ಜನಾರ್ದನ ರೆಡ್ಡಿಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ಡೀಲ್ ಕೇಸಿನಲ್ಲಿ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.

ಸುದೀರ್ಘ ವಿಚಾರಣೆಯ ನಂತರ ಸಿಸಿಬಿ ಪೊಲೀಸರು ಭಾನುವಾರ ಮಧ್ಯಾಹ್ನ ರೆಡ್ಡಿ ಅವರನ್ನು ಬಂಧಿಸಿದ್ದರು. ರೆಡ್ಡಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನಂತರ ಕೋರಮಂಗಲದಲ್ಲಿರುವ 1ನೇ ಎಸಿಎಂಎಂ ಕೋರ್ಟ್​ನ ನ್ಯಾಯಾಧೀಶ ಜಗದೀಶ್​ ಅವರ ಮುಂದೆ ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶರು ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನವೆಂಬರ್​ 14ರವರೆಗೆ ಜೈಲಿನಲ್ಲಿರಬೇಕು. ಇದಕ್ಕೂ ಮುನ್ನ ಜನಾರ್ದನ ರೆಡ್ಡಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.