ಬೋಫೋರ್ಸ್ ಹಗರಣದ ಹೆಚ್ಚಿನ ತನಿಖೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಬಿಐ

ನವದೆಹಲಿ: ದೇಶಾದ್ಯಂತ ತೀವ್ರ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದ 64 ಕೋಟಿ ರೂ.ನ ಬೋಫೋರ್ಸ್ ಫಿರಂಗಿ ಖರೀದಿ ಹಗರಣ ಕುರಿತಂತೆ ಹೆಚ್ಚಿನ ತನಿಖೆಗಾಗಿ ಅನುಮತಿಯನ್ನು ಕೋರಿ ದೆಹಲಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ಹಿಂಪಡೆದಿದೆ.

ಈ ಕುರಿತು ಮ್ಯಾಜಿಸ್ಟ್ರೇಟ್‌ ನವೀನ್‌ ಕುಮಾರ್‌ ಕಶ್ಯಪ್‌ ಅವರಿದ್ದ ಪೀಠಕ್ಕೆ ತಿಳಿಸಿರುವ ಸಿಬಿಐ, ಫೆ. 1, 2018ರಂದು ಭೋಫೋರ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಸಲ್ಲಿಸಲಾದ ಅರ್ಜಿಯನ್ನು ಹಿಂಪಡೆಯಲು ಬಯಸಿದ್ದೇವೆ. ಈಗ ಅರ್ಜಿಯನ್ನು ಹಿಂಪಡೆಯುತ್ತಿದ್ದು ಮುಂದಿನ ಕ್ರಮಗಳ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದೆ.

ಈ ಮೊದಲು ಹಗರಣಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆಗಳು ಮತ್ತು ಸಾಕ್ಷಿಗಳನ್ನು ಹೊಂದಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
ಸಿಬಿಐನ ಈ ನಡೆಯನ್ನು ಕುರಿತು ಪ್ರತಿಕ್ರಿಯಿಸಿರುವ ನ್ಯಾಯಾಧೀಶರು, ಸಿಬಿಐನ ಈ ನಿರ್ಧಾರದ ಹಿಂದೆ ಉತ್ತಮ ಕಾರಣವಿದ್ದು, ಈ ಪ್ರಕರಣದಲ್ಲಿ ಅರ್ಜಿಯನ್ನು ಹಿಂಪಡೆಯಲು ಅವರು ಬಯಸಿದರೆ ಅರ್ಜಿದಾರರಾಗಿ ಆ ಹಕ್ಕು ಅವರಿಗೆ ಇದೆ ಎಂದು ಹೇಳಿದೆ.

ಡಿ.4, 2018ರಂದು ನ್ಯಾಯಾಲಯವು ಬೋಪೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಏಕೆ ಸಿಬಿಐಗೆ ಅನುಮತಿ ನೀಡಬೇಕೆಂದು ಪ್ರಶ್ನಿಸಿತ್ತು.

2005 ಮೇ 31ರಂದು ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಆರೋಪಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಸಿಬಿಐ ಸುಪ್ರೀಂ ಕೋರ್ಟ್​ಗೆ ಫೆ. 2, 2018ರಂದು ಮೇಲ್ಮನವಿ ಸಲ್ಲಿಸಿತ್ತು. 13 ವರ್ಷಗಳ ಹಿಂದಿನ ತೀರ್ಪಿಗೆ ಈಗ ಯಾಕೆ ತಕರಾರು ತೆಗೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದ ಸುಪ್ರೀಂ ಸಿಬಿಐನ ಮನವಿಯನ್ನು ವಜಾ ಮಾಡಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked *