ಹುಕ್ಕೇರಿ: ಅಹಿತಕರ ಘಟನೆ, ಗಲಭೆ ಹಾಗೂ ಕಳ್ಳರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ 21 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಿಸಿ ಕ್ಯಾಮರಾಗಳ ನಿಯಂತ್ರಣ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿ, ಸ್ಥಳೀಯ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಿರುವ ಕ್ಯಾಮರಾಗಳಲ್ಲಿ ದಿನದ 24 ಗಂಟೆಯ ಬೆಳವಣಿಗೆ ಬಗ್ಗೆ ಕಣ್ಗಾವಲು ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಸೇರಿ ವಿವಿಧ ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.
ಹಿರಾ ಶುಗರ್ಸ್ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತ್ಯಪ್ಪ ನಾಯಿಕ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಸದಸ್ಯ ರಾಜೇಶ ಮುನ್ನೋಳಿ, ಮಹಾಂತೇಶ ತಳವಾರ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಚನ್ನಪ್ಪ ಗಜಬರ, ರಮೇಶ ಹುಂಜಿ, ಸಿಪಿಐ ಮಹಾಂತೇಶ ಬಸ್ಸಾಪೂರೆ ಇತರರಿದ್ದರು.