್​ನಂತೆ ಕಾಣುತ್ತಿಲ್ಲ. ಅಭಿವೃದ್ಧಿ ಬಜೆಟ್​ನಂತೆ ಗೋಚರಿಸುತ್ತಿದೆ.

| ಪ್ರೊ.ಜಿ.ವಿ.ಜೋಶಿ ಆರ್ಥಿಕ ತಜ್ಞರು

ಆರ್ಥಿಕತೆಗೆ ಭದ್ರತೆ ಒದಗಿಸುವುದು, ಅದಕ್ಕಾಗಿ ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವ ಧೋರಣೆಯನ್ನು ಜೇಟ್ಲಿಯವರು ಮುಂದುವರಿಸಿದ್ದಾರೆ. ವಿತ್ತೀಯ ಕೊರತೆ ಒಂದು ಮಿತಿಮೀರಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಅನಗತ್ಯವಾಗಿ ಹೆಚ್ಚಿಸದೆ, ವಿತ್ತೀಯ ಕ್ರೋಡೀಕರಣಕ್ಕೆ ಒತ್ತು ಕೊಟ್ಟಿದ್ದಾರೆ. ಚುನಾವಣೆಗೆ ಇನ್ನೊಂದು ವರ್ಷವಿರುವಾಗ ಜನಪ್ರಿಯ ಬಜೆಟ್ ಮಂಡಿಸಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದೆ ಕೇಂದ್ರ ಸರ್ಕಾರ. ಇದರಲ್ಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಬೆಳವಣಿಗೆ ದರ ಹೆಚ್ಚಿಸುವ ಉದ್ದೇಶವಷ್ಟೇ ಕಾಣುತ್ತದೆ. ಆದರೆ ಎನ್​ಡಿಎ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದ ಬಗ್ಗೆ ಟೀಕೆ ಇದ್ದ ಕಾರಣ ಈ ಬಾರಿಯಾದರೂ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಸಾರುತ್ತಾರೆ ಎಂಬ ನಿರೀಕ್ಷೆ ಇದ್ದದ್ದು ಹುಸಿಯಾಗಿದೆ. ಉದ್ಯೋಗ ಕೊರತೆ ಬಗ್ಗೆ ಬಹಳ ಟೀಕೆ ಇದೆ. ಯುವಕರೇ ಹೆಚ್ಚಿರುವ ಡೆಮೊಗ್ರಾಫಿಕ್ ಡಿವಿಷನ್​ನ ಜನಸಂಖ್ಯಾಧಾರಿತ ಲಾಭವನ್ನು ಪಡೆಯುವ ಗೋಜಿಗೆ ಹೋಗಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ಉದ್ಯೋಗದ ಬಗ್ಗೆ ಪ್ರಸ್ತಾಪಿಸಿದ್ದರೂ ಸಮಗ್ರವಾಗಿ ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗ ಸೃಷ್ಟಿ, ಇದಕ್ಕೆ ಪೂರ್ವ ತಯಾರಿ ಏನೆಂಬುದನ್ನು ಜನರ ಮುಂದಿಡಬೇಕಿತ್ತು.

ವೈಯಕ್ತಿಕ ಹಣಕಾಸು ರಂಗಕ್ಕೆ ಬಂದರೆ ಆದಾಯ ತೆರಿಗೆ ಮಿತಿ ವಿಸ್ತರಣೆ ಮಾಡದಿರುವುದು ನನಗೇನೂ ದೊಡ್ಡ ವಿಚಾರವಾಗಿ ಕಾಣುತ್ತಿಲ್ಲ. ಆ ರೀತಿಯ ಕ್ರಮಗಳು ಜನಪ್ರಿಯ ವಿಚಾರಗಳಷ್ಟೇ ಹೊರತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖವಲ್ಲ. ಈಗಾಗಲೇ ಷೇರು ಮತ್ತು ಮ್ಯೂಚುವಲ್ ಫಂಡ್ ವಿಚಾರಗಳಲ್ಲಿ ಹೂಡಿಕೆಗೆ ಜನರಿಗೆ ಸುಲಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ತೆರಿಗೆ ವಿನಾಯಿತಿ ಎನ್ನುವುದಕ್ಕೆ ಜನರು ಹೆಚ್ಚು ಮಹತ್ವ ನೀಡಲಿಕ್ಕಿಲ್ಲ. ಕೃಷಿ ರಂಗದ ಸಮಗ್ರ ಸುಧಾರಣೆಗೆ ಈಗಲಾದರೂ ಮುಂದಾಗಿದ್ದಾರೆ. ಮಧ್ಯವರ್ತಿಗಳ ಕಾಟ ತಪ್ಪಿಸಿ ಕೃಷಿಕರ ಹುಟ್ಟುವಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು, ಅದಕ್ಕಾಗಿ ದಾಸ್ತಾನು ಸೌಕರ್ಯ, ಕೃಷಿಕರ ಆದಾಯ ಹೆಚ್ಚಳ ಬಗ್ಗೆ ಗಂಭೀರ ಚಿಂತನೆ ಶ್ಲಾಘನೀಯ.

ನೂರು ಆದರ್ಶ ಸ್ಮಾರಕ

ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ಎರಡು ವಿಶೇಷ ಪ್ರವಾಸಿ ವಲಯಗಳು ಅಭಿವೃದ್ಧಿಯಾಗಲಿವೆ. ಪ್ರವಾಸಿ ಕ್ಷೇತ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಖಾಸಗಿ ಹೂಡಿಕೆದಾರರ ನೆರವು ಪಡೆಯಲು ಉದ್ದೇಶಿಸಲಾಗಿದೆ. ಭಾರತೀಯ ಪುರಾತತ್ವ ಸಂಸ್ಥೆಯ 100 ಆದರ್ಶ ಸ್ಮಾರಕಗಳನ್ನು ಗುರುತಿಸಿ, ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗಾಗಿ 13 ಹೊಸ ಯೋಜನೆಗಳನ್ನೂ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ. ಅಲ್ಲದೆ 3 ಪಾರಂಪರಿಕ ತಾಣಗಳಲ್ಲಿ ಮೂಲಸೌಕರ್ಯ ಹಾಗೂ ಇನ್ನಿತರ ಅವಶ್ಯ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲಿವೆ. 2014 ರಿಂದ 2017ರ ಅವಧಿಯಲ್ಲಿ ಪ್ರವಾಸಿ ಕ್ಷೇತ್ರದ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ, ಪ್ರವಾಸಿ ಕ್ಷೇತ್ರದ ಒಟ್ಟು ಆದಾಯ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ. ಪ್ರವಾಸಿ ಕ್ಷೇತ್ರಗಳಲ್ಲಿ ಯಾತ್ರಿಕರಿಗೆ ಅಗತ್ಯ ಮಾಹಿತಿ, ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಸೇರಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಗಡಿ ಪ್ರವಾಸಕ್ಕೆ ಒತ್ತು: ಗಡಿ ಭಾಗದಲ್ಲಿರುವ ಪ್ರವಾಸಿ ತಾಣಗಳಿಗೆ ಅಗತ್ಯ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಲೇ ರೋಹ್ಟಂಗ್ ಸುರಂಗ ನಿರ್ವಿುಸಲಾಗಿದೆ. ಇದರಿಂದ ಲೇಹ್ ಲದಾಖ್ ಭಾಗವನ್ನು ಸಾರ್ವಕಾಲಿಕ ಪ್ರವಾಸಿ ಪ್ರದೇಶವನ್ನಾಗಿ ಮಾರ್ಪಡಿಸಲಾಗಿದೆ. ಜೋಜಿಲಾ ಪಾಸ್​ನಲ್ಲೂ 14 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಸೀಖೋ ಔರ್ ಕಮಾವೋ

ಅಲ್ಪಸಂಖ್ಯಾತ ಯುವಜನಾಂಗವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ಘೋಷಿಸಿದೆ. ‘ಕಲಿ ಮತ್ತು ದುಡಿ’ (ಸೀಖೋ ಔರ್ ಕಮಾವೋ) ಕೌಶಲಾಭಿವೃದ್ಧಿ ಯೋಜನೆಗಾಗಿ 250 ಕೋಟಿ ರೂ. ಮೀಸಲಿಟ್ಟಿದೆ. ಇದರಿಂದ 1. 30 ಲಕ್ಷ ಅಲ್ಪಸಂಖ್ಯಾತ ಯುವಕರಿಗೆ ಉಪಯೋಗವಾಗಲಿದೆ. ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಹೊಸ ಗುರಿ (ನಯಿ ಮಂಜಿಲ್) ಯೋಜನೆಗಾಗಿ 140 ಕೋಟಿ ರೂ.ಗಳನ್ನು ನೀಡಲಾಗಿದೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿವೇತನಕ್ಕಾಗಿ ಮೆಟ್ರಿಕ್​ಪೂರ್ವಕ್ಕೆ 980 ಕೋಟಿ ರೂ, ಮೆಟ್ರಿಕ್​ನಂತರದ ಶಿಕ್ಷಣಕ್ಕಾಗಿ 692 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ವೃತ್ತಿಪರ ಕೋರ್ಸ್, ತಾಂತ್ರಿಕ, ಪದವಿಪೂರ್ವ ಮತ್ತು ಪದವಿ ನಂತರದ ವಿದ್ಯಾರ್ಥಿಗಳಿಗಾಗಿ 522 ಕೋಟಿ ರೂ. ನೀಡಲಾಗಿದ್ದು ಇದರಿಂದ 35.60 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಶಿಕ್ಷಣಕ್ಕೆ ನೆರವು: ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಎಂಬಿಎಗಳಂತಹ ಉನ್ನತ ವ್ಯಾಸಂಗದ ಉಚಿತ ಕೋಚಿಂಗ್​ಗೆ 74 ಕೋಟಿ ರೂ., ಸಂಶೋಧನೆ ಹಾಗೂ ಸಂಶೋಧನೆ ಸಂಬಂಧಿತ ವಿದ್ಯಾಭ್ಯಾಸಕ್ಕೆ 55 ಕೋಟಿ ರೂ. ಒದಗಿಸಲಾಗಿದೆ. ಪಿ.ಎಚ್​ಡಿ ಪದವಿ ಗಳಿಸಿದ ಹೆಣ್ಣುಮಕ್ಕಳಿಗೆ ಮೌಲಾನಾ ಆಜಾದ್ ಫೆಲೋಶಿಪ್​ಗಾಗಿ 153 ಕೋಟಿ ರೂ. ಮೀಸಲಿರಿಸಲಾಗಿದೆ. ಜತೆಗೆ ವಿದ್ಯಾಭ್ಯಾಸದ ಸಾಲ ಸೌಲಭ್ಯಕ್ಕಾಗಿ 24 ಕೋಟಿ ರೂ., ಮೌಲಾನಾ ಆಜಾದ್, ಅಲ್ಪಸಂಖ್ಯಾತ ಸಂಸ್ಥೆ ಮತ್ತು ವಕ್ಪ್ ಬೋರ್ಡ್​ಗಳಿಗೆ ಸಾಲ ಸೌಲಭ್ಯ ಕಲ್ಪಿಸಲು 292 ಕೋಟಿ ರೂ. ಒದಗಿಸಲಾಗಿದೆ.

Leave a Reply

Your email address will not be published. Required fields are marked *

Back To Top