ಮಧ್ಯಂತರ ಸಿಬಿಐ ನಿರ್ದೇಶಕ ನಾಗೇಶ್ವರ್‌ ರಾವ್‌ ನೀಡಿದ್ದ ವರ್ಗಾವಣೆ ಆದೇಶಗಳಿಗೆ ಅಲೋಕ್‌ ವರ್ಮಾ ತಡೆ

ನವದೆಹಲಿ: ಅಲೋಕ್ ವರ್ಮಾ ಅವರ ಕಡ್ಡಾಯ ರಜೆಯನ್ನು ರದ್ದುಗೊಳಿಸಿ ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದ ಬೆನ್ನಲ್ಲೇ ನಿನ್ನೆ ಕಚೇರಿಗೆ ಮರಳಿದ ಅಲೋಕ್‌ ವರ್ಮಾ ಅವರು ಈ ಹಿಂದಿನ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಿದ್ದಾರೆ.

ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಿದ ನಂತರ ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಎಂ. ನಾಗೇಶ್ವರ್ ರಾವ್ ಅವರು ನೀಡಿದ್ದ ಬಹುತೇಕ ವರ್ಗಾವಣೆ ಆದೇಶಗಳನ್ನು ಅಲೋಕ್‌ ವರ್ಮಾ ಅವರು ಹಿಂಪಡೆದಿದ್ದಾರೆ.

ಅಲೋಕ್‌ ವರ್ಮಾ ಅವರ ತಂಡದ ಸುಮಾರು 10ಕ್ಕೂ ಹೆಚ್ಚು ಮುಖ್ಯವಾಗಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಎ.ಕೆ. ಬಸ್ಸಿ, ಮನೀಷ್‌ ಕುಮಾರ್‌ ಸಿನ್ಹಾ ಮತ್ತು ಜಂಟಿ ನಿರ್ದೇಶಕ ನೀತಿ ಮತ್ತು ಭ್ರಷ್ಟಾಚಾರ ವಿರೋಧಿ ಇಲಾಖೆಯ ಉಸ್ತುವಾರಿ ಹೊತ್ತಿದ್ದ ಎ ಕೆ ಶರ್ಮಾ ಅವರನ್ನು ವರ್ಗಾಯಿಸಿ ಆದೇಶಿಸಿದ್ದರು.

ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದಿಂದ ಕಡ್ಡಾಯ ರಜೆ ಮೇರೆಗೆ ತೆರಳಿದ್ದ 3 ತಿಂಗಳ ಬಳಿಕ ಕೇಂದ್ರದ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಮತ್ತೆ ಸಿಬಿಐ ನಿರ್ದೇಶಕನನ್ನಾಗಿ ವರ್ಮಾರನ್ನು ನೇಮಿಸಿದ್ದು, ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರುವ ಉನ್ನತ ಮಟ್ಟದ ಆಯ್ಕೆ ಸಮಿತಿಯು ತನ್ನ ನಿರ್ಧಾರವನ್ನು ತಿಳಿಸುವವರೆಗೆ ವರ್ಮಾ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.

ಇನ್ನು ವರ್ಮಾರ ಅವಧಿಯು ಜ. 31ಕ್ಕೆ ಅಂತ್ಯಗೊಳ್ಳಲಿದೆ. (ಏಜೆನ್ಸೀಸ್)