More

    ಹುರುಳಿಕಾಳು ಹುರಿದು ಕಾವೇರಿ ಹೋರಾಟ: ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆಯಿಂದ ಪ್ರತಿಭಟನೆ

    ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಆದೇಶ ಖಂಡಿಸಿ ನೇಗಿಲಯೋಗಿ ಸಮಾಜಸೇವಾ ಸಂಸ್ಥೆಯ ಪದಾಧಿಕಾರಿಗಳು ಮತ್ತು ರೈತಪರ ಹೋರಾಟಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
    ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯ 61ನೇ ದಿನ ಭಾಗವಹಿಸಿದರು. ಅವೈಜ್ಞಾನಿಕ ಆದೇಶ ನೀಡುತ್ತಿರುವ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹುರುಳಿಕಾಳು ಹುರಿದು ತಿಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
    ಸಂಸ್ಥೆಯ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಕಾವೇರಿ ನದಿ ಪಾತ್ರದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ವಿಫಲವಾಗಿರುವುದು, ಇದರಿಂದಲೇ ನೂರಾರು ವರ್ಷಗಳಿಂದ ಸಮಸ್ಯೆ ಮುಂದುವರಿಯುತ್ತಿದೆ. ಸ್ಥಳೀಯ ರೈತರ ಅನುಕೂಲಕ್ಕಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ನಿರಂತರವಾಗಿ ಬಿಡುತ್ತಿರುವುದು ಖಂಡನೀಯ. 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ, ಸುಗ್ರೀವಾಜ್ಞೆ ತಂದು ಕಾವೇರಿ ನೀರನ್ನು ಬಿಡಲ್ಲ ಎಂದಿದ್ದನ್ನು ಸ್ಮರಿಸಿದರು.
    ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ತಂದು ಕಾವೇರಿ ನದಿ ನೀರನ್ನು ಬಿಡಿಸಿತ್ತು. ಆ ಹತ್ತು ವರ್ಷಗಳ ನಂತರ 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸರ್ಕಾರವು ನೀರು ಬಿಟ್ಟಿರಲಿಲ್ಲ. ನ್ಯಾಯಾಂಗ ನಿಂದನೆ ಕೇಸು ಹಾಕುವುದಾಗಿ ಹೇಳಿ ಮತ್ತೆ ನೀರನ್ನು ತಮಿಳುನಾಡು ಪಡೆಯಿತು. ಮತ್ತೆ ಹತ್ತು ವರ್ಷದ ನಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವಧಿಯಲ್ಲೂ ಹೀಗೆ ಆಯಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೂ ಮತ್ತೆ ತಮಿಳುನಾಡು ಕ್ಯಾತೆ ತೆಗೆದು ಸ್ಥಳೀಯ ರೈತರ ಬೆಳೆಗಳನ್ನು ನಾಶ ಮಾಡುತ್ತಿದೆ, ಸಂಕಷ್ಟದ ಸಂದರ್ಭದಲ್ಲೂ ಕೂಡ ನೀರನ್ನು ಬಿಡಿ ಎಂದಿರುವುದು ದುರಂತಕ್ಕೆ ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹಳ್ಳಿ ಹಳ್ಳಿಗಳಲ್ಲಿರುವ ಬಾವಿಗಳು ಮತ್ತು ಪಾಳುಬಿದ್ದ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು, ಮಳೆ ನೀರು ಕೂಯ್ಲು ಪದ್ಧತಿಯನ್ನು ಅನುಸರಿಸುವುದು. ಕೆರೆಗಳ ಒತ್ತುವರಿ ತೆರವುಗೊಳಿಸಿ ಹೂಳು ತೆಗೆಸುವುದು, ಕಾಲುವೆಗಳನ್ನು ದುರಸ್ತಿ ಮಾಡಿಸಿ, ನೀರು ನಿರಂತರವಾಗಿ ಕೆರೆ-ಕಟ್ಟೆಗಳಿಗೆ ತುಂಬುವಂತೆ ಮಾಡುವುದು ಎಂದು ಸಲಹೆ ನೀಡಿದರು.
    ಹಾಗೆಯೇ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಒಡ್ಡುಗಳನ್ನು ಮಾಡಿ, ನೀರನ್ನು ಇಂಗಿಸಬೇಕು, ಕಾವೇರಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವುದನ್ನು ತಪ್ಪಿಸಲು ಮೇಕೆದಾಟು ಯೋಜನೆ ಶೀಘ್ರವೇ ಆಗಬೇಕು. ಇದರಿಂದ ಸುಮಾರು 130 ಟಿಎಂಸಿ ನೀರನ್ನು ಸಂಗ್ರಹ ಮಾಡಿಕೊಳ್ಳಬಹುದು. ಹಾಗಾದರೆ ಮಾತ್ರ ರಾಜ್ಯದ ರೈತರ ಹಿತ ಕಾಯಬಹುದು. ಅಲ್ಲದೆ ಸಂಕಷ್ಟದ ಸಂದರ್ಭದಲ್ಲಿ ನೀರು ಉಳಿಸಿ, ಬಳಸಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ರೈತ ಹಿತರಕ್ಷಣಾ ಸಮಿತಿ, ಮಂಡ್ಯ ಜಲ ಹಿತ ರಕ್ಷಣಾ ಸಮಿತಿ ಹೆಸರಿನಡಿಯಲ್ಲಿ ನೇಗಿಲಯೋಗಿಯ ಸಂಪೂರ್ಣ ಬೆಂಬಲದೊಂದಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
    ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಬೋರಯ್ಯ, ಇಂಡುವಾಳು ಚಂದ್ರಶೇಖರ್, ಈ.ಬಸವರಾಜು, ಸಿ.ಟಿ.ಮಂಜುನಾಥ್, ಬನ್ನೂರು ನಾರಾಯಣ್, ನೇಗಿಲಯೋಗಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ನಾರಾಯಣ್, ಸುಜಾತಾ ಸಿದ್ದಯ್ಯ, ಸುಜಾತಾಕೃಷ್ಣ, ಎನ್.ವೈ.ಕೆ.ಬಸವರಾಜು, ಗಾಯಕ ರಾಮಣ್ಣ, ಮಲ್ಲೇಶ್ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts