ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋದ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ

ನವದೆಹಲಿ: ಕೇಂದ್ರ ಸರ್ಕಾರ ತಮ್ಮನ್ನು ರಜೆಯ ಮೇಲೆ ಕಳಿಸಿರುವ ಕ್ರಮವನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದಾರೆ.

ಸುಪ್ರೀಂಕೋರ್ಟ್​ ಅಲೋಕ್​ ವರ್ಮಾ ಅವರ ಅರ್ಜಿಯನ್ನು ಸ್ವೀಕರಿಸಿದ್ದು, ಅಕ್ಟೋಬರ್​ 26ರಂದು ವಿಚಾರಣೆ ನಡೆಸುವುದಾಗಿ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​ ಅವರ ನೇತೃತ್ವದ ಪೀಠ ಹೇಳಿದೆ.

ವರ್ಮಾ ಪರ ವಕೀಲ ಗೋಪಾಲ ಶಂಕರನಾರಾಯಣನ್​ ಅವರು ವಕಾಲತ್ತು ವಹಿಸಿದ್ದು, ಕೇಂದ್ರ ಸರ್ಕಾರ ಬುಧವಾರ ಬೆಳಗ್ಗೆ ತನ್ನ ಕಕ್ಷಿದಾರ ವರ್ಮಾ ಅವರಿಗೆ ಹಾಗೂ ವಿಶೇಷ ನಿರ್ದೇಶಕ ರಾಕೇಶ್​ ಅಸ್ಥಾನ​ ಅವರಿಗೆ ರಜೆಯ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ ಹೇಳಿದೆ. ವರ್ಮಾ ಇನ್ನೂ ಎರಡು ತಿಂಗಳು ತಮ್ಮ ಅಧಿಕಾರ ಅವಧಿಯನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಅಧಿಕೃತವಾಗಿ ತೆಗೆಯಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ.

ಸಿಬಿಐ ನಿರ್ದೇಶಕರಾದ ಅಲೋಕ್​ ವರ್ಮಾ ಹಾಗೂ ರಾಕೇಶ್​ ಅಸ್ಥಾನ ಅವರ ಆಂತರಿಕ ಕಚ್ಚಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ಮುಂಜಾನೆ ಅವರಿಬ್ಬರನ್ನೂ ರಜೆಯ ಮೇಲೆ ಕಳಿಸಿ ಎಂ.ನಾಗೇಶ್ವರ್ ರಾವ್​ ಅವರನ್ನು ಸಿಬಿಐನ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ತಕ್ಷಣ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಅಲ್ಲದೆ, ಅಲೋಕ್​ ವರ್ಮಾ ಮತ್ತು ರಾಕೇಶ್​ ಅಸ್ಥಾನ​ ಇವರಿಬ್ಬರೂ ತಮ್ಮ ಎಲ್ಲ ಅಧಿಕಾರಿಗಳನ್ನೂ ಕಳೆದುಕೊಂಡಿದ್ದಾಗಿ ಮೂಲಗಳು ತಿಳಿಸಿದ್ದು, ಸಿಬಿಐ ಇತಿಹಾಸದಲ್ಲಿ ಇಂಥ ಪ್ರಕರಣ ಇದೇ ಮೊದಲ ಬಾರಿಗೆ ಆಗಿದೆ.