ಏನು ಜೀವನದರ್ಥ?

| ಡಾ. ನಾಗಪತಿ ಎಮ್ಮೆಗುಂಡಿ

ಈ ಜೀವನವೆಂಬ ನದಿಯ ಮೂಲಸ್ರೋತ ಅನಾದಿ. ಆದರೆ ಇದಕ್ಕೊಂದು ಕೊನೆ ಎಂಬುದಿದೆ. ಕಿರುತೊರೆ ಹಳ್ಳವೆನಿಸಿ, ಹಳ್ಳ ಹೊಳೆಯಾಗಿ, ಹೊಳೆ ನದಿಯಾಗಿ ಸಾಗರ ಸೇರಿ ತನ್ನ ಕೊನೆಯನ್ನು ಸಾಧಿಸುವುದು. ನಿಜವಾಗಿ ಅದೇ ಅಂತಿಮ ನೆಲೆ. ಈ ಜೀವನವೆಂಬ ನದಿಗೂ ಪರಮಾತ್ಮನೇ ಸಾಗರ. ಮೂಲ ನೆಲೆ, ಮೂಲ ಸೆಲೆ ಅವನೇ. ಬರುವಾಗ ಒಬ್ಬನೇ ಬಂದೆ, ಹೋಗುವಾಗಲೂ ನಾನೊಬ್ಬನೇ ಹೋಗುವೆ. ಮಧ್ಯದಲ್ಲಿ ಅನೇಕ ಬಂಧುಗಳು. ಕೆಲವರು ಮಿತ್ರರು, ಕೆಲವರು ಶತ್ರುಗಳು, ಮತ್ತೆ ಕೆಲವರು ಮಿತ್ರರೂ ಅಲ್ಲ, ಶತ್ರುಗಳು ಅಲ್ಲ.

ಮಿತ್ರರಲ್ಲಿ ಅನುರಾಗ, ಶತ್ರುಗಳಲ್ಲಿ ದ್ವೇಷ – ಇವು ನಮ್ಮ ಮುಂದಿನ ಜನ್ಮಕ್ಕೆ ಕಾರಣವಾಗುವ ದೋಷಗಳು. ಈ ದೋಷಗಳಿಂದಲೇ ನಾವು ಕೋಟ್ಯನುಕೋಟಿ ಜನ್ಮಗಳನ್ನು ಎತ್ತಿ ಬಂದೆವು. ಒಂದರ್ಥದಲ್ಲಿ ಮುಂದುವರಿದ ಜನನ ಚಕ್ರವೆಂಬ ವ್ಯವಹಾರಕ್ಕಾಗಿ ಒಂದಿಷ್ಟು ಸಾಲವನ್ನೂ, ಮತ್ತೊಂದಿಷ್ಟು ಠೇವಣಿಯನ್ನೂ ಇಡುತ್ತಾ ಬಂದ ಹಾಗಾಯಿತು. ನಮಗೆ ಮುಂದಿನ ಜನ್ಮ ಬೇಡವೆಂದರೆ ಅದಕ್ಕೆ ಕಾರಣವಾಗುವ ಸಾಲವೂ ಇರಬಾರದು. ಠೇವಣಿಯೂ ಇರಬಾರದು.

ಇಲ್ಲಿ ಸಾಲವೆಂದರೆ ಪಾಪ, ಠೇವಣಿಯೆಂದರೆ ಪುಣ್ಯ. ಈ ಪುಣ್ಯ-ಪಾಪಗಳ ಸಂಗ್ರಹವೇ ಮುಂದಿನ ಜನ್ಮಸಾಧನೆಗೆ ಕಾರಣ. ಪಾಪ-ಪುಣ್ಯಗಳ ಶೂನ್ಯ ಸ್ಥಿತಿಯೇ ಮೋಕ್ಷ. ಈ ಸ್ಥಿತಿಯಲ್ಲಿ ಠೇವಣಿ ಕಳೆದುಕೊಳ್ಳುವ ಭಯವಿರುವುದಿಲ್ಲ. ಸಾಲ ಕೊಟ್ಟವರ ಕಾಟವೂ ಇರುವುದಿಲ್ಲ. ಅಂದರೆ ಪುಣ್ಯ-ಪಾಪದ ಫಲಗಳೆರಡೂ ಅನುಭವಕ್ಕೆ ಬರಲು ಸಾಧ್ಯವಿಲ್ಲ.

ಸಂಸಾರಿಯೊಬ್ಬಾತ ಮಿತಿ ಮೀರಿ ಬಯಸದೆ ಇದ್ದುದರಲ್ಲೇ ಸಂತೃಪ್ತಿಯಿಂದ ಬದುಕನ್ನು ಸಾಗಿಸಲು ಸಮರ್ಥನೆಂದಾದರೆ ಆತ ವೇದಾಂತ ತತ್ತ್ವಕ್ಕೆ ಹತ್ತಿರದವ. ಅಥವಾ ಅವನಿಗೆ ಮುಂದೆ ಎಂದಾದರೂ ತತ್ವದ ಅರಿವು ಸುಲಭವಾಗಿಯೇ ದೊರಕುವುದು ಎನ್ನಲಡ್ಡಿಯಿಲ್ಲ. ನಮ್ಮಲ್ಲಿ ಗಗನವನ್ನು ಹಾರುವುದಕ್ಕಿಂತ ಮೊದಲು ಅಂಗಳವನ್ನು ಹಾರಬೇಕು ಎನ್ನುತ್ತಾರೆ. ಸಂಸಾರದಲ್ಲಿ ಎಳ್ಳಷ್ಟೂ ತೃಪ್ತಿಯಿಲ್ಲದವ ವೇದಾಂತಪರಿಭಾಷೆಯನ್ನು ಅನುದಿನವೂ ಅನುರಣಿಸಿದರೂ ಪ್ರಯೋಜನ ಮಾತ್ರ ಶೂನ್ಯ!