| ಹೇಮಮಾಲಾ ಬಿ. ಮೈಸೂರು
ಮಲೇಶ್ಯಾದ ಕೌಲಾಲಂಪುರ್ನಿಂದ ಸುಮಾರು ಹದಿಮೂರು ಕಿಲೋಮೀಟರ್ ದೂರದಲ್ಲಿ ‘ಬಟು ಕೇವ್ಸ್’ ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯವಿದೆ. ಇದು ‘ಲೈಮ್ ಸ್ಟೋನ್’ನಿಂದ (ಸುಣ್ಣದ ಕಲ್ಲು) ರಚನೆಯಾದ ಗುಹೆಯಾಗಿದ್ದು, ಸುಮಾರು ನಾಲ್ಕುನೂರು ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ. ಅಲ್ಲಿನ ಗೈಡ್ಗಳು ವಿವರಿಸಿದ ಪ್ರಕಾರ, ತುಂಬ ಹಿಂದೆಯೇ ಇದರ ಅಸ್ತಿತ್ವವಿದ್ದರೂ, ಮಲೇಶ್ಯಾದಲ್ಲಿ ಬ್ರಿಟಿಷರ ಅಧಿಕಾರವಾವಧಿಯಲ್ಲಿ (1878) ಈ ಗುಹೆಯು ವಿಶೇಷ ಪ್ರಾಮುಖ್ಯತೆ ಗಳಿಸಿತು.
ಆ ಕಾಲದಲ್ಲಿ ಭಾರತೀಯ ಮೂಲದ ಕೆಲವು ತಮಿಳು ವರ್ತಕರು, ಮಲೇಶ್ಯಾದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಲ್ಲಿ ಪ್ರಮುಖರಾಗಿದ್ದವರು ತಂಬುಸಾಮಿ ಪಿಳ್ಳೈ. ಅವರ ಶ್ರಮದ ಫಲವಾಗಿ ‘ಬಟು ಕೇವ್ಸ್’ನಲ್ಲಿ ಕಾರ್ತಿಕೇಯನ ದೇವಸ್ಥಾನ ಸ್ಥಾಪನೆಯಾಯಿತು. 2006ರಲ್ಲಿ 140 ಅಡಿ ಎತ್ತರದ ಮುರುಗನ್ ದೇವರ ಮೂರ್ತಿಯನ್ನು ಗುಹೆಯ ಬುಡದಲ್ಲಿ ಸ್ಥಾಪಿಸಿಲಾಗಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಸುಬ್ರಹ್ಮಣ್ಯ ದೇವರ ಪ್ರತಿಮೆ.
‘ಬಟು ಕೇವ್ಸ್’ ಗುಹೆಯು ರಸ್ತೆಯ ಮಟ್ಟದಿಂದ ನಾಲ್ಕುನೂರು ಅಡಿ ಎತ್ತರದಲ್ಲಿದೆ. 272 ಮೆಟ್ಟಿಲುಗಳನ್ನು ಏರಿದಾಗ ನೂರು ಅಡಿ ಎತ್ತರದ ವಿಶಾಲವಾದ ಜಾಗ ಗೋಚರಿಸುತ್ತದೆ. ಗುಹೆಯ ಒಳಗೆ ಕೆಲವು ದೇವರ ಮೂರ್ತಿಗಳಿವೆ. ತೀರ ಶಾಂತವಾದ ಹಾಗೂ ತಂಪಾದ ಪರಿಸರ. ಗುಹೆಯ ಅಂತ್ಯದಲ್ಲಿ ಮಾಡು ತೆರೆದಿದ್ದು, ಆಕಾಶ ಕಾಣಿಸುತ್ತದೆ ಹಾಗೂ ಗುಹೆಯ ಒಳಗೆ ಬೆಳಕು ಬೀಳುತ್ತದೆ.
ಒಟ್ಟಿನಲ್ಲಿ ಈ ಸುಂದರ ಪರಿಸರವು ಪ್ರವಾಸಿಗರಿಗೆ ಅದ್ಭುತವಾದ ದೈವಿಕ ಅನುಭವವನ್ನು ಕೊಡುತ್ತದೆ. ಬಟು ಕೇವ್ಸ್ನಲ್ಲಿ ವರ್ಷಕ್ಕೆ ಒಂದು ಬಾರಿ – ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ – ಥೈಪಸಮ್ ಎಂದು ಕರೆಯಲ್ಪಡುವ ಉತ್ಸವವನ್ನು ಬಹಳ ವಿಶಿಷ್ಟವಾಗಿ ನಡೆಸಲಾಗುತ್ತದೆ ಹಾಗೂ ಇದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಥೈಪಸಮ್ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ನಿಂಬೆಹಣ್ಣು, ತೆಂಗಿನಕಾಯಿ, ಇತ್ಯಾದಿಗಳನ್ನು ಕೊಕ್ಕೆಯಿಂದ ತಮ್ಮ ಚರ್ಮಕ್ಕೆ ಚುಚ್ಚಿಕೊಂಡು, ಕಾವಡಿಯನ್ನು ಹೊತ್ತುಕೊಂಡು, ಕಲಶವನ್ನು ಹಿಡಿದುಕೊಂಡು ಶ್ರೀ ಮುರುಗ ಹರೋಹರ ಎನ್ನುತ್ತ ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆಯುತ್ತಾರೆ.