ಅರಕಲಗೂಡು: ಜಾನುವಾರುಗಳಿಗೆ ದೇವತೆ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಆನಂದೂರು ಗ್ರಾಮದ ಶ್ರೀ ತೊಡಕಿನ ಕಲ್ಲಮ್ಮ ದೇವರ ಹಬ್ಬ ಶನಿವಾರ ಸಡಗರ ಸಂಭ್ರಮಗಳಿಂದ ಜರುಗಿತು.
ದೀಪಾವಳಿ ಹಬ್ಬದ ದಿನ ವರ್ಷಕ್ಕೊಮ್ಮೆ ಬಾಗಿಲು ತೆರೆದು ಪೂಜೆ ಸಲ್ಲಿಸುವ ತೊಡಕಿನ ಕಲ್ಲಮ್ಮ ದೇವತೆ ಹಬ್ಬದ ಸಂಭ್ರಮದಲ್ಲಿ ಸಹಸ್ರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗ್ಗೆ ಪ್ರಾತಃಕಾಲದಲ್ಲಿ ದೇವರ ಬಾಗಿಲು ತೆರೆದು ದೇವತೆ ಉತ್ಸವ ಮೂರ್ತಿಯನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾಸ್ನಾನ ಮಾಡಿಸಿ ವಿಧ್ಯುಕ್ತವಾಗಿ ಪೂಜಾ ವಿಧಾನಗಳನ್ನು ಪೂರೈಸಲಾಯಿತು.
ನಂತರ ಮಂಗಳವಾದ್ಯದೊಂದಿಗೆ ಕರೆತಂದು ದೇವಸ್ಥಾನದಲ್ಲಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಭಕ್ತರು ಬೆಳಗ್ಗೆಯಿಂದ ಸಂಜೆವರೆಗೆ ಸರತಿ ಸಾಲಿನಲ್ಲಿ ಸಾಗಿ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಜಾನುವಾರುಗಳಿಗೆ ಉತ್ತಮ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು. ಕೆಲವರು ತಮ್ಮ ಜಾನುವಾರುಗಳಿಗೆ ಕಾಣಿಸಿಕೊಂಡ ಅನಾರೋಗ್ಯ ನಿವಾರಣೆಗೆ ಹೊತ್ತಿದ್ದ ಹರಕೆ ತೀರಿಸಿದರು.
ಹಬ್ಬದ ಪ್ರಯುಕ್ತ ಅಲಂಕೃತ ಜಾನುವಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲಂಕೃತಗೊಳಿಸಿ ಕರೆತಂದಿದ್ದ ಜಾನುವಾರುಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಊರಿನ ಸುತ್ತ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ದೇವಸ್ಥಾನ ಮುಂಭಾಗದ ಕೊಳದಲ್ಲಿ ತುಂಬಿಸಿದ್ದ ಪ್ರಸಾದ ರೂಪದ ನೀರನ್ನು ಬಾಟಲ್‌ಗಳಿಗೆ ತುಂಬಿಸಿಕೊಳ್ಳಲು ಭಕ್ತರು ಮುಗಿಬಿದ್ದರು. ಮನೆಗಳಿಗೆ ಕೊಂಡೊಯ್ದು ಜಾನುವಾರುಗಳಿಗೆ ಪ್ರಸಾದ ನೀರು ಸಂಪ್ರೋಕ್ಷಣೆ ಮಾಡಿ ಆರೋಗ್ಯ ಭಾಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.