12 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಪೈಕಿ 29 ಹಳ್ಳಿಗಳಿಗೆ ಈ ಹಿಂದೆ ಕಾವೇರಿ ನೀರು ಪೂರೈಕೆ ಆರಂಭಿಸಿರುವ ಜಲಮಂಡಳಿ ಈಗ ಮತ್ತೆ 12 ಹಳ್ಳಿಗಳಿಗೆ ಪೈಪ್​ಲೈನ್ ಅಳವಡಿಸಿದೆ. ಈ ಮೂಲಕ ಒಟ್ಟು 41 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ಸಜ್ಜಾಗಿದೆ.

2018ರ ಮಾರ್ಚ್​ನಿಂದ 17 ಹಳ್ಳಿಗಳಿಗೆ ಜಲಮಂಡಳಿ ಕಾವೇರಿ ನೀರು ಪೂರೈಕೆ ಆರಂಭಿಸಿದ್ದು, ಮುಂದುವರಿದ ಭಾಗವಾಗಿ ನವೆಂಬರ್​ನಲ್ಲಿ 12 ಹಳ್ಳಿಗಳನ್ನು ಸೇರ್ಪಡೆಗೊಳಿಸಿತ್ತು. ಇದೀಗ ಮತ್ತೆ 12 ಹಳ್ಳಿಗಳಿಗೆ ಸಂರ್ಪಸುವಂತೆ ಪೈಪ್​ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿದೆ. 26 ತಿಂಗಳಲ್ಲಿ ಯೋಜನೆ ಮುಗಿಸುವ ಗಡುವು ಹಾಕಿಕೊಂಡಿದ್ದು, ಶೇ.70 ಕಾಮಗಾರಿ ಮುಕ್ತಾಯಗೊಂಡಿದೆ. ಶೀಘ್ರದಲ್ಲಿ ಎಲ್ಲ 110 ಹಳ್ಳಿಗಳಿಗೂ ಕಾವೇರಿ ಸಂರ್ಪಸುವ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1,886 ಕೋಟಿ ರೂ. ಯೋಜನೆ: 1,886 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗುತ್ತಿದೆ. ಪೈಪ್​ಲೈನ್ ಅಳವಡಿಕೆ ಕಾರ್ಯಕ್ಕೆ 1,500 ಕೋಟಿ ರೂ. ಮತ್ತು 386 ಕೋಟಿ ರೂ.ಗಳನ್ನು ಲೆಕ್ಕಕ್ಕೆ ಸಿಗದ ನೀರನ್ನು ಮಿತಗೊಳಿಸುವ ಯೋಜನೆಗೆ ಬಳಸಲಾಗುತ್ತಿದೆ. ಈ ಹಿಂದೆ ಕೈಗೊಂಡಿದ್ದ ಸೋರಿಕೆ ತಡೆಗಟ್ಟುವ ಯೋಜನೆ ಮೂಲಕ 70 ದಶಲಕ್ಷಕ್ಕೂ ಹೆಚ್ಚು ಲೀಟರ್ ನೀರು ಉಳಿತಾಯ ಮಾಡಲಾಗಿದೆ. ಅದೇ ನೀರನ್ನು ಈ ಹಳ್ಳಿಗಳಿಗೆ ಪೂರೈಸಲಾಗುತ್ತಿದೆ.

ಈಗಲೂ ಹಲವು ಪ್ರದೇಶಗಳಲ್ಲಿ ಲೆಕ್ಕಕ್ಕೆ ಸಿಗದ ನೀರನ್ನು ಮಿತಗೊಳಿಸುವ ಯೋಜನೆ ಮುಂದುವರಿದಿದೆ. ಆ ಮೂಲಕ ಉಳಿತಾಯಗೊಳ್ಳುವ ನೀರನ್ನು ಹಂತಹಂತವಾಗಿ 110 ಹಳ್ಳಿಗಳಿಗೆ ಪೂರೈಸಲಾಗುತ್ತದೆ ಎಂದು ಹೇಳಿದ್ದಾರೆ.

12 ಹಳ್ಳಿಗಳಿಗೆ ನೀರು: ಚಿಕ್ಕಸಂದ್ರ, ಸಿಡೇದಹಳ್ಳಿ, ಅಂದ್ರಹಳ್ಳಿ, ಕರಿಯೋಬನಹಳ್ಳಿ, ಅರೇಹಳ್ಳಿ, ವಸಂತಪುರ, ಗಿಡ್ಡದಕೊನೇನಹಳ್ಳಿ, ನಾಗೊಂಡನಹಳ್ಳಿ, ಕಾಳೇನಅಗ್ರಹಾರ, ಜುನ್ನಸಂದ್ರ, ಕಸವನಹಳ್ಳಿ, ಅಂಬಲಿಪುರಗಳಿಗೆ ಕಾವೇರಿ ನೀರಿನ ಪೈಪ್​ಲೈನ್ ಅಳವಡಿಸಿದ್ದು, ಸಂಪರ್ಕ ಪಡೆಯಲು ಜಲಮಂಡಳಿ ಅರ್ಜಿ ಆಹ್ವಾನಿಸಿದೆ. ಈ ಹಿಂದೆ ಅಬ್ಬಿಗೆರೆ, ಮೇಡರಹಳ್ಳಿ, ಶೆಟ್ಟಿಹಳ್ಳಿ, ಹೆಮ್ಮಿಗೆಪುರ, ಉತ್ತರಹಳ್ಳಿ, ರಾಚೇನಹಳ್ಳಿ, ರಾಮಗೊಂಡನಹಳ್ಳಿ, ಎಲೇನಹಳ್ಳಿ, ದೊಡ್ಡಕಲ್ಲಸಂದ್ರ, ರಘುವನಹಳ್ಳಿ, ಗೊಲ್ಲಹಳ್ಳಿ, ತಿಪ್ಪಸಂದ್ರ, ಹೇರೋಹಳ್ಳಿ, ವಲ್ಲಭನಗರ, ಸೊನ್ನೇನಹಳ್ಳಿ, ಹೊರಮಾವು, ಸಿದ್ದಾಪುರ, ದಾಸರಹಳ್ಳಿ, ಚಳ್ಳಕೆರೆ, ಕೂಡ್ಲು, ನಾಗನಾಥಪುರ, ಪರಪ್ಪನ ಅಗ್ರಹಾರ, ಗಣಕಲ್ಲು, ಉತ್ತರಹಳ್ಳಿ, ತುಬರಹಳ್ಳಿ, ಸಿದ್ದಾಪುರ, ಅಟ್ಟೂರು, ಬೇಗೂರು, ಹರಳೂರುಗಳಿಗೆ ನೀರು ಪೂರೈಕೆ ಆರಂಭಿಸಲಾಗಿದೆ.

5 ಸಾವಿರ ಜನರಿಂದ ಶುಲ್ಕ ಪಾವತಿ…!

29 ಹಳ್ಳಿಗಳಿಗೆ ಈ ಹಿಂದೆಯೇ ಅರ್ಜಿ ಕರೆದಿದ್ದು, 6 ಸಾವಿರ ನಿವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 5 ಸಾವಿರ ನಿವಾಸಿಗಳು ಶುಲ್ಕ ಪಾವತಿಸಿ ನೀರಿನ ಸಂಪರ್ಕ ಪಡೆದಿದ್ದಾರೆ. ಒಂದೇ ಸಾಲಿನಲ್ಲಿ ಹಲವು ಮನೆಗಳು ಶುಲ್ಕ ಪಾವತಿಸಿದರೆ ಮಧ್ಯದ ಕೆಲ ಮನೆಗಳು ಪಾವತಿಸಿರುವುದಿಲ್ಲ. ಇದರಿಂದ ಮಧ್ಯದ ಮನೆಯನ್ನು ಬಿಟ್ಟು ಇನ್ನುಳಿದ ಮನೆಗೆ ಸಂಪರ್ಕ ಕಲ್ಪಿಸುವುದು ಹೇಗೆ ಎಂಬ ಸವಾಲು ಜಲಮಂಡಳಿಗೆ ಎದುರಾಗಿದೆ. ಇನ್ನು ಸಂಪರ್ಕ ಪಡೆಯುವ ಕುರಿತು ಸಾರ್ವಜನಿಕರು ನಿರಾಸಕ್ತಿ ತೋರಲು ಪ್ರೊರೇಟಾ ಕಾರಣವಾಗಿದೆ. ದುಬಾರಿ ಶುಲ್ಕವನ್ನು ಪಾವತಿಸಿ ನೀರು ಪಡೆಯುವುದು ಹೇಗೆ ಎಂಬ ಚಿಂತೆ ಸ್ಥಳೀಯರದ್ದಾಗಿದೆ. ಕುಡಿಯುವ ನೀರು ಅತ್ಯವಶ್ಯಕವಾಗಿರುವುದರಿಂದ ಶುಲ್ಕ ಪಾವತಿಸಿ ಕಾವೇರಿ ಸಂಪರ್ಕ ಪಡೆಯುವುದು ಸೂಕ್ತ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಆನ್​ಲೈನ್ ಮೂಲಕವೂ ಅವಕಾಶ

ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸ ಲಾಗಿದೆ. ಗ್ರಾಹಕರು ಲಾಗಿನ್ ಆಗುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್​ಸೈಟ್: http://www.bwssb.gov.in

Leave a Reply

Your email address will not be published. Required fields are marked *