ಪ್ರಧಾನಿ ಮೋದಿ ಧ್ಯಾನ ಮಾಡಿದ ಗುಹೆಯ ದಿನದ ಬಾಡಿಗೆ 990 ರೂ., ಲಭ್ಯವಿದೆ ಆಹಾರ ಮತ್ತು ದೂರವಾಣಿ ಸೌಲಭ್ಯ

ಉತ್ತರಾಖಂಡ: ಇಲ್ಲಿನ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನಸ್ಥರಾಗಿದ್ದ ಗುಹೆ ಸಾರ್ವಜನಿಕರಿಗೂ ಬಾಡಿಗೆಗೆ ಲಭ್ಯವಿದೆ. ಒಬ್ಬರು ಮಾತ್ರ ಹೋಗಬಹುದಾದ ಈ ಗುಹೆಗೆ ದಿನಕ್ಕೆ 990 ರೂ. ಬಾಡಿಗೆ ನಿಗದಿಯಾಗಿದೆ. ನೋಡಲು ಇದು ಗುಹೆಯಂತೆ ಕಂಡರೂ ಇಲ್ಲಿ ಎಲ್ಲ ಬಗೆಯ ಆಧುನಿಕ ಸೌಲಭ್ಯಗಳೂ ಲಭ್ಯ ಇವೆ.

ಬೇಕೆಂದಾಗ ಊಟ, ಸಹಾಯಕರನ್ನು ಕರೆಯಲು ಕಾಲಿಂಗ್​ ಬೆಲ್​ ಮತ್ತು ಯಾರನ್ನಾದರೂ ಸಂಪರ್ಕಿಸಬೇಕು ಎಂದರೆ ದೂರವಾಣಿ ಸೌಲಭ್ಯವೂ ಇಲ್ಲಿ ಸಿಗುತ್ತದೆ.

ಪ್ರಧಾನಿ ಮೋದಿ ಸಲಹೆಯಂತೆ ಗುಹೆ ನಿರ್ಮಾಣ
ಕೇದಾರನಾಥದ ಈ ಗುಹೆ ನೈಸರ್ಗಿಕವಾಗಿ ನಿರ್ಮಾಣವಾದದ್ದಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಇದನ್ನು ನಿರ್ಮಿಸಲಾಗಿದೆ. ಈ ಗುಹೆಯ ನಿರ್ಮಾಣದ ಹಿಂದೆ ರುದ್ರ ಧ್ಯಾನವನ್ನು ಜನಪ್ರಿಯಗೊಳಿಸುವ ಉದ್ದೇಶವಿದೆ. ಘರ್​ವಾಲ್​ ಮಂಡಲ್​ ವಿಕಾಸ ನಿಗಮ (ಜಿಎಂವಿಎನ್​) ಇದನ್ನು ನಿರ್ಮಿಸಿ, ನಿರ್ವಹಿಸುತ್ತಿದೆ.

ಈ ಗುಹೆಯಲ್ಲಿ ಧ್ಯಾನ ಮಾಡಲು ಬಯಸುವವರಿಗೆ ಆರಂಭದಲ್ಲಿ ದಿನಕ್ಕೆ 3 ಸಾವಿರ ರೂ. ಶುಲ್ಕ ನಿಗದಿಯಾಗಿತ್ತು. ಆದರೆ, ಹೆಚ್ಚಿನ ಜನರು ಬಾರದಿದ್ದರಿಂದ ಬಾಡಿಗೆಯನ್ನು ದಿನಕ್ಕೆ 990 ರೂ.ಗೆ ಇಳಿಸಲಾಯಿತು ಎಂದು ಜಿಎಂವಿಎನ್​ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಗುಹೆಯನ್ನು ಸಾರ್ವಜನಿಕರಿಗೆ ಬಾಡಿಗೆಗೆ ಮುಕ್ತಗೊಳಿಸುವ ವೇಳೆಗೆ ಚಳಿ ಹೆಚ್ಚಾಗತೊಡಗಿತ್ತು. ಜತೆಗೆ ಶುಲ್ಕ ಕೂಡ ಹೆಚ್ಚು ಎಂಬುದು ಗಮನಕ್ಕೆ ಬಂದಿತ್ತು. ಆದ್ದರಿಂದ ಶುಲ್ಕವನ್ನು ಕಡಿಮೆಗೊಳಿಸಲು ನಿರ್ಧರಿಸಲಾಯಿತು. ಜತೆಗೆ ಮೊದಲಿದ್ದ ಕಡ್ಡಾಯ 3 ದಿನಗಳಿಗೆ ಬಾಡಿಗೆ ತೆಗೆದುಕೊಳ್ಳಬೇಕು ಎಂಬ ನಿಯಮವನ್ನು ಸಡಿಲಿಸಲಾಯಿತು ಎಂದು ಜಿಎಂವಿಎನ್​ನ ಪ್ರಧಾನ ವ್ಯವಸ್ಥಾಪಕ ಬಿ.ಎಲ್​. ರಾಣಾ ಹೇಳಿದ್ದಾರೆ.

ತಿಂಡಿ, ಊಟ ಸಿಗುತ್ತೆ
ಗುಹೆಯ ಹೊರಭಾಗ ಕಲ್ಲಿನಿಂದ ನಿರ್ಮಾಣಗೊಂಡಿದೆ. ಮರದ ಬಾಗಿಲುಗಳನ್ನು ಅಳವಡಿಸಲಾಗಿದೆ. ವಿದ್ಯುತ್​ ಸಂಪರ್ಕ ನೀಡಲಾಗಿದ್ದು, ಗುಹೆಯ ಹೊರಭಾಗದಲ್ಲಿ ಶೌಚಗೃಹ ವ್ಯವಸ್ಥೆ ಇದೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಜತೆಗೆ ಧ್ಯಾನಕ್ಕೆ ಕೂತಿರುವ ವ್ಯಕ್ತಿಯ ಇಚ್ಛೆಯನುಸಾರ ಎರಡು ಬಾರಿ ಚಹಾ ಸರಬರಾಜು ಮಾಡಲಾಗುತ್ತದೆ. 24 ಗಂಟೆಯೂ ಸಹಾಯಕರು ಲಭ್ಯವಿರುತ್ತಾರೆ. ಒಳಗೆ ಒದಗಿಸಲಾಗಿರುವ ಕಾಲಿಂಗ್​ ಬೆಲ್​ ಒತ್ತಿ ಅವರ ಸಹಾಯವನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *