ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಬೆಂಗಳೂರು/ಹಾಸನ: ಭಾನುವಾರ ನಡೆಯಬೇಕಿದ್ದ ಪೊಲೀಸ್ ಕಾನ್​ಸ್ಟೆಬಲ್ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಜಾಲದ ಕಿಂಗ್​ಪಿನ್ ಶಿವಕುಮಾರಯ್ಯ ಸಹಿತ 7 ಆರೋಪಿಗಳು ಮತ್ತು 116 ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016ರಲ್ಲಿ ದ್ವಿತೀಯ ಪಿಯು ಕೆಮಿಸ್ಟ್ರಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಶಿಕ್ಷಣ ಇಲಾಖೆಗೆ ತಲೆನೋವಾಗಿದ್ದ ಶಿವಕುಮಾರಯ್ಯ, ಬಂಧಿತನಾಗಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದ. ಪ್ರಶ್ನೆಪತ್ರಿಕೆ ನೀಡುವುದಾಗಿ ಅಭ್ಯರ್ಥಿಗಳಿಂದ ತಲಾ 6-8 ಲಕ್ಷ ರೂ.ಗಳಂತೆ ಒಟ್ಟು 7 ಕೋಟಿ ರೂಪಾಯಿಗಳನ್ನು ಈತ ವಸೂಲಿ ಮಾಡಿದ್ದ ಶಂಕೆಯಿದೆ. ಪ್ರಶ್ನೆಪತ್ರಿಕೆ ನೀಡುವ ಜತೆಗೆ ಉತ್ತರ ಬರೆಯುವ ಬಗ್ಗೆ ತರಬೇತಿ ನೀಡಲು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಶನಿವಾರಸಂತೆ ಬಳಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದ. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ಮತ್ತೆ ಕಿಂಗ್​ಪಿನ್ ಕರಾಮತ್ತು

ಶಿಕ್ಷಣ ಇಲಾಖೆ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಕಂಟಕವಾಗಿರುವ ಕಿಂಗ್​ಪಿನ್ ಶಿವಕುಮಾರಯ್ಯ ಕಾನ್​ಸ್ಟೆಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೀಕ್ ಮಾಡುವಲ್ಲಿ ಮತ್ತೆ ಕರಾಮತ್ತು ತೋರಿದ್ದಾನೆ.

2016ರಲ್ಲಿ ದ್ವೀತಿಯ ಪಿಯು ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಶಿಕ್ಷಣ ಇಲಾಖೆಯನ್ನೇ ಕಂಗಾಲು ಮಾಡಿದ್ದ ಶಿವಕುಮಾರಯ್ಯ ಅಲಿಯಾಸ್ ಗುರೂಜಿ, ಕೋಕಾ ಕಾಯ್ದೆಯಡಿ ಬಂಧಿತನಾಗಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದ 1 ವರ್ಷದಲ್ಲಿ ಮತ್ತೆ ಹಳೇ ಚಾಳಿಗೆ ಕೈ ಹಾಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಬಸವರಾಜು ಎಂಬಾತ ತಲೆಮರೆಸಿಕೊಂಡಿದ್ದಾನೆ. ಪ್ರಶ್ನೆಪತ್ರಿಕೆ ಪಡೆಯಲು ಬಂದಿದ್ದ 116 ಅಭ್ಯರ್ಥಿಗಳು, 7 ಚಾಲಕರು, ಕ್ಲೀನರ್, 4 ಮಿನಿ ಬಸ್ ಮತ್ತು 1 ಇನೋವಾ ಕಾರನ್ನು ವಶಕ್ಕೆ ಪಡೆದಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ನ.25ರ ಭಾನುವಾರ 2,113 ಕಾನ್​ಸ್ಟೆಬಲ್ ಹುದ್ದೆಗಳಿಗೆ ರಾಜ್ಯವ್ಯಾಪಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿತ್ತು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕೊಡುವುದಾಗಿ ಶಿವಕುಮಾರಯ್ಯ ಅಭ್ಯರ್ಥಿಗಳಿಗೆ ಆಮಿಷವೊಡ್ಡಿದ್ದ. ಉತ್ತರ ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ 116 ಅಭ್ಯರ್ಥಿಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಶನಿವಾರ ಸಂತೆ ಬಳಿಯ ಕಲ್ಲಮಠದ ಶ್ರೀ ನಂಜುಂಡೇಶ್ವರ ವಿದ್ಯಾಮಂದಿರದ ಕೊಠಡಿಯಲ್ಲಿ ಸೇರಿಕೊಂಡಿದ್ದರು. ಎಲ್ಲರಿಗೂ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಕೊಡಲು ಶಿವಕುಮಾರಯ್ಯ ಮತ್ತು ಬಸವರಾಜು ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಸಿಸಿಬಿ ಡಿಸಿಪಿ ಎಸ್.ಗಿರೀಶ್, ಎಸಿಪಿಗಳಾದ ಬಿ.ಆರ್.ವೇಣುಗೋಪಾಲ್ ಮತ್ತು ಬಿ.ಬಾಲರಾಜು ನೇತೃತ್ವದ ವಿಶೇಷ ತಂಡ ಶನಿವಾರ ಮುಂಜಾನೆ ದಾಳಿ ನಡೆಸಿ ಕಿಂಗ್​ಪಿನ್ ಶಿವಕುಮಾರಯ್ಯ ಸೇರಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

7 ಕೋಟಿ ರೂ. ವಸೂಲಿ

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಅಭ್ಯರ್ಥಿಗಳಿಂದ ತಲಾ 6-8 ಲಕ್ಷ ರೂ.ಗಳಂತೆ ಒಟ್ಟು 7 ಕೋಟಿ ರೂ. ವಸೂಲಿ ಮಾಡಿದ್ದ. ಎಲ್ಲರಿಗೂ ಪ್ರಶ್ನೆ ಪತ್ರಿಕೆ ಪ್ರತಿ ನೀಡಿ ಉತ್ತರ ಬರೆಯುವ ಬಗ್ಗೆ ತರಬೇತಿ ನೀಡಲು ಕರೆಯಿಸಿಕೊಂಡಿದ್ದ. ಇದರಲ್ಲಿ 111 ಪುರುಷ ಹಾಗೂ ಐವರು ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಶನಿವಾರ ಮಧ್ಯಾಹ್ನ ಹಾಸನದ ಡಿಎಆರ್ ವಸತಿ ಗೃಹದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಅಭ್ಯರ್ಥಿಗಳು ಮತ್ತು ಚಾಲಕರು, ಕ್ಲೀನರ್​ಗಳನ್ನು ಆರೋಪಿಗಳನ್ನಾಗಿ ಮಾಡುವುದಾಗಿ ಸಿಸಿಬಿ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಪ್ಯಾಕಿಂಗ್ ವೇಳೆ ಸೋರಿಕೆ

ಜಿಲ್ಲಾ ಖಜಾನೆಗಳಿಗೆ ತಲುಪಿದ್ದ ಪ್ರಶ್ನೆ ಪತ್ರಿಕೆಗಳನ್ನು ಶನಿವಾರ ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡಬೇಕಿತ್ತು. ಅದಕ್ಕೂ ಮೊದಲೇ ಪ್ಯಾಕಿಂಗ್ ವೇಳೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಅದು ಸಿಐಡಿ ಕಚೇರಿಯಲ್ಲೋ ಅಥವಾ ಮುದ್ರಣ ಕೇಂದ್ರದಲ್ಲಿಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಯಾರೀ ಕಿಂಗ್​ಪಿನ್ ಶಿವಕುಮಾರಯ್ಯ?

ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ, ಮೂಲತಃ ತುಮಕೂರಿನ ಶಿವಕುಮಾರಯ್ಯ ಅಲಿಯಾಸ್ ಗುರೂಜಿ (67) ನಿವೃತ್ತ ಶಿಕ್ಷಕ. ವಿವಿಧೆಡೆ 8ಕ್ಕೂ ಅಧಿಕ ಟುಟ್ಯೋರಿಯಲ್ಸ್ ತೆರೆದಿರುವ ಈತ, ಕರ್ನಾಟಕ ಲೋಕಸೇವಾ ಆಯೋಗ, ಎಸ್ಸೆಸ್ಸೆಲ್ಸಿ, ಪಿಯು, ವೈದ್ಯಕೀಯ, ಪೊಲೀಸ್ ನೇಮಕಾತಿ ಪರೀಕ್ಷೆ ಸೇರಿ ಶಿಕ್ಷಣ ಇಲಾಖೆಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಲ್ಲಿ ಪರಿಣಿತ. ಈ ದಂಧೆಗೆ ಈತನ ಪುತ್ರ ದಿನೇಶ್, ಅಣ್ಣನ ಮಗ ಕೈ ಜೋಡಿಸಿದ್ದರು. 2016ರ ಮಾ.21 ಮತ್ತು ಮಾ.31ರಂದು ನಡೆಯಬೇಕಿದ್ದ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆಯನ್ನು ಎರಡು ಬಾರಿ ಸೋರಿಕೆ ಮಾಡಿ ಸಿಐಡಿ ಪೊಲೀಸರಿಗೆ ಸವಾಲು ಒಡ್ಡಿದ್ದ. 2008ರಲ್ಲಿ ವಿಜಯನಗರ ಠಾಣೆ, ಚಂದ್ರಾಲೇಔಟ್ ಠಾಣೆ, 2009-ಮಲ್ಲೇಶ್ವರ ಠಾಣೆ, 2011-ಗುಬ್ಬಿ ಠಾಣೆ, 2013- ತುಮಕೂರು ಠಾಣೆಯಲ್ಲಿ ಹಾಗೂ 2014ರಲ್ಲಿ ನಂದಿನಿ ಲೇಔಟ್ ಠಾಣೆಯಲ್ಲಿ ಈತನ ವಿರುದ್ಧ ಎಫ್​ಐಆರ್ ದಾಖಲಾಗಿವೆ. ಈ ಪೈಕಿ 2 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ. ಸಾಕ್ಷಿದಾರರಿಗೆ ಹಣದ ಆಮಿಷವೊಡ್ಡಿ ಕೋರ್ಟ್​ಗೆ ಹಾಜರಾಗದಂತೆ ನೋಡಿಕೊಳ್ಳುತ್ತಿದ್ದ.

ಅಭ್ಯರ್ಥಿಗಳ ಆಕ್ರೋಶ

ನ.18ಕ್ಕೆ ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ಬಳ್ಳಾರಿ ಹಂಪಿ ಉತ್ಸವ ಮತ್ತು ರಾಣಿ ಚನ್ನಮ್ಮ ಮಹಿಳಾ ವಿವಿ ಪದವಿ ಪರೀಕ್ಷೆ ಹಿನ್ನೆಲೆಯಲ್ಲಿ ನ.25ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಮುಂದೂಡಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ಕಮಿಷನರೇಟ್, ಜಿಲ್ಲಾ ಕೇಂದ್ರಕ್ಕೆ ಬರಲು ಸಿದ್ದರಾಗಿದ್ದರು. ಏಕಾಏಕಿ ಮುಂದೂಡಿರುವುದು ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿಗೆ ಬರಲು ಪರೀಕ್ಷಾರ್ಥಿಗಳು ಮುಂಗಡ ಕಾಯ್ದಿರಿಸಿದ್ದ ಟಿಕೆಟ್ ಹಣ ನೀಡಲು ಹುಬ್ಬಳ್ಳಿಯಲ್ಲಿ ರೈಲ್ವೆ ಸಿಬ್ಬಂದಿ ನಿರಾಕರಿದ್ದಾರೆ.

ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿ

ಅಪರಿಚಿತ ವ್ಯಕ್ತಿಗಳ ದಾಖಲೆ ಬಳಸಿ ಮೊಬೈಲ್ ಸಿಮ್ ಕಾರ್ಡ್​ಗಳನ್ನು ಖರೀದಿಸಿದ್ದ ಶಿವಕುಮಾರಯ್ಯ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಅಭ್ಯರ್ಥಿಗಳನ್ನು ಸಂಪರ್ಕ ಮಾಡಿದ್ದ. ಈ ಕೆಲಸಕ್ಕೆ ಈತನ ಜತೆಗೆ ಇನ್ನೂ ಕೆಲವರು ಕೈ ಜೋಡಿಸಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ.

One Reply to “ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್”

Comments are closed.