ಕೋಲಾರ: ಜಿಲ್ಲಾದ್ಯಂತ ಮಂಗಳವಾರ ಸುಗ್ಗಿಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿತ್ತು. ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯ ಕಾಲದ ಸಂಕ್ರಾಂತಿಯನ್ನು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮಹಿಳೆಯರು ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ, ಶುಭಾಶಯ ಕೋರುವ ರಂಗೋಲಿ ಹಾಕಿ ಅಂಗಳವನ್ನು ಚಿತ್ತಾರಗೊಳಿಸಿದ್ದರು. ಮನೆಯ ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವುಗಳಿಂದ ಸಿಂಗರಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಸಂಪ್ರದಾಯದಂತೆ ಸಗಣಿಯಿಂದ ಬೆನಪ ಮಾಡಿ ಬಾಗಿಲ ಮುಂದೆ ಇಟ್ಟು, ದವಸ ಧಾನ್ಯ ದಾನ ಮಾಡಲಾಯಿತು. ಸಂಜೆ ಕಟಾಮು ರಾಯನಿಗೆ ಪೂಜೆ ಸಲ್ಲಿಸುವ ಮೂಲಕ ರಾಸುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನಗಳನ್ನು ತೋರಣಗಳಿಂದ ಸಿಂಗರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಮಹಿಳೆಯರು ಎಳ್ಳು ಬೆಲ್ಲ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಕೋಲಾರದ ವರದರಾಜ ಸ್ವಾಮಿ ದೇವಾಲಯದ ಸಮೀಪದ ರಾಸುಗಳ ಮೆರವಣಿಗೆ ಪ್ರಾರಂಭವಾಗಿ ಅಮ್ಮವಾರಿ ಪೇಟೆ, ಎಂಬಿ ರಸ್ತೆ, ಬಸ್ ನಿಲ್ದಾಣದ ಮೂಲಕ ಸಾಗಿ ಕೀಲಾರಿಪೇಟೆಯಲ್ಲಿ ಅಂತ್ಯಗೊಂಡಿತು. ಯಾವುದೇ ರೀತಿ ಅಹಿತಕರ ಸಂಘಟನೆಗಳು ಸಂಬವಿಸದಂತೆ ಗಲ್ಪೇಟೆ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
* ರೈತರ ಸಡಗರ
ರೈತರು ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸಾಹದಿಂದ ಹಬ್ಬ ಆಚರಿಸಿದರು. ವರ್ಷವಿಡೀ ಜಮೀನುಗಳಲ್ಲಿ ರೈತರೊಂದಿಗೆ ಹೆಗಲು ಕೊಟ್ಟು ದುಡಿದ ರಾಸುಗಳ ಮೈ ತೊಳೆದು ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಲಾಗಿತ್ತು. ರಾಸುಗಳ ಸಾಮೂಹಿಕ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ, ಸಂಜೆ ಕಿಚ್ಚು ಹಾಯಿಸಲಾಯಿತು. ರೈತರು ಕಿಚ್ಚು ಹಾಯುವ ರಾಸುಗಳೊಂದಿಗೆ ಓಡುತ್ತಾ ಸಂಭ್ರಮಿಸಿದರು. ರೈತ ಮಹಿಳೆಯರು ಮನೆ ಮನೆಗೆ ತೆರಳಿ ಸುಗ್ಗಿ ಹಾಡು-ಹಾಡಿ ದವಸ ಧಾನ್ಯ ಸಂಗ್ರಹಿಸಿದರು.
* ಕಿರುವಾರದಲ್ಲಿ ಧಾನ್ಯ ಸಂಗ್ರಹ
ಮನೆಗಳಲ್ಲಿ ಹಬ್ಬಕ್ಕಾಗಿ ಸಿಹಿ ಪೊಂಗಲ್, ಅವರೆಕಾಳು ಸಾಂಬರ್, ಬೊಂಡಾ, ಮಸಾಲ ವಡೆ, ಪಾಯಸ, ಕಿಚಡಿ, ಕೋಸಂಬರಿ ಸೇರಿ ವಿವಿಧ ಭಕ್ಷ$್ಯ ಸಿದ್ಧಪಡಿಸಲಾಗಿತ್ತು. ಪೂಜೆಯ ನಂತರ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಹಬ್ಬದೂಟ ಸವಿದರು. ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಹಂಚಿದರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ಮಹಿಳೆಯರ ತಂಡವು ಮನೆಮನೆಗೆ ತೆರಳಿ ಧಾನ್ಯ ಸಂಗ್ರಹಿಸಿದ್ದು ವಿಶೇಷವಾಗಿತ್ತು.
