ಬೆಂಗಳೂರು:
ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ 1,37,757 ಕೋಟಿ ರೂ ಮೀಸಲಿಟ್ಟಿದ್ದು, ಎಲ್ಲಾ ವರ್ಗಗಳಿಗೂ ಸಮ ತೂಕದ ನ್ಯಾಯವನ್ನು ಒದಗಿಸಲಾಗಿದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್.ಜಿ.ಎಸ್. ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರು 8ನೇ ಕೇಂದ್ರ ಬಜೆಟ್ ಮಂಡಿಸಿದ್ದು, ಎಲ್ಲಾ ಕ್ಷೇತ್ರ ಮತ್ತು ಎಲ್ಲಾ ರಾಜ್ಯಗಳಿಗೂ ಆದ್ಯತೆ ನೀಡಿದ್ದಾರೆ ಎಂದರು.
ಸಾಲ ಪಡೆಯುವವರಿಗೆ ನೆರವಾಗುವ ಸಿಬಿಲ್ ಸ್ಕೋರ್ ಮಾದರಿಯಲ್ಲಿ ಗ್ರಾಮೀಣ ಕ್ರೆಡಿಟ್ ಸ್ಕೋರ್ ಆರಂಭಿಸಿದ್ದು, ಸ್ವಸಹಾಯ ಸಂಘಗಳಿಗೆ ಅನುಕೂಲವಾಗಲಿದೆ. ಎಂಎಸ್‌ಎಂಇ ಮಿತಿಯನ್ನು 1 ರಿಂದ 2.5 ಕೋಟಿಗೆ ಹೆಚ್ಚಿಸಿ ಮೈಕ್ರೋ ವ್ಯಾಪ್ತಿಯಡಿ ತಂದಿದ್ದಾರೆ. 25 ಕೋಟಿ ವ್ಯವಹಾರದ್ದನ್ನು ಸಣ್ಣ ಉದ್ಯಮವಾಗಿ, 125 ಕೋಟಿ ವ್ಯವಹಾರ ಇರುವವರನ್ನು ಮಧ್ಯಮ ಉದ್ಯಮ ಎಂದು ಪರಿಗಣಿಸಲು ಮುಂದಾಗಿದ್ದಾರೆ. ಸಾಲದ ಮಿತಿಯನ್ನೂ ಹೆಚ್ಚಿಸಿದ್ದಾರೆ ಎಂದರು.
5 ಲಕ್ಷ ಮಹಿಳೆಯರಿಗೆ, ಅದರಲ್ಲೂ ಎಸ್‌ಸಿಎಸ್‌ಟಿ ಮಹಿಳೆಯರಿಗೆ 2 ಕೋಟಿ ರೂ. ಸಾಲ ಮುಂದಿನ 5 ವರ್ಷ ಲಭಿಸಲಿದೆ. ಶಿಕ್ಷಣ ಕ್ಷೇತ್ರದಡಿ ಈ ವರ್ಷ 10 ಸಾವಿರಕ್ಕಿಂತ ಹೆಚ್ಚು ವೈದ್ಯಕೀಯ ಸೀಟುಗಳು ಸೇರ್ಪಡೆ ಆಗಲಿವೆ. 75 ಸಾವಿರ ಸೀಟುಗಳು ಮುಂದಿನ 5 ವರ್ಷಗಳಲ್ಲಿ ಸೇರಲಿವೆ ಎಂದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಸೆಂಟರ್ ಸ್ಥಾಪನೆಗೆ 500 ಕೋಟಿ ಮೀಸಲಿಟ್ಟಿದ್ದಾರೆ. ದೇಶಾದ್ಯಂತ ಎಲ್ಲ ಶಾಲೆಗೂ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಹೋಂ ಸ್ಟೇಗಳನ್ನು ಮುದ್ರಾ ಯೋಜನೆಯಡಿ ತರಲಾಗಿದೆ. ಉಡಾಣ್ ಯೋಜನೆಯಡಿ 120 ಕಡೆ ವಿಮಾನನಿಲ್ದಾಣ (ಏರ್ ಫೆಸಿಲಿಟಿ) ಸಿಗಲಿದೆ ಎಂದು ಮಾಹಿತಿ ನೀಡಿದರು.
50 ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿ ನಡೆಯಲಿದೆ. 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 10 ಸಾವಿರ ಮಕ್ಕಳಿಗೆ ಐಐಟಿ, ಐಐಎಸ್‌ಸಿನಡಿ ಸಂಶೋಧನೆಗೆ ಅವಕಾಶ ಕೊಡಲಾಗಿದೆ. ಕೃಷಿ ವಿಕಾಸ್ ಯೋಜನೆಗೆ 8,500 ಕೋಟಿ, ಸಮಗ್ರ ಶಿಕ್ಷಾ ಯೋಜನೆಗೆ 41,250 ಕೋಟಿ, ಮತ್ಸ್ಯ ಸಂಪದಕ್ಕೆ 2,465 ಕೋಟಿ, ಆಯುಷ್ಮಾನ್ ಭಾರತ್ 4200 ಕೋಟಿ, ಆವಾಸ್ ಯೋಜನೆಗೆ 19,794 ಕೋಟಿ, ಹೊಸ ರೈಲ್ವೆ ಲೈನ್‌ಗಳಿಗೆ 32,235 ಕೋಟಿ ನೀಡಿದ್ದು, ಅದರಲ್ಲಿ ಕರ್ನಾಟಕಕ್ಕೆ 7564 ಕೋಟಿ ಸಿಕ್ಕಿದೆ ಎಂದರು.
ರಾಜ್ಯ ವಕ್ತಾರ ಮೋಹನ್ ವಿಶ್ವ ಮಾತನಾಡಿ, ತೆರಿಗೆ ಮಿತಿ 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಳವಾಗಿದೆ. ವೇತನ ಮೊತ್ತ 12.75 ಲಕ್ಷ ಇದ್ದರೆ ಒಂದು ರೂಪಾಯಿ ತೆರಿಗೆ ಕಟ್ಟಬೇಕಿಲ್ಲ. ಇದರಿಂದ 1 ಕೋಟಿ ಜನರು ತೆರಿಗೆ ವ್ಯಾಪ್ತಿಯಿಂದ ಹೊರಕ್ಕೆ ಬರಲಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರವಧಿಯಲ್ಲಿ 17 ಸಾವಿರ ವೇತನವಿದ್ದರೆ ಆದಾಯ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇವತ್ತು ತಿಂಗಳಿಗೆ 1.06 ಲಕ್ಷ ವೇತನ ಬಂದರೂ ಟಿಡಿಎಸ್ ಆಗುವುದಿಲ್ಲ. ವರ್ಷಕ್ಕೆ 83 ಸಾವಿರ ಉಳಿತಾಯದ ಅವಕಾಶ ಸಿಕ್ಕಿದೆ ಎಂದರು.
ರಾಜ್ಯ ವಕ್ತಾರ ನರೇಂದ್ರ ರಂಗಪ್ಪ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಮೊತ್ತವನ್ನು ಮೋದಿ ಅವರು ಕೊಟ್ಟಿದ್ದು, ಶೇ.191 ರಷ್ಟು ಮೊತ್ತ ಹೆಚ್ಚಳವಾಗಿದೆ. 200 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಜಿಲ್ಲೆಗಳಲ್ಲಿ ತೆರೆಯಲು ಕೇಂದ್ರ ಮುಂದಾಗಿದೆ ಎಂದರು.