More

  ಕಾವೇರಿ ನದಿ ಮಾಹಿತಿ ನೀಡುವ ಮ್ಯೂಸಿಯಂ

  ಬೆಂಗಳೂರು: ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ 800 ಕಿ.ಮೀ. ಸಂಚರಿಸಿ ಬಂಗಾಳ ಕೊಲ್ಲಿ ಸೇರುತ್ತದೆ. ಆದರೆ, ಕಾವೇರಿ ನದಿಯಲ್ಲಿ ವಾಸಿಸುವ ಜಲಚರಗಳು ಯಾವುದು?, ನದಿ ಒಳಗೆ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಯಾವ ಬಗೆಯ ಮಣ್ಣು, ಕಲ್ಲುಗಳಿವೆ, ಎಷ್ಟು ಪ್ರಮಾಣದ ಕೃಷಿಭೂಮಿ ಕಾವೇರಿಯನ್ನು ಅವಲಂಬಿಸಿದೆ, ಯಾವ ಪ್ರದೇಶಗಳಲ್ಲಿ ಆಣೆಕಟ್ಟೆಗಳಿವೆ… ಹೀಗೆ ಕಾವೇರಿ ನದಿ ಬಗೆಗಿನ ಸಂಪೂರ್ಣ ಮಾಹಿತಿ ಹೊಂದಿದ ಮ್ಯೂಸಿಯಂ ಅನ್ನು ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂಗಳ ಮಂಡಳಿ ಮೈಸೂರಿನಲ್ಲಿ ನಿರ್ವಿುಸುತ್ತಿದೆ.

  ವಿಜ್ಞಾನ ಮ್ಯೂಸಿಯಂಗಳ ಮಾಹಿತಿಯನ್ನು ಮಂಡಳಿ ಅಧಿಕಾರಿಗಳು 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ನಲ್ಲಿ ನೀಡುತ್ತಿದ್ದಾರೆ. ವಿಜ್ಞಾನ ಬಗೆಗಿನ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂಗಳ ಕೌನ್ಸಿಲ್ ದೇಶಾದ್ಯಂತ 48 ಮ್ಯೂಸಿಯಂಗಳನ್ನು ನಿರ್ವಿುಸಲು ಮುಂದಾಗಿದೆ. ಅದರ ಭಾಗವಾಗಿ ತುಮಕೂರು ಮತ್ತು ಮೈಸೂರಿನಲ್ಲೂ ಹೊಸ ಮ್ಯೂಸಿಯಂಗಳು ತಲೆಯೆತ್ತುತ್ತಿವೆ. ತುಮಕೂರಿನಲ್ಲಿ ಜಾಗ ನಿಗದಿ ಮಾಡಲಾಗಿದ್ದು, ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮೈಸೂರಿನಲ್ಲಿ ಈಗಾಗಲೇ ಮ್ಯೂಸಿಯಂ ನಿರ್ವಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.

  3ಡಿಯಲ್ಲಿ ಕಾವೇರಿ: ಮೈಸೂರಿನ ಎಕ್ಸಿಬಿಷನ್ ಸೆಂಟರ್ ಪ್ರದೇಶದಲ್ಲಿ ವಿಜ್ಞಾನ ಮ್ಯೂಸಿಯಂ ನಿರ್ವಿುಸಲಾಗಿದೆ. ಅದರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮ್ಯೂಸಿಯಂ

  ನಲ್ಲಿರುವಂತೆ ವಿಜ್ಞಾನಕ್ಕೆ ಸಂಬಂಧಿಸಿ ಎಲ್ಲ ಮಾಹಿತಿಯೂ ಇರಲಿದೆ. ಪ್ರಮುಖವಾಗಿ ಕಾವೇರಿ ನದಿ ಹುಟ್ಟಿ, ಬಂಗಾಳಕೊಲ್ಲಿಗೆ ಸೇರುವವರೆಗಿನ ನದಿಯಲ್ಲಿರುವ ಜಲಚರ, ಕಲ್ಲುಗಳು ಸೇರಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಅದೂ 3ಡಿ ಚಿತ್ರದ ಮೂಲಕ! ಅದರ ಜತೆಗೆ ಅನಿಮೇಷನ್ ಸಿನಿಮಾ ಮೂಲಕವೂ ಕಾವೇರಿ ಬಗೆಗಿನ ಮಾಹಿತಿಯನ್ನು ತೆರೆದಿಡಲಾಗುತ್ತಿದೆ.

  ಪ್ರಾಣಿ ದಾಳಿ ತಪ್ಪಿಸುವ ಲೇಸರ್: ಬೆಳೆಗಳ ಮೇಲೆ ದಾಳಿ ಮಾಡುವ ಪ್ರಾಣಿ ಗಳನ್ನು ಬೆದರಿಸಿ, ಬೆಳೆ ರಕ್ಷಿಸಲು ಲೇಸರ್ ತಂತ್ರಜ್ಞಾನವನ್ನು ತುಮಕೂರಿನ ಅರವಿಂದ ಇಂಟರ್​ನ್ಯಾಷನಲ್ ಶಾಲೆಯ ವಿದ್ಯಾರ್ಥಿ ರಂಜನ್ ಕಂಡು ಹಿಡಿದಿದ್ದಾನೆ. ಸ್ಮಾರ್ಟ್ ಇನೋವೇಶನ್ ಟೆಕ್ನೊ ಇಕೊ ಫಾರ್ವಿುಂಗ್ ವ್ಯವಸ್ಥೆ ರೂಪಿಸಿದ್ದು, ಅದರಂತೆ ಹೊಲದ ಒಂದು ಬದಿಯಲ್ಲಿ ಎತ್ತರಕ್ಕೆ ಲೇಸರ್ ಅಳವಡಿಸಬೇಕಿದೆ. ಅದಕ್ಕೆ ಸಂಪರ್ಕ ಹೊಂದಿದ ಸೆನ್ಸರ್​ಗಳನ್ನು ಬೇಲಿ ಬದಿ ಇಡಲಾಗುತ್ತದೆ. ಹೊಲಕ್ಕೆ ಯಾವುದಾದರೂ ಪ್ರಾಣಿ ಬಂದಾಗ ಲೇಸರ್ ಬೆಳಕು ಉರಿಯುತ್ತದೆ. ಅದಕ್ಕೆ ಮೋಟಾರು ಅಳವಡಿಸಿದ್ದು, 360 ಡಿಗ್ರಿಯಲ್ಲಿ ತಿರುಗುವ ವ್ಯವಸ್ಥೆ ಇರುತ್ತದೆ. ಅದರಿಂದ ಹೊಲದಲ್ಲಿ ಓಡಾಡುವ ಲೇಸರ್ ಬೆಳಕು ಕಂಡು ಪ್ರಾಣಿಗಳು ಹೆದರಿ ಓಡುತ್ತವೆ.

  ಹೊಗೆ, ಧೂಳಿನಿಂದ ರಕ್ಷಣೆ ನೀಡುವ ಹೆಲ್ಮೆಟ್

  ತೆಲಂಗಾಣದ ಚಂದನಾಪುರದ ಜಿಲ್ಲಾ ಪರಿಷತ್ ಪ್ರೌಢಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಹೊಗೆ, ಧೂಳಿನಿಂದ ರಕ್ಷಣೆ ನೀಡುವ ಹೆಲ್ಮೆಟ್ ಆವಿಷ್ಕರಿಸಿದ್ದು, ಜನಾಕರ್ಷಣೆಗೆ ಕಾರಣವಾಗಿದೆ. ಸೆನ್ಸರ್ ಆಧಾರಿತ ಹೆಲ್ಮೆಟ್ ಇದಾಗಿದ್ದು, ಸೆನ್ಸರ್ ಬಳಿ ಹೊಗೆ ಅಥವಾ ಧೂಳಿನ ಕಣಗಳು ಬಂದರೆ ಹೆಲ್ಮೆಟ್ ಮೇಲೆ ಅಳವಡಿಸಲಾದ ಫ್ಯಾನ್ ಸ್ವಯಂಚಾಲಿತ ತಿರುಗಲಾರಂಭಿಸುತ್ತದೆ. ಅದರಿಂದ ಹೊಗೆ, ಧೂಳು ಈ ಹೆಲ್ಮೆಟ್ ಧರಿಸಿದವರ ಭಾಧಿಸುವುದಿಲ್ಲ.