* ಅರಾಭಿಕೊತ್ತನೂರಲ್ಲಿ ಸಂಕ್ರಾಂತಿ ಇಲ್ಲ!
ಜಿಲ್ಲೆಯ ಎಲ್ಲೆಡೆ ಸಂಕ್ರಾಂತಿಯು ಶುಭ ಸಂಕೇತವಾದರೆ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಜನರಿಗೆ ಈ ಹಬ್ಬವು ಅಶುಭವಂತೆೆ. ಈ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರೆ ಅಶುಭವಾಗುತ್ತದೆ ಎಂಬುದು ಈ ಗ್ರಾಮಸ್ಥರ ನಂಬಿಕೆ. ಶತಮಾನದಿಂದ ಸಂಕ್ರಾಂತಿ ಆಚರಣೆಯಿಲ್ಲ. ಗ್ರಾಮದಲ್ಲಿ 300ಕ್ಕೂ ಹೆಚ್ಚು ವರ್ಷಗಳ ಹಿಂದೆ ಸಂಕ್ರಾಂತಿ ದಿನ ಜಾನುವಾರುಗಳು ಕಾಲರಾ ಮಾದರಿಯ ಕಾಯಿಲೆಗೆ ತುತ್ತಾಗಿ ಸಾಮೂಹಿಕವಾಗಿ ಮೃತಪಟ್ಟಿದ್ದವು. ಹೀಗಾಗಿ ಗ್ರಾಮದಲ್ಲಿ ಅಂದಿನಿಂದ ಸಂಕ್ರಾಂತಿ ಆಚರಣೆ ನಿಲ್ಲಿಸಲಾಗಿದೆ. ಅದೇ ಸಂಪ್ರದಾಯ ಈಗಲೂ ಮುಂದುವರಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೂರ್ನಾಲ್ಕು ತಲೆಮಾರುಗಳ ಹಿಂದೆ ಸಂಕ್ರಾಂತಿ ಹಬ್ಬದಂದೇ ರಾಸುಗಳು ಮೃತಪಟ್ಟಿದ್ದರಿಂದ ಸಂಕ್ರಾಂತಿ ಆಚರಿಸುವುದಿಲ್ಲ. ಬದಲಿಗೆ ಪ್ರತಿ ವರ್ಷ ಬಸವ ಜಯಂತಿ ದಿನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತ ನಂತರ ರಾಸುಗಳಿಗೆ ಕಾಯಿಲೆ ವಾಸಿಯಾಯಿತಂತೆ. ಪೂರ್ವಜರ ಹರಕೆ ಕಾರಣಕ್ಕೆ ಗ್ರಾಮದಲ್ಲಿ ಹಬ್ಬ ಆಚರಿಸುವುದಿಲ್ಲ ಎಂದು ಗ್ರಾಮದ ಹಿರಿಯ ನಂಜುಂಡಪ್ಪ ತಿಳಿಸಿದರು.
* ಬಸವ ಜಯಂತಿಗೆ ಮೆರವಣಿಗೆ
ಸಂಕ್ರಾಂತಿ ಬದಲಿಗೆ ಬಸವ ಜಯಂತಿ ದಿನ ಬಸವೇಶ್ವರದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆನಂತರ ರಾಸುಗಳನ್ನು ಪೂಜಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಗ್ರಾಮಸ್ಥರು ಮನೆಗಳಲ್ಲಿ ಸಿಹಿ ಅಡುಗೆ ಮಾಡಿ ಭರ್ಜರಿಯಾಗಿ ಹಬ್ಬ ಆಚರಿಸುತ್ತಾರೆ.