ಅಕ್ಷಯಪಾತ್ರೆ ಕರುಣಿಸಿದ ಸೂರ್ಯ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಶೌನಕರ ಮಾತುಗಳನ್ನು ಕೇಳಿದ ಧರ್ಮರಾಜ ನುಡಿದ; ‘ಪೂಜ್ಯರೇ! ನಾನು ಖಂಡಿತವಾಗಿಯೂ ರಾಜ್ಯವನ್ನು ಕಳೆದುಕೊಂಡಿದ್ದೇನೆ ಎಂದು ದುಃಖಿಸುತ್ತಿಲ್ಲ. ನನ್ನೊಂದಿಗೆ ಬಂದ ನಿಮ್ಮಂತಹ ಜ್ಞಾನಿಗಳ ರಕ್ಷಣೆ, ಪೋಷಣೆ ನನ್ನಿಂದಾಗುತ್ತಿಲ್ಲವಲ್ಲ ಎಂದು ದುಃಖಿಸುತ್ತಿದ್ದೇನೆ. ಏಕೆಂದರೆ ಶಾಸ್ತ್ರದ ಮಾತುಗಳು ಹೀಗಿವೆ; ‘‘ಆರ್ತನಾಗಿ ಬಂದವನಿಗೆ ವಿಶ್ರಾಂತಿಗೆ ಸ್ಥಳ ನೀಡಬೇಕು, ತೃಷೆಯಿಂದ ಬಳಲಿ ಬಂದವನಿಗೆ ಕುಡಿಯಲು ನೀರನ್ನು ನೀಡಬೇಕು. ಹಸಿದು ಬಂದವನಿಗೆ ಅನ್ನ ನೀಡಬೇಕು. ಅನ್ನದಾನಕ್ಕೆ ಪಾತ್ರಾಪಾತ್ರತೆಯನ್ನು ವಿಚಾರ ಮಾಡುವಂತಿಲ್ಲ. ಹಸಿದು ಬಂದವನು ಯಾರೇ ಆಗಿದ್ದರೂ ಅವನಿಗೆ ಅನ್ನ ನೀಡಬೇಕು ಮತ್ತು ಪಕ್ಷಿ, ಪ್ರಾಣಿ ಮುಂತಾದ ಸಕಲ ಜೀವಿಗಳಿಗೂ ನಮ್ಮಿಂದಾಗುವ ಉಪಕಾರ ಮಾಡುವ ಮೂಲಕ ಎಲ್ಲರ ಕಷ್ಟವನ್ನು ಪರಿಹರಿಸಬೇಕು.’’ ಹೀಗಿರಬೇಕಾದರೆ ಜ್ಞಾನಿಗಳಾದ ನಿಮಗೆ ಯಾವುದೇ ಸೌಕರ್ಯವನ್ನು ಒದಗಿಸಲು ನನ್ನಿಂದಾಗುತ್ತಿಲ್ಲವಲ್ಲ! ಏನು ಮಾಡಲಿ?’

ಇಂತಹ ವಿಷಮಸ್ಥಿತಿಯಲ್ಲಿಯೂ ಧರ್ಮರಾಜ ಆಡುವ ಮಾತುಗಳನ್ನು ಕೇಳಿ ಶೌನಕರಿಗೆ ಆಶ್ಚರ್ಯವಾಯಿತು. ಶೌನಕರೆಂದರು, ‘ಸಜ್ಜನರು ಯಾವುದನ್ನು ಮಾಡಲು ನಾಚಿಕೆಪಡುತ್ತಾರೋ ದುರ್ಜನರು ಅದನ್ನು ಮಾಡಲು ಸಂತೋಷಪಡುತ್ತಾರೆ. ನಿನ್ನ ಜಾಗದಲ್ಲಿ ಬೇರೆಯವರಿದ್ದಿದ್ದರೆ ‘‘ಈ ಅರಣ್ಯದಲ್ಲಿ ನಮಗೆ ಯಾರ ಜವಾಬ್ದಾರಿಯೂ ಇಲ್ಲ’’ ಎಂದು ಆರಾಮವಾಗಿ ಕುಳಿತುಬಿಡುತ್ತಿದ್ದರು. ಆದರೆ ನೀನು ಇಂತಹ ಅರಣ್ಯದಲ್ಲಿಯೂ ಬಂದಿರುವ ಜ್ಞಾನಿಗಳಿಗೆ ಉಪಚರಿಸಲಾಗುತ್ತಿಲ್ಲ, ಅವರ ಸೇವೆ ಮಾಡಲಾಗುತ್ತಿಲ್ಲವಲ್ಲ ಎಂದು ದುಃಖಪಡುತ್ತಿರುವಿಯಲ್ಲ! ಇದೆಂಥ ಆಶ್ಚರ್ಯ. ನಿನ್ನ ಈ ನಡೆ ನಿಜಕ್ಕೂ ಪ್ರಶಂಸನೀಯವಾದದ್ದು.

ವೇದದ ಸಂದೇಶ ಹೀಗಿದೆ – ‘‘ಕರ್ಮತ್ಯಾಗ ಮಾಡು, ಕರ್ಮ ಮಾಡು’’ ಎಂದು. ಇದೇನು ವಿಚಿತ್ರ? ವೇದವೇ ವಿರುದ್ಧವಾಗಿ ಹೇಳುತ್ತಿದೆಯಲ್ಲ ಎನಿಸಬಹುದು. ಕರ್ಮತ್ಯಾಗ ಎಂದರೆ ಕರ್ತವ್ಯವನ್ನೇ ಬಿಡುವುದೆಂದರ್ಥವಲ್ಲ, ‘‘ನಾನು’’ ಮಾಡಿದೆ ಎಂಬ ಅಹಂಕಾರ ಮತ್ತು ಫಲಕಾಮನೆಯನ್ನು ಬಿಡಬೇಕು ಎಂದರ್ಥ. ನಮ್ಮ ಜೀವನದಲ್ಲಿ ಕರ್ತವ್ಯಾಚರಣೆಯನ್ನು ನಡೆಸುವುದು ಎಷ್ಟು ಮುಖ್ಯವೋ, ‘‘ನಾನು ಮಾಡಿದೆ’’ ಎಂಬ ಅಹಂಕಾರ ಮತ್ತು ಸ್ವಾರ್ಥತ್ಯಾಗಗಳೂ ಅಷ್ಟೇ ಮುಖ್ಯ. ಕರ್ತವ್ಯ, ಹಾಗೂ ತ್ಯಾಗಗಳ ಸಮನ್ವಯವೇ ಜೀವನದ ಪರಿಪೂರ್ಣತೆಯ ಸಂಕೇತ. ರಾಜನಿಗೆ ಪ್ರಜಾರಕ್ಷಣೆಯೇ ಮುಖ್ಯ ಕರ್ತವ್ಯ! ಅಂತಹ ಕರ್ತವ್ಯ ನನ್ನಿಂದ ಮಾಡಲಾಗುತ್ತಿಲ್ಲವಲ್ಲ ಎಂದು ದುಃಖಿಸಬೇಡ. ರಾಜ್ಯವನ್ನು ತೊರೆದು ಕಾಡಿಗೆ ಬಂದಾಗಲೂ ಎಲ್ಲರನ್ನೂ ಉಪಚರಿಸಬೇಕು, ಎಲ್ಲ ಜ್ಞಾನಿಗಳ ಸೇವೆ ಮಾಡಬೇಕು ಎಂಬ ನಿನ್ನ ಈ ಕರ್ತವ್ಯನಿಷ್ಠೆಗೆ ಮೆಚ್ಚಿ ಭಗವಂತ ಖಂಡಿತವಾಗಿಯೂ ವರ ನೀಡುತ್ತಾನೆ. ನಿನ್ನ

ಈ ಎಲ್ಲ ಕಷ್ಟಗಳ ಪರಿಹಾರಕ್ಕೆ ಒಂದು ಮಾರ್ಗವಿದೆ. ಸೂರ್ಯಾಂತರ್ಗತನಾದ ನಾರಾಯಣನನ್ನು ಭಕ್ತಿಯಿಂದ ಪ್ರಾರ್ಥಿಸು ನಿನ್ನ ಕಷ್ಟಗಳೆಲ್ಲ ಖಂಡಿತವಾಗಿಯೂ ಪರಿಹಾರವಾಗುತ್ತವೆ’ ಎಂದರು. ಧೌಮ್ಯಾಚಾರ್ಯರೂ ಶೌನಕರು ಹೇಳಿದಂತೆ ‘ನಿನ್ನ ಎಲ್ಲ ಕಷ್ಟಗಳ ಪರಿಹಾರಕ್ಕೆ ಸೂರ್ಯಾಂತರ್ಗತನಾದ ನಾರಾಯಣನ ಪ್ರಾರ್ಥನೆಯ ಹೊರತು ಬೇರಾವ ಉಪಾಯವೂ ಇಲ್ಲ’’ವೆಂದರು.

ಶೌನಕರ ಸಲಹೆಯಂತೆ ಧರ್ಮರಾಜ ಸೂರ್ಯಾಂತರ್ಗತನಾದ ನಾರಾಯಣನನ್ನು ಭಕ್ತಿಯಿಂದ ಪ್ರಾರ್ಥಿಸಿದನು. ಆಗ ಸಾಕ್ಷಾತ್ ಸೂರ್ಯದೇವನೇ ಪ್ರತ್ಯಕ್ಷನಾಗಿ ಪಾಂಡವರಿಗೆ ಅಕ್ಷಯಪಾತ್ರೆಯನ್ನು ದಯಪಾಲಿಸಿದನು. ಎಷ್ಟು ಜನ ಬಂದರೂ ಎಲ್ಲರ ಹಸಿವೆಯನ್ನು ನೀಗಿಸುವ ಸಾಮರ್ಥ್ಯ ಅಕ್ಷಯಪಾತ್ರೆಗಿತ್ತು. ಕೊನೆಯಲ್ಲಿ ದ್ರೌಪದಿಯ ಊಟ ಆಗುವವರೆಗೂ ಎಷ್ಟು ಜನ ಬಂದರೂ ಎಲ್ಲರಿಗೂ ಅಕ್ಷಯಪಾತ್ರೆಯಿಂದ ಎಲ್ಲ ವಿಧದ ಆಹಾರ ಪದಾರ್ಥಗಳು ದೊರೆಯುತ್ತಿದ್ದವು. ಪಾಂಡವರು ಅಕ್ಷಯಪಾತ್ರೆಯ ಸಹಾಯದಿಂದ ಕಾಡಿನಲ್ಲಿದ್ದ ಎಲ್ಲ ಋಷಿಮುನಿಗಳಿಗೂ ಮತ್ತು ಹಸಿದುಬಂದ ಎಲ್ಲ ವಿಧದ ಜನರಿಗೂ ಆತಿಥ್ಯವನ್ನು ನಡೆಸುತ್ತಿದ್ದರು. ಕಾಡಿನಲ್ಲಿದ್ದರೂ ಅರಮನೆಯಲ್ಲಿರುವಂತೆ ಸಂತೋಷದಿಂದ ಕಾಲ ಕಳೆದರು.

ಪಾಂಡವರನ್ನು ಅರಣ್ಯಕ್ಕೆ ಕಳುಹಿಸಿದ ಬಳಿಕ ಧೃತರಾಷ್ಟ್ರ ವಿದುರನನ್ನು ಕರೆಸಿ ಹೀಗೆಂದನು: ‘ವಿದುರ! ದ್ಯೂತದಲ್ಲಿ ಪಾಂಡವರು ತಮ್ಮ ರಾಜ್ಯವನ್ನೆಲ್ಲ ಕಳೆದುಕೊಂಡು ಅರಣ್ಯಕ್ಕೆ ಹೋಗಿದ್ದಾರೆ. ಇದರಿಂದ ದುಃಖಿತರಾದ ಪ್ರಜೆಗಳು ತಾವೂ ಪಾಂಡವರ ಜೊತೆಯಲ್ಲಿಯೇ ಹೋಗುವ ನಿರ್ಧಾರ ಮಾಡಿದ್ದಾರೆ. ಒಂದುವೇಳೆ ಪ್ರಜೆಗಳೆಲ್ಲರೂ ಒಗ್ಗಟ್ಟಾಗಿ ನಮ್ಮನ್ನು ವಿರೋಧಿಸಿದರೆ ನಮಗೂ ಗಂಡಾಂತರ ತಪ್ಪಿದ್ದಲ್ಲ. ಪ್ರಜೆಗಳ ಪ್ರೀತಿ ಸಂಪಾದಿಸದೆ ರಾಜ್ಯವನ್ನು ಮುನ್ನಡೆಸುವುದೂ ಅಸಾಧ್ಯವಾದ ಮಾತು. ಹಾಗಾಗಿ ನನಗೆ, ಯಾವುದು ಧರ್ಮ, ಯಾವುದು ಅಧರ್ಮ ಎಂದು ನಿಷ್ಪಕ್ಷಪಾತವಾಗಿ ವಿಚಾರ ಮಾಡುವ ನಿರ್ಮಲಬುದ್ಧಿಯುಳ್ಳ ನೀನು ಧರ್ಮದ ಮಾರ್ಗವನ್ನು ತಿಳಿಸು. ನಾವು ಏನು ಮಾಡುವುದರಿಂದ ಪ್ರಜೆಗಳಿಗೆ ನಮ್ಮ ಮೇಲೆ ವಿಶ್ವಾಸವುಂಟಾಗುತ್ತದೆ ಎಂಬುದನ್ನು ಅರುಹು.’