ವಜ್ರೋದ್ಯಮಿ ನೀರವ್​ ಮೋದಿ ಅವರನ್ನು ತಕ್ಷಣವೇ ಬಂಧಿಸಲು ಇಂಟರ್​ಪೋಲ್​ಗೆ ಸಿಬಿಐ ಮನವಿ ಸಾಧ್ಯತೆ

ನವದೆಹಲಿ: ಇದೀಗ ಲಂಡನ್​ನಲ್ಲಿ ಕಾಣಿಸಿಕೊಂಡಿರುವ ವಂಚಕ ವಜ್ರೋದ್ಯಮಿ ನೀರವ್​ ಮೋದಿಯನ್ನು ತಕ್ಷಣವೇ ಬಂಧಿಸುವಂತೆ ಇಂಟರ್​ಪೋಲ್​ಗೆ ಸಿಬಿಐ ಅಧಿಕಾರಿಗಳು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಲಂಡನ್​ನಿಂದ ಬೇರೆ ರಾಷ್ಟ್ರಗಳಿಗೆ ಅವರು ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರ ಬಂಧನಕ್ಕೆ ಇಂಟರ್​ಪೋಲ್​ಗೆ ಮನವಿ ಮಾಡಿಕೊಳ್ಳಲಿರುವುದಾಗಿ ಹೇಳಲಾಗುತ್ತಿದೆ.

2018ರ ಆಗಸ್ಟ್​ನಲ್ಲೇ ಸಿಬಿಐ ಅಧಿಕಾರಿಗಳು ನೀರವ್​ ಮೋದಿ ಬ್ರಿಟನ್​ನಲ್ಲಿ ಇರುವುದಾಗಿಯೂ, ಆತ ಇರುವ ನಿಖರವಾದ ವಿಳಾಸದ ಮಾಹಿತಿ ತಮಗಿಲ್ಲವೆಂದು ಬ್ರಿಟನ್​ ಸರ್ಕಾರ ಮತ್ತು ಇಂಟರ್​ಪೋಲ್​ಗೆ ತಿಳಿಸಿತ್ತು. ನೀರವ್​ ಆಗಾಗ್ಗೆ ಯೂರೋಪ್​ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದು, ಭಾರತದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಕುರಿತು ವಕೀಲರೊಂದಿಗೆ ಚರ್ಚಿಸುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು.

ಇದೀಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಅವರು ಬ್ಯಾಂಕ್​ಗಳಿಗೆ ವಂಚಿಸಿರುವ ಬಗ್ಗೆ, ಕ್ರಿಮಿನಲ್​ ಪಿತೂರಿ ನಡೆಸಿರುವ ಬಗ್ಗೆ ಹಾಗೂ ಅಕ್ರಮ ನಗದು ವಹಿವಾಟು ನಡೆಸಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯ ಇವೆ. ಆದ್ದರಿಂದ ಮೊದಲಿಗೆ ಅವರನ್ನು ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಅವರ ಬಳಿಯಿದ್ದ ಭಾರತೀಯ ಪಾಸ್​ಪೋರ್ಟ್​ ಅನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ, ಸದ್ಯ ಅವರ ಬಳಿ ಇರುವ ದಾಖಲಾತಿಗಳನ್ನು ಬ್ರಿಟನ್​ ಅಧಿಕಾರಿಗಳು ವಶಕ್ಕೆ ಪಡೆಯಬೇಕು ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅವರ ಬಂಧನವಾಗುತ್ತಲೇ ಸಿಬಿಐ ಮತ್ತು ಇಡಿ ಅಧಿಕಾರಿಗಳು ಲಂಡನ್​ಗೆ ಒಂದು ತಂಡವನ್ನು ಕಳುಹಿಸಿ ಭಾರತಕ್ಕೆ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಬ್ರಿಟನ್​ ಸರ್ಕಾರಕ್ಕೆ ಸಹಕರಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)