ರಾಗ ದ್ವೇಷಗಳ ಮುಕ್ತಿಯಿಂದಲೇ ಮನಃಶಾಂತಿ

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಮುಂದಿನ ಶ್ಲೋಕದಲ್ಲಿ ಸ್ಥಿತಪ್ರಜ್ಞನು ಅಥವಾ ಆ ಮಟ್ಟದಲ್ಲಿರುವವನು ಹೇಗೆ ಕೆಲಸ ಮಾಡುವನೆಂದು ಭಗವಂತ ತಿಳಿಸಿದ್ದಾನೆ. (ರಾಗದ್ವೇಷವಿಮುಕ್ತೈಸ್ತು…: 2-64) ಆದರೆ ರಾಗದ್ವೇಷಗಳಿಂದ (ಪ್ರಿಯ ವಸ್ತುವಿನಲ್ಲಿಯ ಆಸಕ್ತಿಯೇ ‘ರಾಗ’ ಮತ್ತು ಅಪ್ರಿಯ ವಸ್ತುವಿನಲ್ಲಿಯ ಅನಾಸಕ್ತಿಯೇ ‘ದ್ವೇಷ’) ಬಿಡುಗಡೆಯಾಗಿ, ತನ್ನ ವಶದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು (ಜೀವನಧಾರಣೆಗೆ ಅವಶ್ಯವಿದಷ್ಟು) ಅನುಭವಿಸುತ್ತಿರುವ (ವಿಷಯಗಳ ಮಧ್ಯದಲ್ಲಿ ಚಲಿಸುತ್ತಿದ್ದರೂ ಅವುಗಳನ್ನು ತಿರಸ್ಕರಿಸಿರುವ) ಸಂಯಮದ ಮನಸ್ಸುಳ್ಳ ಮನುಷ್ಯನು ಪ್ರಸನ್ನತೆಯನ್ನು ಹೊಂದುವನು. ತನ್ನ ಹತೋಟಿಯಲ್ಲಿಟ್ಟುಕೊಂಡ ಮನಸ್ಸಿನಿಂದ, ಹತೋಟಿಯಲ್ಲಿಟ್ಟುಕೊಂಡಿರುವ ಇಂದ್ರಿಯಗಳ ಮೂಲಕ ವಿಷಯವಸ್ತುಗಳನ್ನು ಅನುಭವಿಸುತ್ತಿದ್ದರೂ ಸಾಧಕ ಮನಸ್ಸಿನಲ್ಲಿ ಶಾಂತಿ ಪಡೆಯುವನು.

ಇಂದ್ರಿಯಗಳನ್ನು ಸ್ವತಂತ್ರವಾಗಿ ಬಿಟ್ಟಲ್ಲಿ ಅವು ರಾಗದ್ವೇಷಗಳಿಂದ ಪ್ರೇರಿತವಾಗುತ್ತವೆ. ಪ್ರತಿಯೊಬ್ಬನ ಮನಸ್ಸಿನಲ್ಲಿ ಅರಿಷಡ್ವರ್ಗಗಳ ಜೊತೆ ಬೇಕು-ಬೇಡ ಎನ್ನುವ ರಾಗದ್ವೇಷಗಳಿರುವುವು. ಎಚ್ಚರಿಕೆಯಿಂದ ಇರದಿದ್ದಲ್ಲಿ ಮನಸ್ಸಿನಲ್ಲಿರುವ ಈ ದ್ವೇಷಗುಣಗಳು ಇಂದ್ರಿಯಗಳ ಮೂಲಕ ಅನೇಕ ರೀತಿಯ ತೊಂದರೆಗಳನ್ನು ಕೊಡುವುವು. ಸ್ಥಿತಪ್ರಜ್ಞ ಅಥವಾ ಆ ಸ್ಥಿತಿಗೆ ಹತ್ತಿರವಿರುವ ಸಾಧಕನಿಗೆ ಸಮಾಧಿ ಹಾಗೂ ವ್ಯುತ್ಥಾನ(ಜಾಗ್ರತ) ಎಂಬ ಎರಡು ಅವಸ್ಥೆಗಳಿವೆ. ದಿನದಲ್ಲಿ ಮೂರು ನಾಲ್ಕು ಗಂಟೆಗಳಿಗಿಂತ ಹೆಚ್ಚಾಗಿ ಸಮಾಧಿಯಲ್ಲಿರಲು ಸಾಧ್ಯವಿಲ್ಲ. ಉಳಿದ ಸಮಯದಲ್ಲಿ ಪ್ರಾರಬ್ಧ ಶರೀರವಿದ್ದರೂ ಅವನ ಒಳಗಿನ ದೃಷ್ಟಿ ಬೇರೆಯೇ ಇರುವುದು. ಆಗವನ ಜೀವನ ಸಾಮಾನ್ಯರಂತೆಯೇ ಇರುವುದು. ಹೀಗಿದ್ದಾಗ ರಾಗದ್ವೇಷಗಳಿಂದ ಮುಕ್ತನಾದ ಅವನ ಸಾಧನೆಗೆ ಹಾಗೂ ಅವನಿಂದ ಉಪದೇಶದ ಮೂಲಕ ನಾಲ್ಕು ಜನರಿಗೆ ಪ್ರಯೋಜನವಾಗಲು ಅವನ ಶರೀರ ಕಾಪಾಡಲು ಅಹಾರ ಬೇಕು. ಇದಕ್ಕಾಗಿ ಸಾಧಕ ಮನಸ್ಸಿನ ಗಮನ ಹರಿಸಬೇಕು ಎಂದರೆ ಪಂಚಜ್ಞಾನೇಂದ್ರಿಯಗಳಿಂದ ಹೊರಗಿನ ವಿಷಯವಸ್ತುಗಳೊಡನೆ ಒಂದಲ್ಲ ಒಂದು ರೀತಿ ಬರುವ ಸಂಪರ್ಕವನ್ನು ಸಾಧಕನು ನಿರಾಕರಿಸಲಾಗದು. ಆದರೆ ಆ ಸಂರ್ಪಕ ಬಂದಾಗ, ಆದರ್ಶವ್ಯಕ್ತಿ ನಡತೆಯ ಮೂಲಕ ಹೇಗಿರಬೇಕೆಂಬುದನ್ನು ಪರಮಾತ್ಮ ಇಲ್ಲಿ ತಿಳಿಸುತ್ತಿದ್ದಾನೆ. ರಾಗ-ದ್ವೇಷಗಳಿಂದಿರುವ ಇಂದ್ರಿಯಗಳು ಸಾಧಕನಿಗೆ (ನಮಗೆ) ತೊಂದರೆ ಕೊಡುತ್ತವೆ. ಆದರೆ ಆ ಇಂದ್ರಿಯಗಳನ್ನು ಸಾಧಕನು ತನ್ನ ವಶದಲ್ಲಿಟ್ಟುಕೊಂಡು ರಾಗ-ದ್ವೇಷಗಳನ್ನು ಕಿತ್ತು ಬಿಸಾಡುವನು. ಜಿತೇಂದ್ರಿಯನಾದ ಅವನು ತನಗೆ ಬೇಕಷ್ಟು ಮಾತ್ರ ಹೊರಗಿನ ವಿಷಯವಸ್ತುಗಳ ಸಂಪರ್ಕಕ್ಕೆ ಬರುವುದರಿಂದ ತಾನು ಶಾಂತಿಯನ್ನು ಪಡೆದು ಇತರ ಜೀವಿಗಳಿಗೂ ಸಾಧನೆಯ ದಾರಿಯನ್ನು ತೋರಿಸುವನು.

ನಾಗರಹಾವೆಂದರೆ ಎಲ್ಲರಿಗೂ ಭಯ. ಕಾರಣವೆಂದರೆ ಭಯಂಕರ ವಿಷವಿರುವ ಅದು ಕಚ್ಚಿದರೆ ಸಾಯುತ್ತೇವೆ. ಆದ್ದರಿಂದ ಅದರಿಂದ ದೂರವಿರುತ್ತೇವೆ. ಬುದ್ಧಿವಂತನಾದ ಹಾವಾಡಿಗನಿಗೆ ಅದನ್ನು ಹಿಡಿಯುವ ರೀತಿ ಗೊತ್ತು. ಅವನು ಅದರ ಕುತ್ತಿಗೆಯನ್ನು ಹಿಡಿದಾಗ ಅದು ಬಾಯಿಬಿಡುವುದು. ಆಗವನು ಅದರ ವಿಷದ ಹಲ್ಲುಗಳನ್ನು ಕೀಳುವನು. ಆಗ ಹಾವು ನಿರುಪದ್ರವಿಯಾಗಿ ಯಾವ ರೀತಿಯಲ್ಲೂ ತೊಂದರೆ ಕೊಡದು. ಅವನು ಅದೇ ಹಾವನ್ನು ಪುಂಗಿ ಊದಿ ಆಟವಾಡಿಸಿ ಹಣ ಸಂಪಾದಿಸುವನು. ಪ್ರಾಣವನ್ನೇ ತೆಗೆಯುತ್ತಿದ್ದ ಹಾವನ್ನೇ ಪ್ರಾಣ ಉಳಿಸುವ, ಹಣಗಳಿಸುವ ಆಯುಧವನ್ನಾಗಿ ಮಾಡಿಕೊಂಡಿದ್ದಾನೆ ಹಾವಾಡಿಗ. ಇದೇ ರೀತಿ ನಾವು ಇದೇ ಶರೀರ, ಮನಸ್ಸು, ಇಂದ್ರಿಯಗಳನ್ನು ಕೆಡಿಸುತ್ತಿರುವ ರಾಗ-ದ್ವೇಷ, ಅರಿಷಡ್ವರ್ಗಗಳನ್ನು ಜಯಿಸಿದಾಗ (ಕಿತ್ತು ಬಿಸಾಡಿದಾಗ) ಇದೇ ಶರೀರ, ಮನಸ್ಸು, ಇಂದ್ರಿಯಗಳ ಮೂಲಕ ಮುಕ್ತಿಯನ್ನೇ ಪಡೆಯಬಹುದು. ಶರೀರವು ಸಾಧನೆಗಾಗಿ ಭಗವಂತ ಕೊಟ್ಟಿರುವ ಅದ್ಭುತ ಆಯುಧ. ಇದನ್ನು ಸಾಧನೆಗೆ ಚೆನ್ನಾಗಿ ಅನುಕೂಲವಾಗುವಂತೆ ಎಂದರೆ ಆತ್ಮಮೋಕ್ಷಕ್ಕಾಗಿ ಹಾಗೂ ಜಗತ್ತಿನ ಹಿತಕ್ಕಾಗಿ ಕಾಪಾಡಿಕೊಳ್ಳಬೇಕು.

ಕಠೋಪನಿಷತ್ತಿನಲ್ಲಿ ಈ ಶರೀರವನ್ನು ರಥಕ್ಕೆ ಹೋಲಿಸುವರು. ಇದರಲ್ಲಿರುವ ಇಂದ್ರಿಯಗಳೇ ಕುದುರೆಗಳು. ಮನಸ್ಸೇ ಲಗಾಮು. ಬುದ್ಧಿಯೇ ಸಾರಥಿ. ಸದೃಢ ರಥ, ಪಳಗಿದ ಕುದುರೆ, ಬಿಗಿಯಾದ ಲಗಾಮು, ಉತ್ತಮ ಸಾರಥಿ ಎಲ್ಲವೂ ಚೆನ್ನಾಗಿರುವಾಗ ರಥವನ್ನು ಬೇಕಾದ ದಾರಿಯಲ್ಲಿ ನಡೆಸಿ ಗುರಿ ತಲುಪಬಹುದು. ಸಾಕ್ಷಾತ್ ಶ್ರೀಕೃಷ್ಣಪರಮಾತ್ಮ ಉತ್ತಮ ಸಾರಥಿಯಾದ್ದರಿಂದಲೇ ಅರ್ಜುನ ಪ್ರಾರ್ಥಿಸಿ ಅವನನ್ನು ತನ್ನ ರಥಿಕನನ್ನಾಗಿ ಪಡೆದನು. ಶ್ರೀಕೃಷ್ಣನ ಸಾರಥ್ಯದಲ್ಲಿ ಅರ್ಜುನನು ಪ್ರಾಣಾಪಾಯದ ಗಂಡಾತರಗಳನ್ನು ಗೆದ್ದು ಅದ್ಭತ ವಿಜಯ ಸಾಧಿಸಿದನು. ದೇಹೇಂದ್ರಿಯ ಮನಸ್ಸುಗಳನ್ನು ಸರಿಯಾದ ರೀತಿಯಲ್ಲಿ ಪಳಗಿಸುವುದರಿಂದ ಅದ್ಭುತ ಫಲಗಳನ್ನು ಪಡೆಯಬಹುದು. ಇಲ್ಲವಾದಲ್ಲಿ ಅವು ನಮ್ಮನ್ನು ಹಾಳುಗೈಯ್ಯುವುದರೊಡನೆ ಇತರರನ್ನೂ ಹಾಳುಗೈಯುವುದು.

ಇಲ್ಲಿ ಭಗವಂತ ‘ಪ್ರಸಾದ’ ಶಬ್ದ ಬಳಸಿದ್ದಾನೆ. ಪ್ರಸಾದವೆಂದರೆ ಮನಸಿನ ಶಾಂತಿ. ಒಮ್ಮೆ ಕೆಲವು ಭಕ್ತರು ರಮಣಮಹರ್ಷಿಗಳಲ್ಲಿಗೆ ಹೋಗಿಬಂದಿದ್ದರು. ಅವರು ಸ್ವಾಮಿ ತ್ಯಾಗೀಶಾನಂದರ ಬಳಿಗೆ ಬಂದು ವಿಭೂತಿ, ಕಲ್ಲುಸಕ್ಕರೆ ಕೊಟ್ಟರು. ಅಲ್ಲಿದ್ದ ಕೆಲವರು ಸ್ವೀಕರಿಸಿದರು, ಸ್ವಾಮಿ ತ್ಯಾಗೀಶಾನಂದರು ಬೇಡವೆಂದರು. ಅಲ್ಲಿದ್ದ ಭಕ್ತರೊಬ್ಬರಿಗೆ ಇದು ವಿಚಿತ್ರವೆನಿಸಿತು. ಅವರು ಉಳಿದ ಭಕ್ತರು ಹೋದನಂತರ, ‘ಸ್ವಾಮೀಜಿ, ರಾಮಕೃಷ್ಣ ಆಶ್ರಮದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ನೈವೇದ್ಯ ಮಾಡಿದ್ದು ಮಾತ್ರ ಪ್ರಸಾದವೇ? ರಮಣಮಹರ್ಷಿಗಳ ಆಶ್ರಮದಿಂದ ಬಂದದ್ದು ಪ್ರಸಾದವಲ್ಲವೇ? ನೀವೇಕೆ ಸ್ವೀಕರಿಸಲಿಲ್ಲ?’ ಎಂದರು ನೊಂದ ಮನದಿಂದ. ಅದಕ್ಕೆ ಸ್ವಾಮಿಜಿಯವರು ಜೋರಾಗಿ ನಕ್ಕು ‘ನಿನಗೆ ಪ್ರಸಾದ ಶಬ್ದದ ಅರ್ಥಗೊತ್ತಿದೆಯೇ?’ ಎಂದರು. ಯುವಭಕ್ತ ‘ದೇವರಿಗೆ ತೋರಿಸಿ ಸ್ವೀಕರಿಸುವುದು’ ಎಂದರು. ಆಗ ಸ್ವಾಮೀಜಿ ‘ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ’ ಎಂದು ಗೀತೆಯ ಶ್ಲೋಕ ಹೇಳಿ ವಿವರಿಸುತ್ತಾ ‘ಪ್ರಸಾದವೆಂದರೆ ಪ್ರಸನ್ನತ್ವ, ಮನಸಿನ ಶಾಂತಿ’ ಎಂದರು. ಭಗವಂತನಿಗೆ ಅರ್ಪಿಸಿದ ವಸ್ತುವನ್ನು ನಾವು ಸ್ವೀಕರಿಸುವ ಮೊದಲು ಕಣ್ಣಿಗೊತ್ತಿಕೊಂಡರೆ ಭಗವಂತನ ನೆನಪಾಗುವುದು. ಇದರಿಂದ ನಮ್ಮ ಮನಸ್ಸಿಗೆ ಶಾಂತಿ ಬರುವುದು. ಈ ದೃಷ್ಟಿಯಿಂದ ಯವುದೋ ಒಂದು ರೀತಿಯಲ್ಲಿ ನಮ್ಮ ಮನಸಿಗೆ ಶಾಂತಿ ತರುವ ವಸ್ತುವಾದದ್ದರಿಂದ ಅದನ್ನು ಪ್ರಸಾದವೆನ್ನುತ್ತೇವೆ. ಸ್ವಾಮೀಜಿ ಮತ್ತೆ ಮುಂದುವರಿಸುತ್ತ, ‘“I have prasada in the primary sense, I don’t need it – ನನ್ನ ಮನಸ್ಸು ‘ಪ್ರಸಾದ’ ಎಂದರೆ ಈಗಾಗಲೇ ಪ್ರಸನ್ನತೆಯಿಂದಿದೆ, ನನಗದರ ಆವಶ್ಯಕತೆಯಿಲ್ಲ. ಆದರೆ ನೀವು ತಪ್ಪಾಗಿ ತಿಳಿದುಕೊಂಡಿರುವಿರಿ’ ಎಂದು ಹೊರಟಿದ್ದ ಭಕ್ತರನ್ನು ಕರೆಸಿ, ವಿಭೂತಿ ಧರಿಸಿ, ಕಲ್ಲುಸಕ್ಕರೆ ಪ್ರಸಾದ ಸ್ವೀಕರಿಸಿದರು.

(ಪ್ರಸಾದೇ ಸರ್ವದುಃಖಾನಾಂ…: 2-65) ಚಿತ್ತದ ಪ್ರಸನ್ನತೆ ಎಂದರೆ ಮನಸ್ಸಿನಲ್ಲಿ ಪ್ರಶಾಂತಿಯುಂಟಾದರೆ ಇವನ ಎಲ್ಲ ದುಃಖಗಳು ನಾಶವಾಗುವುವು. ಕಾರಣವೆಂದರೆ ಪ್ರಸನ್ನ ಮನಸ್ಸಿನವನ ಬುದ್ಧಿಯು (ಚಿತ್ತವು) ಬೇಗನೆ ಸ್ಥಿರವಾಗಿ, ಸ್ಥಿತಪ್ರಜ್ಞತ್ವ ಪಡೆಯುವುದು. ಮನಸ್ಸಿಗೆ ಶಾಂತಿ ಬಂದಾಗ ದುಃಖಗಳೆಲ್ಲವೂ ನಿವಾರಣೆಯಾಗುವುವು.

ಶಾಸ್ತ್ರಗಳು ಹೇಳಿರುವ ಮೂರು ದುಃಖಗಳನ್ನು ಈಗಾಗಲೇ ತಿಳಿದಿದ್ದೇವೆ. ಶರೀರಕ್ಕೆ ಸಂಬಂಧಿಸಿದ ರೋಗ, ರುಜಿನಗಳಿಂದ ಸಂಕಟವಾಗುವುದು ಆಧ್ಯಾತ್ಮಿಕ ದುಃಖ, ಇತರ ಜೀವಿಗಳಿಂದಾಗುವ ತೊಂದರೆಗಳು ಆಧಿಭೌತಿಕ. ಪ್ರಾಕೃತ ಶಕ್ತಿಗಳಿಂದಾಗುವ ಪ್ರವಾಹ, ಕ್ಷಾಮ ಇತ್ಯಾದಿ ತೊಂದರೆಗಳು ಆಧಿದೈವಿಕ ದುಃಖ. ಇವುಗಳ ಉಪಶಮನಕ್ಕಾಗಿ ‘ಶಾಂತಿಃ ಶಾಂತಿಃ ಶಾಂತಿಃ’ ಎಂದು ಮೂರು ಬಾರಿ ಹೇಳುತ್ತೇವೆ. ನಾವು ಗಮನಿಸಬೇಕಾದ್ದೆಂದರೆ, ಈ ದುಃಖಗಳ ಪರಿಣಾಮವಾಗಿ ಮನಸ್ಸು ಅಲ್ಲೋಲಕಲ್ಲೋಲವಾಗುವುದು. ಪರಿಣಾಮವಾಗಿ ಮನಸ್ಸು ವಿಚಲಿತವಾಗಿ ಅಶಾಂತಿ ಬರುವುದು. ಶಾಂತಿಯನ್ನು ಪಡೆಯಲು ಮನಸ್ಸನ್ನು ಹತೋಟಿಗೆ ತರಬೇಕು.

(ಸಂಗ್ರಹ: ಸುರೇಶ್ ಕುಮಾರ್)