ಶ್ರೀಗಳಿಗೆ ‘ಕರ್ನಾಟಕ ರತ್ನ’ ಕೊಟ್ಟಿದ್ದು ನನ್ನ ಸರ್ಕಾರವೇ, ‘ಭಾರತ ರತ್ನ’ಕ್ಕಾಗಿ ಆಗಲೇ ಆಗ್ರಹಿಸಿದ್ದೆ

ಮಂಡ್ಯ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಸಂಬಂಧ ರಾಜ್ಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿರುವ ಆಗ್ರಹಗಳ ಹಿನ್ನೆಲೆಯಲ್ಲಿ ಇಂದು ಇದೇ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರವಾಗಿ ಹಿಂದೆಯೂ ಆಗ್ರಹಿಸಿರುವುದಾಗಿಯೂ ಈಗಾಗಲೂ ಆಗ್ರಹಿಸುವುದಾಗಿಯೂ ತಿಳಿಸಿದರು.

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಮಾತನಾಡಿರುವ ಅವರು, “ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗಲೇ ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಭಾರತ ರತ್ನ ಗೌರವ ನೀಡುವ ವಿಚಾರವಾಗಿ ನಾನು ಆಗಲೇ ಆಗ್ರಹಿಸಿದ್ದೇನೆ. ಮನವಿಯನ್ನೂ ಮಾಡಿದ್ದೇನೆ. ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಮನವಿಯನ್ನೂ ಮಾಡಿದ್ದೇನೆ. ಈಗಲೂ ಆಗ್ರಹಿಸುತ್ತೇನೆ,” ಎಂದರು.
“ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರವಾಗಿ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ. ರಾಷ್ಟ್ರಪತಿ, ಪ್ರಧಾನಿಯವರನ್ನೂ ಭೇಟಿ ಮಾಡುತ್ತೇನೆ,” ಎಂದು ತಿಳಿಸಿದರು.

ಇನ್ನು ಶ್ರೀಗಳ ಆರೋಗ್ಯದ ವಿಚಾರವಾಗಿ ಮಾತನಾಡಿದ ಸಿಎಂ ಎಚ್​ಡಿಕೆ,” ವೈದ್ಯರ ಮಾಹಿತಿ ಪ್ರಕಾರ ಶ್ರೀಗಳು ಚೆನ್ನಾಗಿದ್ದಾರೆ. ನಿನ್ನೆ ಒಂದು ಗಂಟೆಗಳ ಕಾಲ ಸ್ವತಃ ಅವರೇ ಉಸಿರಾಡಿದ್ದಾರೆ. ಕಳೆದೊಂದು ವಾರಗಳಿಗೆ ಹೋಲಿಕೆ ಮಾಡಿದರೆ ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ದೇವರ ಆಶೀರ್ವಾದ, ಅವರ ಆತ್ಮಸ್ಥೈರ್ಯ, ಪವಾಡವೇ ಇದಕ್ಕೆ ಕಾರಣ. ನಮ್ಮ ಜಜೊತೆ ಅವರು ಇನ್ನೂ ಹಲವು ದಿನ ಇರೋ ಬಯಕೆ ಈಡೇರುವ ವಿಶ್ವಾಸ ನನಗಿದೆ,” ಎಂದೂ ಹೇಳಿದರು.

ಇದೇ ವೇಳೆ ಅವರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.