ಸಿಬಿಐ ನಡೆಗೆ ಸಿಜೆಐ ಗರಂ

>

ನವದೆಹಲಿ: ಸಿಬಿಐನಲ್ಲಿ ಭ್ರಷ್ಟಾಚಾರ ಆರೋಪದ ಆಂತರಿಕ ಕಿತ್ತಾಟದ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಅರ್ಜಿದಾರರ ವರ್ತನೆ ಕುರಿತು ಮಂಗಳವಾರ ಅಸಮಾಧಾನ ಹೊರಹಾಕಿದೆ. ನ್ಯಾಯಪೀಠದ ಎಚ್ಚರಿಕೆ ಹೊರತಾಗಿಯೂ ಮಾಧ್ಯಮಗಳಿಗೆ ಸಿಬಿಐ ನಿರ್ದೇಶಕರ ಪ್ರತಿಕ್ರಿಯೆ ಸೋರಿಕೆಯಾಗಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಿಡಿಕಾರಿದ್ದಾರೆ.

ಕೇಂದ್ರ ವಿಚಕ್ಷಣ ದಳದ(ಸಿವಿಸಿ) ತನಿಖಾ ವರದಿಗೆ ಅಲೋಕ್  ವರ್ಮಾ ತಡವಾಗಿ ಪ್ರತಿಕ್ರಿಯೆ ನೀಡಿದ್ದರಿಂದ ಅರ್ಜಿ ವಿಚಾರಣೆಯನ್ನು ಸೋಮವಾರದ ಬದಲಿಗೆ ಮಂಗಳವಾರ ನಡೆಸಲು ನ್ಯಾಯಪೀಠ ನಿರ್ಧರಿಸಿತ್ತು. ಅದರಂತೆ ಸುಪ್ರೀಂಕೋರ್ಟ್​ಗೆ ಮುಚ್ಚಿದ ಲಕೋಟೆಯಲ್ಲಿ ವರ್ವ ಪ್ರತಿಕ್ರಿಯೆ ನೀಡಿದ್ದರೂ, ಮಾಧ್ಯಮಗಳಿಗೆ ಅದರ ಬಗ್ಗೆ ಮಾಹಿತಿ ಸಿಕ್ಕಿದೆ.

ಇನ್ನೊಂದೆಡೆ ಕೇಂದ್ರ ಸಚಿವ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಸರಣಿ ಆರೋಪ ಮಾಡಿರುವ ಸಿಬಿಐ ಜಂಟಿ ನಿರ್ದೇಶಕ ಎಮ್​ಕೆ.ಸಿನ್ಹಾ ಸಲ್ಲಿಸಿದ್ದ ಅರ್ಜಿಯ ವಿವರ ಕೂಡ ಮಾಧ್ಯಮಗಳಿಗೆ ಸಿಕ್ಕಿದೆ.

ಇವೆಲ್ಲದರಿಂದ ಕೋಪಗೊಂಡಿರುವ ಸಿಜೆಐ ಗೊಗೊಯ್, ಮಂಗಳವಾರ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಸ್ಪಷ್ಟನೆ ನೀಡಲು ಹಿರಿಯ ವಕೀಲರು ತಡಕಾಡಿದ ಹಿನ್ನೆಲೆ ವಿಚಾರಣೆಯನ್ನು ನ.29ಕ್ಕೆ ಮುಂದೂಡಿದರು. ಮಾಹಿತಿ ಸೋರಿಕೆ ಕುರಿತ ವಿವರಣೆಯ ಬಳಿಕವೇ ಮುಂದಿನ ವಿಚಾರಣೆ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ನೀವ್ಯಾರೂ ವಿಚಾರಣೆಗೆ ಅರ್ಹರಲ್ಲ

ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಕುರಿತು ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರಿಗೆ ಮಾಧ್ಯಮಗಳ ವರದಿ ಪ್ರತಿಯನ್ನು ಹಸ್ತಾಂತರಿಸಿದ ಸಿಜೆಐ, ‘ನೀವು ಅಲೋಕ್ ವರ್ವ ಅವರ ನ್ಯಾಯವಾದಿ ಎಂದು ಈ ಪ್ರತಿ ನೀಡುತ್ತಿಲ್ಲ. ಈ ಕೋರ್ಟ್​ನ ಹಿರಿಯ ನ್ಯಾಯವಾದಿ ಎಂದು ಕೊಡುತ್ತಿದ್ದೇನೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಘನತೆ ರಕ್ಷಿಸಲು ನಾವು ಹೆಣಗಾಡುತ್ತಿದ್ದೇವೆ. ಎಲ್ಲ ಮಾಹಿತಿಗಳನ್ನು ಗೌಪ್ಯವಾಗಿ ಇರಿಸಲಾಗಿದೆ. ಆದರೆ ಅರ್ಜಿದಾರರು ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ. ಕೋರ್ಟ್ ಪ್ರಯತ್ನಕ್ಕೆ ಬೆಲೆ ಇಲ್ಲದಂತಾಗಿದೆ. ನೀವ್ಯಾರೂ ವಿಚಾರಣೆಗೆ ಅರ್ಹರಿಲ್ಲ ’ ಎಂದು ಬೇಸರ ಹೊರಹಾಕಿದ್ದಾರೆ.

ಬಾಯಿಗೆ ಬಂದಂತೆ ಹೇಳುವ ವೇದಿಕೆಯಲ್ಲ!

ಕೇಂದ್ರ ಸಚಿವ, ಭದ್ರತಾ ಸಲಹೆಗಾರ ಹಾಗೂ ಅಧಿಕಾರಿಗಳ ವಿರುದ್ಧ ವಿವಾದಿತ ಅಂಶಗಳನ್ನು ಉಲ್ಲೇಖಿಸಿ ವರ್ಗಾವಣೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಿರುವ ಎಮ್​ಕೆ.ಸಿನ್ಹಾ ಕಾರ್ಯವೈಖರಿಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ‘ಗೌಪ್ಯತೆ ಕಾಪಾಡಿಕೊಳ್ಳಿ ಎಂದು ಸೂಚಿಸಲಾಗಿತ್ತು. ಆದರೆ ಎಲ್ಲ ಮಾಧ್ಯಮಗಳಿಗೆ ಪ್ರತಿಯನ್ನು ಹಂಚಿ ಬಂದಿದ್ದಾರೆ. ನಿಮಗೆ ಬಾಯಿಗೆ ಬಂದಿದ್ದನ್ನು ಹೇಳಲು ಈ ಕೋರ್ಟ್ ವೇದಿಕೆಯಲ್ಲ. ಈ ಸಂಸ್ಥೆಗೆ ಗೌರವ ಸಲ್ಲಿಸುವುದನ್ನು ಕಲಿಯಿರಿ. ಇಂತಹ ಪ್ರವೃತ್ತಿಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ’ ಎಂದು ಸಿಜೆಐ ಎಚ್ಚರಿಸಿದ್ದಾರೆ.

ಒಬ್ಬರ ಮೇಲೊಬ್ಬರ ಬೇಹುಗಾರಿಕೆ

‘ಸಿಬಿಐನಲ್ಲಿ ಉನ್ನತ ಅಧಿಕಾರಿಗಳು ಸೇರಿ ಎಲ್ಲರೂ ನಿರ್ವಹಿಸಬೇಕಾದ ಕರ್ತವ್ಯವನ್ನು ಬಿಟ್ಟು, ಒಬ್ಬರ ಮೇಲೊಬ್ಬರು ಬೇಹುಗಾರಿಕೆ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಏನಾಗುತ್ತಿದೆ? ಇದನ್ನು ಸರಿಪಡಿಸುವುದು ಹೇಗೆ? ಸಂಸ್ಥೆಯ ಗೌರವ ಕಾಪಾಡಿಕೊಳ್ಳುವ ಇರಾದೆಯಿಲ್ಲವೇ ’ ಎಂದು ಸಿಜೆಐ ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

ಸಚಿವರ ಮೇಲೇ ಆರೋಪ