ಕಮಲನಗರ: ಸೇರುವುದು ಆಕಸ್ಮಿಕ. ಅಗಲುವುದು ಅನಿವಾರ್ಯ. ಸವಿನೆನಹುವೊಂದೇ ಶಾಶ್ವತ. ಭೌತಿಕ ಕಾಯ ಕಣ್ಮರೆಯಾದರೂ ಮಾಡಿದ ಸತ್ಕಾರ್ಯಗಳು ಜನಮನದಲ್ಲಿ ಸದಾ ಹಸಿರು. ಲಿಂಗೈಕ್ಯ ಶ್ರೀ ಶಿವಲಿಂಗ ಸ್ವಾಮೀಜಿ ಮಾಡಿದ ಧರ್ಮ ಕಾರ್ಯಗಳು ಭಕ್ತರ ಮನದಂಗಳದಲ್ಲಿ ಸದಾ ಹಸಿರಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಮುಧೋಳ(ಬಿ) ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಚರಮೂರ್ತಿ ಮಠದ ಲಿಂ. ಶ್ರೀ ಶಿವಲಿಂಗ ಸ್ವಾಮೀಜಿ ಲಿಂಗಾಂಗ ಸಾಮರಸ್ಯದ ಶತಮಾನೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು, ಆದರ್ಶ ಮತ್ತು ಆಚರಣೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಹುಟ್ಟು-ಸಾವಿನ ಮಧ್ಯದ ಬಾಳ ಬದುಕಿನ ಜವಾಬ್ದಾರಿ ಅವರವರದೇ ಆಗಿದೆ ಹೊರತು ಬೇರಾರಿಗೂ ಸಂಬಂಧವಿರಲ್ಲ ಎಂದರು.
ಜೀವನ ತೆರೆದಿಟ್ಟ ಪುಸ್ತಕ. ಈ ಪುಸ್ತಕದ ಮೊದಲ ಪುಟದಲ್ಲಿ ಹುಟ್ಟು, ಕೊನೆಯ ಪುಟದಲ್ಲಿ ಮೃತ್ಯು ಬರೆದಿಟ್ಟಿದ್ದಾನೆ. ಈ ಎರಡರ ಬಂಧನದಿಂದ ಮುಕ್ತಗೊಳಿಸುವುದೇ ವೀರಶೈವ ಧರ್ಮದ ಪರಮ ಗುರಿ. ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕಾಗುತ್ತದೆ. ಜೀವನ ಉನ್ನತಿಗೆ ಧರ್ಮವೇ ದಿಕ್ಸೂಚಿ. ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಬಹಳಷ್ಟು ಮಹತ್ವ ಕೊಡಲಾಗಿದೆ. ಲಿಂ. ಶ್ರೀ ಶಿವಲಿಂಗ ಶಿವಾಚಾರ್ಯರು ಸದಾ ಭಕ್ತರ ಮೇಲೆ ಪ್ರೀತಿ ವಾತ್ಸಲ್ಯವನ್ನಿಟ್ಟು ಶುಭ ಹಾರೈಸಿದ್ದಾರೆ ಎಂದು ನುಡಿದರು.
ನೇತೃತ್ವ ವಹಿಸಿದ್ದ ಶ್ರೀ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯ ಮಾತನಾಡಿ, ಚರಮೂರ್ತಿ ಮಠದ ಇತಿಹಾಸದಲ್ಲಿ ಇಂದು ಅವಿಸ್ಮರಣೀಯ ದಿನ. ಪೂರ್ವಜರ ಬಹುದಿನಗಳ ಕನಸು ನನಸಾದ ಸುದಿನ. ಶ್ರೀ ಶಿವಲಿಂಗ ಶಿವಾಚಾರ್ಯ ಲಿಂಗೈಕ್ಯರಾಗಿ ನೂರು ವರುಷ ಪೂರ್ಣಗೊಂಡಿದ್ದರಿಂದ ಶತಮಾನೋತ್ಸವ ಹಮ್ಮಿಕೊಂಡಿರುವುದು ಭಕ್ತ ಸಂಕುಲಕ್ಕೆ ಸಂತೋಷ ತಂದಿದೆ. ಶ್ರೀ ರಂಭಾಪುರಿ ಪೀಠದ ಶಾಖಾ ಚರಮೂರ್ತಿ ಮಠ ಇದಾಗಿದ್ದರಿಂದ ಜಗದ್ಗುರುಗಳ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಭಿನ್ನವಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ಧರ್ಮವೇ ದಿಕ್ಸೂಚಿ. ಮಾನವೀಯ ಮೌಲ್ಯಗಳನ್ನು ಅರಿತು ಬೆರೆತು ನಡೆದಾಗ ಬದುಕು ಸಾರ್ಥಕ. ಶಿವಲಿಂಗ ಶ್ರೀಗಳ ಲಿಂಗಾಂಗ ಸಾಮರಸ್ಯ ಸಮಾರಂಭದ ಉದ್ಘಾಟನೆ ಮಾಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ, ಯಂಕಂಚಿ ಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಹೆಡಗಾಪುರದ ಶಿವಲಿಂಗ ಶ್ರೀ, ಹಣೆಗಾಂವದ ಶಂಕರಲಿಂಗ ಶ್ರೀ, ಹೆಡಗಾಪುರದ ದಾರುಕಲಿಂಗ ಶ್ರೀ, ದೇವಣಿಯ ಸಿದ್ಧಲಿಂಗ ಶ್ರೀ, ಕೌಳಾಸದ ಬಸವಲಿಂಗ ಶ್ರೀ, ಔರಾದ್‌ನ ರವಿಸ್ವಾಮಿ ಇದ್ದರು.
ಶ್ರೀ ಶಿವಲಿಂಗೇಶ್ವರ ಮಹಿಳಾ ರುದ್ರ ಸಂಘ ಸದಸ್ಯರಿಂದ ವೇದಘೋಷ, ವೀರಭದ್ರಯ್ಯ ಕಟ್ಟಿಸಂಗಾವಿ ಅವರಿಂದ ಪ್ರಾರ್ಥನಾ ಗೀತೆ ಜರುಗಿತು. ಜೇರಟಗಿ ಮಡಿವಾಳೇಶ್ವರ ಶಾಸ್ತಿç ನಿರೂಪಣೆ ಮಾಡಿದರು. ಸ್ಮರಣ ಸಂಚಿಕೆ, ಕಾರುಣ್ಯ ಕುಸುಮ ಕೃತಿ ಬಿಡುಗಡೆ ಮಾಡಲಾಯಿತು.
ಭವ್ಯ ಮೆರವಣಿಗೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳನ್ನು ಅಲಂಕೃತ ಸಾರೋಟಿನಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಭಜನಾ ಸಂಘ, ವೀರಗಾಸೆ, ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಡೊಳ್ಳು ಕಲಾವಿದರು ಮೆರವಣಿಗೆಗೆ ಮೆರುಗು ತಂದುಕೊಟ್ಟರು.
ಭಗವಂತ ನಿಸರ್ಗದ ಎಲ್ಲ ಸಂಪತ್ತನ್ನು ಮನುಷ್ಯನಿಗೆ ಕೊಟ್ಟಿದ್ದರೂ ತೃಪ್ತಿಯಿಲ್ಲ. ಭೌತಿಕ ಸಂಪತ್ತಿನ ವ್ಯಾಮೋಹಕ್ಕೆ ಬಲಿಯಾಗಿ ತನ್ನ ಸುಂದರವಾದ ಬದುಕು ನಾಶ ಮಾಡಿಕೊಳ್ಳುತ್ತಿದ್ದಾನೆ. ಇಂಥ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮದ ಸಿದ್ಧಾಂತ.
| ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು