ಕರ್ತವ್ಯಕ್ಕೆ ಮರಳಿದ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ

ನವದೆಹಲಿ: ಸುಪ್ರೀಂಕೋರ್ಟ್​ನಿಂದ ಕ್ಲೀನ್​ಚಿಟ್​ ಪಡೆದ ಸಿಬಿಐ ಅಲೋಕ್​ವರ್ಮಾ ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸಿಬಿಐ ಆಂತರಿಕ ಕಿತ್ತಾಟ ಬಹಿರಂಗವಾದ ಬಳಿಕ ಅಲೋಕ್​ ವರ್ಮಾ ಅವರನ್ನು ಕೇಂದ್ರ ಸರ್ಕಾರ ರಜೆಯಲ್ಲಿ ಹೋಗುವಂತೆ ಕಳಿಸಿತ್ತು. ಅದನ್ನು ಪ್ರಶ್ನಿಸಿ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಕಾನೂನು ಬಾಹಿರವಾಗಿ ಅಲೋಕ್​ ವರ್ಮಾ ಅವರನ್ನು ರಜೆಗೆ ಕಳಿಸಿದೆ ಎಂದು ಹೇಳಿತ್ತು.

ಕೇಂದ್ರ ಸರ್ಕಾರದ ಆದೇಶದಂತೆ 77 ದಿನಗಳ ಕಾಲ ರಜೆಯಲ್ಲಿದ್ದ ಅಲೋಕ್​ ವರ್ಮಾ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲೋಕ್​ ವರ್ಮಾ ಅವರಿಗೆ ಯಾವುದೇ ನೀತಿ, ನಿಯಮಗಳನ್ನು ರೂಪಿಸುವ ಅಧಿಕಾರವಿರುವುದಿಲ್ಲ. ಆದರೆ, ಟ್ರಾನ್ಸ್​ಫರ್​, ಈಗಾಗಲೇ ನಡೆಯುತ್ತಿರುವ ತನಿಖೆ, ಹೊಸ ಪ್ರಕರಣಗಳು ಬಂದರೆ ಎಫ್​ಐಆರ್​ ದಾಖಲು ಮಾಡಲು ಸಂಪೂರ್ಣ ಅವಕಾಶವಿದೆ. ಅಂದಹಾಗೆ, ವರ್ಮಾ ಅವರು ಜನವರಿ 31 ರಂದು ನಿವೃತ್ತಿಯಾಗಲಿದ್ದಾರೆ.

ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಹಾಗೂ ರಾಕೇಶ್​ ಆಸ್ಥಾನಾ ಅವರನ್ನು ರಜೆಯಲ್ಲಿ ಕಳಿಸಿದ ಕೇಂದ್ರ ಸರ್ಕಾರ ಎಂ.ನಾಗೇಶ್ವರ್​ ರಾವ್​ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.