ಜನಸಾಮಾನ್ಯರ ಬದುಕು ದುಸ್ತರ ಮಾಡಿರುವ ಕೇಂದ್ರ

ಸಂಸದ ಆರ್.ಧ್ರುವನಾರಾಯಣ್ ಟೀಕೆ*ಕಾಂಗ್ರೆಸ್‌ನ ಬೂತ್ ಅಧ್ಯಕ್ಷರು, ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮ

ಯಳಂದೂರು: ರೈತರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಗ್ಯಾಸ್, ಡೀಸೆಲ್, ಪೆಟ್ರೋಲ್ ದರ ಹೆಚ್ಚು ಮಾಡಿ ಸಾಮಾನ್ಯ ಜನರ ಬದುಕನ್ನೇ ದುಸ್ತರ ಮಾಡಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ಟೀಕಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಯ ಮೈದಾನದಲ್ಲಿ ಕೊಳ್ಳೇಗಾಲ ಹಾಗೂ ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ವ ಶಿಕ್ಷಣ ಯೋಜನೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಗೆ ಹಣವೇ ನೀಡಿಲ್ಲ. ಗ್ರಾಮಾಂತರ ಕುಡಿಯುವ ನೀರಿನ ಯೋಜನೆಗಳಿಗೆ ಹಣವನ್ನೇ ನೀಡುತ್ತಿಲ್ಲ. ತಳವಾರ, ಪರಿವಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೂ ಇನ್ನೂ ಇದಕ್ಕೆ ಕ್ಯಾಬಿನೇಟ್‌ನಲ್ಲಿ ಅನುಮೋದನೆ ನೀಡಿಲ್ಲ. 7 ಜನ ವೀರಶೈವ ಸಂಸದರಿದ್ದರೂ ಒಬ್ಬರಿಗೂ ಮಂತ್ರಿ ಸ್ಥಾನ ನೀಡಿಲ್ಲ. ಇದನ್ನು ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಬೇಕಿದೆ.

ಸೇನಾ ನೆಲೆಗಳ ಮೇಲೆ ದಾಳಿ ನಡೆದಿರುವುದು ಕೇಂದ್ರ ಸರ್ಕಾರದ ದೌರ್ಬಲ್ಯ. ಪಠಾಣ್ ಕೋಟ್ ಸೇರಿದಂತೆ ಅನೇಕ ನೌಕಾ ನೆಲೆಗಳ ಮೇಲೆಯೇ ಪಾಕಿಸ್ತಾನ ದಾಳಿ ನಡೆಸಿದೆ. ನೂರಾರು ಸೈನಿಕರು, ಸಾರ್ವಜನಿಕರು ಶತ್ರು ಪಾಳಯದ ಗುಂಡಿಗೆ ಬಲಿಯಾಗಿದ್ದಾರೆ. ಇದು ಸರ್ಕಾರದ ದೌರ್ಬಲ್ಯವಾಗಿದೆ ಎಂದು ದೂರಿದರು.

ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಅನಂತ್‌ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಒಂದೇ ಒಂದು ಮಾತು ಹೇಳಿದ ಕೂಡಲೇ ನಾನು ಬಿಜೆಪಿ ತೊರೆದೆ. ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದರು. ಆದರೆ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ನನಗೆ ಸೋಲಾಯಿತು. ಇದು ಮುಂಬರುವ ಲೋಕಸಭಾ ಚುನಾವಣೆಗೆ ಪಾಠವಾಗಲಿದೆ. ಮತದಾರರ ವಿಶ್ವಾಸ ಗಳಿಸಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಕೆಲಸವನ್ನು ಮಾಡಬೇಕಿದೆ. ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಆಧಾರ ಸ್ತಂಭಗಳಾಗಿದ್ದು ಮತ್ತಷ್ಟು ಜಾಗೃತರಾಗಿ ಕೆಲಸ ಮಾಡಬೇಕಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮಾತನಾಡಿ, ಬೂತ್ ಮಟ್ಟದಲ್ಲಿ ಶಕ್ತಿ ಕಾರ್ಯಕ್ರಮ, ಹೊಸ ಸದಸ್ಯರ ನೋಂದಣಿ, ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ದೌರ್ಬಲ್ಯ ಖಂಡಿಸಿ ಅ. 22ರಂದು ಚಾಮರಾಜನಗರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ , ಎಚ್.ಡಿ.ಕೋಟೆಯ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜು, ಪಕ್ಷದ ಮುಖಂಡ ಸುಧೀರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಬಸವರಾಜು, ಕೆಪಿಸಿಸಿ ಕಾರ್ಯದರ್ಶಿ ವಾಸಂತಿ ಶಿವಣ್ಣ, ಶಾಂತಕುಮಾರಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ , ಸದಸ್ಯರಾದ ಉಮಾವತಿ ಸಿದ್ದರಾಜು, ಸದಾಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ತೋಟೇಶ್, ಗಣೇಶ್ ಪ್ರಸಾದ್, ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು ಇತರರು ಇದ್ದರು.