ಉತ್ತರಪತ್ರಿಕೆ ನಕಲು ಪ್ರತಿ ಪುಟಕ್ಕೆ 2 ರೂ. ನಂತೆ ನೀಡಿ ನ್ಯಾಯಾಂಗ ನಿಂದನೆಯಿಂದ ಪಾರಾದ ಸಿಬಿಎಸ್ಇ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಡಿ ಪ್ರತಿ ಪುಟಕ್ಕೆ 2 ರೂಪಾಯಿಯಂತೆ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ನಕಲು ಒದಗಿಸಲು ಸಿದ್ಧ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್​ಇ) ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಮಂಡಳಿ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂಕೋರ್ಟ್​ ಮಂಗಳವಾರ ಇತ್ಯರ್ಥಪಡಿಸಿದೆ.

ಉತ್ತರ ಪತ್ರಿಕೆ ನಕಲು ನೀಡಲು ಪಡೆಯುವ ಶುಲ್ಕದಲ್ಲಿ ಮಂಡಳಿ ಸುಪ್ರೀಂಕೋರ್ಟ್​ ಆದೇಶವನ್ನು ಪಾಲಿಸುತ್ತಿದೆ ಎಂದು ಅದರ ಪರ ವಕೀಲ ಮನೀಂದರ್​ ಸಿಂಗ್​ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​, ನ್ಯಾಯಮೂರ್ತಿಗಳಾದ ಎಸ್​.ಕೆ.ಕೌಲ್​, ಕೆ.ಎಂ ಜೋಸೆಫ್​ ಅವರಿದ್ದ ಪೀಠ ಸ್ವೀಕರಿಸಿದೆ.

ಸಿಬಿಎಸ್​ಇ ಕೋರ್ಟ್​ ಆದೇಶವನ್ನು ಮೀರಿ ಉತ್ತರ ಪತ್ರಿಕೆಗಳಿಗಾಗಿ ವಿದ್ಯಾರ್ಥಿಗಳಿಂದ ಮಿತಿಮೀರಿದ ಹಣ ಪಡೆಯುತ್ತಿದೆ. ಇದರಿಂದ ನ್ಯಾಯಾಂಗ ನಿಂದನೆಯಾಗುತ್ತಿದೆ ಎಂದು ಯುವ ವಕೀಲರ ‘ವಿಶಲ್​ ಫಾರ್ ಪಬ್ಲಿಕ್​ ಇಂಟರೆಸ್ಟ್ (ಡಬ್ಲ್ಯೂಎಚ್​ಐಪಿ)’ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ನಕಲು ಪ್ರತಿ ನೀಡಲು ಸಿಬಿಎಸ್​ಇ 10 ನೇ ತರಗತಿ ವಿದ್ಯಾರ್ಥಿಗಳಿಂದ 1,000 ರೂ., 12 ನೇ ತರಗತಿ ವಿದ್ಯಾರ್ಥಿಗಳಿಂದ 1,200 ರೂಪಾಯಿಗಳನ್ನು ಪಡೆಯುತ್ತಿದೆ. ಇದು ಅಧಿಕವಾಯಿತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಪ್ರತಿ ವಿದ್ಯಾರ್ಥಿಯು ಅವರ ಮೌಲ್ಯಮಾಪನವಾದ ಉತ್ತರ ಪತ್ರಿಕೆಯ ನಕಲನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಮೂಲಭೂತ ಹಾಗೂ ಕಾನೂನಾತ್ಮಕ ಹಕ್ಕು ಹೊಂದಿದ್ದಾರೆ ಎಂದು 2011ರಲ್ಲಿ ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಈ ತೀರ್ಪನ್ನು ಸಿಬಿಎಸ್​ಇ ತುಂಬ ಎಚ್ಚರಿಕೆಯಿಂದ ಪಾಲಿಸಬೇಕು ಎಂದು 2016ರಲ್ಲಿ ಕೋರ್ಟ್​ ಸೂಚನೆ ನೀಡಿತ್ತು.