  ಹವಾ ನಿಯಂತ್ರಿತ ವಾಹನಗಳಲ್ಲಿ ಆಲ್ಕೋಹಾಲ್ ಸೆನ್ಸರ್

  ಹವಾನಿಯಂತ್ರಿತ ವಾಹನದ ಚಾಲಕ ಕುಡಿದು ಚಾಲನೆಗೆ ಮುಂದಾದರೆ ವಾಹನದ ಇಂಜಿನ್ ಏಕಾಏಕಿ ಆಫ್ ಆಗಿ ಸೈರನ್ ಬಾರಿಸುತ್ತದೆ. ಅದೇ ರೀತಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡರೆ ದ್ವಾರಗಳು ಸ್ವಯಂಚಾಲಿತವಾಗಿ ತೆರೆದುಕೊಂಡು ಪ್ರಯಾಣಿಕರು ಅಪಾಯದಿಂದ ಪಾರಾಗಬಹುದು. ಇದು, ಹುಳಿಯಾರಿನ ವಿದ್ಯಾವಾರಿಧಿ ಅಂತಾರಾಷ್ಟ್ರೀಯ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರ್.ಕೆ. ದರ್ಶಿನಿ ಕಂಡುಹಿಡಿದಿರುವ ‘ಥರ್ಮಲ್ ಸೆನ್ಸರ್’ ಮತ್ತು ‘ಆಲ್ಕೋಹಾಲ್ ಸೆನ್ಸರ್’ ಆಧಾರಿತ ತಂತ್ರಜ್ಞಾನದ ವಿವರ. ಹವಾನಿಯಂತ್ರಿತ ವಾಹನಗಳಿಗೆ ಈ ಸೆನ್ಸರ್​ಗಳನ್ನು ಅಳವಡಿಸಬೇಕಿದೆ. ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಲು ಮುಂದಾದರೆ, ಅದನ್ನು ಕಂಡುಹಿಡಿಯುವ ಆಲ್ಕೋಹಾಲ್ ಸೆನ್ಸರ್, ಇಂಜಿನ್ ಆಫ್ ಆಗುವಂತೆ ಮಾಡುತ್ತದೆ. ಜತೆಗೆ ಕೆಂಪು ದೀಪ ಆನ್ ಆಗಿ ವಾಹನದ ಸೈರನ್ ಬಾರಿಸುತ್ತದೆ. ಅದರಿಂದ ಕುಡಿದು ವಾಹನ ಚಾಲನೆ ಮಾಡಿ ಉಂಟಾಗಬಹುದಾದ ಅಪಘಾತವನ್ನು ತಡೆಯಬಹುದಾಗಿದೆ. ಅದೇ ರೀತಿ, ವಾಹನದಲ್ಲಿ ‘ಥರ್ಮಲ್ ಸೆನ್ಸರ್’ ಅಳವಡಿಸಿದರೆ, ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ವಾಹನದೊಳಗಿನ ಉಷ್ಣಾಂಶ 50 ಡಿಗ್ರಿ ತಲುಪಿದರೆ ಇಂಜಿನ್ ಆಫ್ ಆಗುತ್ತದೆ. ವಾಹನದಲ್ಲಿ ಅಳವಡಿಸಲಾದ ತುರ್ತು ನಿರ್ಗಮನ ದ್ವಾರಗಳು ತೆರೆದುಕೊಳ್ಳುತ್ತದೆ.

  ಚಕಿತಗೊಳಿಸುವ ಮಿಥ್ಯಾ ತಂತಿವಾದ್ಯ!

  ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು ಇನ್​ಫ್ರಾ ರೆಡ್ ಕಿರಣಗಳ ಮೂಲಕ ವಾದ್ಯ ನುಡಿಸುವ ಉಪಕರಣವನ್ನು ಆವಿಷ್ಕರಿಸಿದ್ದಾರೆ. ಕಿರಣಗಳ ಮೂಲಕ ‘ಸರಿಗಮಪದನಿ’ ಸ್ವರಗಳನ್ನು ನುಡಿಸಬಲ್ಲ ಈ ಸಾಧನಕ್ಕೆ ‘ಮಿಥ್ಯಾ ತಂತಿವಾದ್ಯ’ ಎಂದು ಹೆಸರಿಡಲಾಗಿದೆ. ಅದರಂತೆ ಪರಸ್ಪರ ಎದುರು ಬದುರಾಗುವಂತೆ ಮೇಲೆ ಮತ್ತು ಕೆಳಗೆ ಕೊಳವೆಗಳನ್ನು ತೂಗಿ ಬಿಡಲಾಗಿದೆ. ಕೊಳವೆಗಳ ನಡುವೆ ಇನ್​ಫ್ರಾ ರೆಡ್ ಕಿರಣಗಳು ಪಸರಿಸುವಂತೆ ಮಾಡಲಾಗಿದೆ. ಅಲ್ಲದೆ, ಆ ಕೊಳವೆಗಳಿಗೆ ಸೆನ್ಸರ್ ಅಳವಡಿಸಲಾಗಿದೆ. ಕೊಳವೆಗಳ ಮಧ್ಯದಲ್ಲಿ ಕೈಗಳನ್ನು ಇಟ್ಟಾಗ ಕಿರಣಗಳಿಗೆ ತಡೆಯುಂಟಾಗಿ ನಾದ ಹೊರಹೊಮ್ಮುತ್ತದೆ.

  ಗಿರೀಶ್ ಗರಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts