ಎಲ್ಲೆಂದರಲ್ಲಿ ಕಸ ಚೆಲ್ಲೀರಿ ಜೋಕೆ!

ಬ್ಯಾಡಗಿ: ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿಸಲು ಪುರಸಭೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮನೆಮನೆಗೆ ಕೂಲಿಕಾರ್ವಿುಕರಿಂದ ಕಸ ಸಂಗ್ರಹಿಸುವ ಯೋಜನೆ ಯಶಸ್ವಿಯಾಗಿದೆ. ಆದರೂ, ಕೆಲವೆಡೆ ಸಾರ್ವಜನಿಕರು ಕಸ ಎಸೆಯುವುದು ನಿಂತಿಲ್ಲ. ಹೀಗಾಗಿ ಇದನ್ನು ತಡೆಯುವ ಉದ್ದೇಶದಿಂದ ಸಿ.ಸಿ. ಕ್ಯಾಮರಾ ಅಳವಡಿಸಿದೆ.

ಪಟ್ಟಣದ ಇಸ್ಲಾಂಪುರ ಗಲ್ಲಿ, ಮುಖ್ಯರಸ್ತೆ, ಮಲ್ಲೂರು ರಸ್ತೆ, ಗಾಂಧಿ ನಗರ, ವಾಲ್ಮೀಕಿ ಬಡಾವಣೆ ಸೇರಿ ಕೆಲ ರಸ್ತೆಗಳ ಪಕ್ಕದಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದಾರೆ. ಅದನ್ನು ಹಂದಿ-ನಾಯಿಗಳು ಎಳೆದಾಡಿ ರಸ್ತೆಯಲ್ಲಿ ಹರಡುತ್ತಿವೆ.

ತ್ಯಾಜ್ಯ ಎಸೆಯುವವರಿಗೆ ದಂಡ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೌಚಗೃಹ ನಿರ್ವಣಕ್ಕೆ ಜಾಗೃತಿ ಹಾಗೂ ರೋಗ ರುಜಿನಗಳ ತಡೆಗಟ್ಟುವ ವಿಧಾನ, ಸ್ವಚ್ಛತೆ ಕುರಿತು ಮಾಹಿತಿ ನೀಡಲು ಹಲವು ಕ್ರಮ, ಯೋಜನೆ ಜಾರಿಗೆ ತಂದಿವೆ. ಆದರೂ, ಕೆಲ ನಾಗರಿಕರು ಕಸ ತಂದು ಎಸೆಯುವ ಚಾಳಿ ಬಿಟ್ಟಿಲ್ಲ. ವರ್ತಕರು, ಬೀದಿಬದಿ ವ್ಯಾಪಾರಿಗಳು ಕಸ ಎಸೆದು ವಾತಾವರಣ ಹಾಳು ಮಾಡುತ್ತಿದ್ದರು. ಇದೀಗ ಪಟ್ಟಣದ ಸ್ವಚ್ಛತೆಗೆ ಪಣ ತೊಟ್ಟಿರುವ ಪುರಸಭೆ, ಕಸ ಎಸೆಯುವವರಿಗೆ ಗಾಳ ಹಾಕಲು ಸಿ.ಸಿ. ಕಾಮರಾ ಮೊರೆ ಹೋಗಿದೆ. ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆಯುವವರನ್ನು ಗುರುತಿಸಿ ದಂಡ ಕಟ್ಟಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ನಾಲ್ಕು ಕಡೆ ಕ್ಯಾಮರಾ ಫಿಕ್ಸ್: ಪಟ್ಟಣದ ಮಲ್ಲೂರು ರಸ್ತೆಯ ಬಸ್ ತಂಗುದಾಣದ ಬಳಿ ಹಾಗೂ ಹಳೇಪೇಟೆಯ ರಸ್ತೆಯಲ್ಲಿ ಎರಡು ಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ನಾಲ್ಕಾರು ಕಡೆಗಳಲ್ಲಿ ಕ್ಯಾಮರಾ ಅಳವಡಿಸಲು ಪುರಸಭೆ ಚಿಂತನೆ ನಡೆಸಿದೆ. ಹೀಗಾಗಿ ಸಾರ್ವಜನಿಕ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವವರಿಗೆ, ಕಸ ಚೆಲ್ಲುವವರಿಗೆ ಕಡಿವಾಣ ಬೀಳಲಿದೆ.

ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಹಾಕುವವರು ಪುರಸಭೆಗೆ ದಂಡ ತುಂಬಬೇಕಿದೆ. ಕಸದ ವಾಹನಗಳಿಗೆ ಕಸ ಹಾಕುವುದು ಕಡ್ಡಾಯ. ಈ ಕ್ಯಾಮರಾ ಅಳವಡಿಸಿದ್ದರಿಂದ ಇನ್ನೊಂದೆಡೆ ಪೊಲೀಸ್ ಇಲಾಖೆಗೆ ಅನುಕೂಲವಾಗಲಿದ್ದು, ಅಕ್ರಮ ಚಟುವಟಿಕೆ ನಡೆಸುವ ಪುಢಾರಿಗಳ ಮೇಲೆ ಕಣ್ಣೀಡಲು ಸಹಾಯವಾಗಲಿದೆ.

ಪುರಸಭೆ ಯಾವುದೇ ಯೋಜನೆ ಜಾರಿಗೊಳಿಸುವ ಮುನ್ನ ನಾಗರಿಕರ ಹಿತ ಹೊಂದಿರುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ಕಸ ಬೀಳುವುದನ್ನು ತಪ್ಪಿಸುವ ಸಲುವಾಗಿ ಗುತ್ತಿಗೆ ಕಾರ್ವಿುಕರಿಗೆ ಟೆಂಡರ್ ನೀಡಲಾಗಿದೆ. ಇದಕ್ಕಾಗಿ ಪ್ರತಿದಿನ ಕಸ ಹೊತ್ತೊಯ್ಯಲು ಪುರಸಭೆ ನಾಲ್ಕು ವಾಹನ ಹಾಗೂ ಕೂಲಿಕಾರ್ವಿುಕರು ಆಗಮಿಸುತ್ತಾರೆ. ಆದರೂ, ಕೆಲವರು ಕಸ ರಸ್ತೆಗೆ ಚೆಲ್ಲುತ್ತಿರುವುದು ಬೇಸರ ಮೂಡಿಸಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಸಿ.ಸಿ. ಕ್ಯಾಮರಾ ಅಳವಡಿಸಲಾಗುತ್ತಿದೆ.
| ವಿ.ಎಂ. ಪೂಜಾರ ಮುಖ್ಯಾಧಿಕಾರಿ