ಕಾವೇರಿ ತೀರ್ಥೋದ್ಭವಕ್ಕೆ ಸಿದ್ಧತೆ ಮಾಡಿಕೊಳ್ಳಿ

ಭಾಗಮಂಡಲ: ತಲಕಾವೇರಿ ಕ್ಷೇತ್ರದಲ್ಲಿ ಅ.17ರಂದು ನಡೆಯುವ ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ಅಗತ್ಯಸಿದ್ಧತೆ ಮಾಡಿಕೊಳ್ಳುವಂತೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಭಾಗಮಂಡಲ ತ್ರಿವೇಣಿ ಸಂಗಮದ ಬಳಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾವೇರಿ ತುಲಾ ಸಂಕ್ರಮಣ ಜಾತ್ರಾ ಮಹೋತ್ಸವ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 17 ರಂದು ಸಂಜೆ 6.43 ಗಂಟೆಗೆ ನಡೆಯುವ ತೀರ್ಥೋ ದ್ಭವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ಬಂದೋಬಸ್ತ್ ಮಾಡಬೇಕು. ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿಯಿಂದ ತಲಕಾವೇರಿವರೆಗಿನ ಗುಂಡಿ ಬಿದ್ದಿರುವ ರಸ್ತೆ ಸರಿಪಡಿಸುವುದು, ರಸ್ತೆ ಬದಿ ಗಿಡ ಕಡಿಯುವುದು ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಕಟ್ಟುನಿಟ್ಟಿನ ಸೂಚಿಸಿದರು.

ಶ್ರದ್ಧಾಭಕ್ತಿಯಿಂದ ನಡೆಯುವ ಪವಿತ್ರ ತೀರ್ಥೋದ್ಭವದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು.ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ತಾತ್ಕಾಲಿಕ ಶೌಚಗೃಹ ನಿರ್ಮಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವತ್ತ ಗಮನಹರಿಸುವಂತೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ತಾತ್ಕಾಲಿಕ ಶೌಚಗೃಹ ನಿರ್ಮಿಸಲಾಗುವುದು. ಮುಂದಿನ ತುಲಾ ಸಂಕ್ರಮಣದ ವೇಳೆಗೆ ಹೈಟೆಕ್ ಶೌಚಗೃಹ ನಿರ್ಮಿಸಲಾಗುವುದು. ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನಿಯೋಜಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಸುಗಮ ರಸ್ತೆ, ವಿದ್ಯುತ್ ಸಂಪರ್ಕದ ಬಗ್ಗೆ ವಿಶೇಷ ಗಮನ ಹರಿಸಬೇಕೆಂದರು.

ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ, ತಲಕಾವೇರಿಗೆ ತೀರ್ಥಕ್ಕೆ ತೆರಳುವ ತೀರ್ಥ ರಥ ವಾಹನಗಳನ್ನು ತೀರ್ಥೋದ್ಭವ ಆದ 2 ಗಂಟೆ ನಂತರ ಬಿಡುವುದು ಒಳ್ಳೆಯದೆಂದು ಸಲಹೆ ನೀಡಿದರು. ದೇವಾಲಯ ಸಮಿತಿಯಿಂದ ಭಾಗಮಂಡಲದಿಂದ ತಲಕಾವೇರಿವರೆಗೆ ರಸ್ತೆ ಬದಿ ಅಳವಡಿಸುವ ಟ್ಯೂಬ್‌ಗಳಿಗೆ ಜನರೇಟರ್ ವ್ಯವಸ್ಥೆ ಮಾಡಲಾಗುವುದೆಂದರು.

ಭಾಗಮಂಡಲ-ತಲಕಾವೇರಿ ದೇವಾಲಯ ಪ್ರತಿಷ್ಠಾಪನಾ ಸಮಿತಿ ಮಾಜಿ ಕಾರ್ಯದರ್ಶಿ ಜಿ.ರಾಜೇಂದ್ರ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನು ಮುತ್ತಪ್ಪ, ಎಸ್ಪಿ ಡಾ.ಸುಮನ್ ಪನ್ನೇಕರ್, ಡಿವೈಎಸ್ಪಿ ಕೆ.ಎಸ್. ಸುಂದರ್‌ರಾಜ್, ಜಿಪಂ ಮಾಜಿ ಸದಸ್ಯ ಹೊಸೂರು ಸತೀಶ್ ಕುಮಾರ್ ಮಾತನಾಡಿದರು.

ಎಂಎಲ್ಸಿ ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯರಾದ ಕವಿತಾ ಪ್ರಭಾಕರ್, ಕುಮಾರ, ಎಡಿಸಿ ಎಂ.ಕೆ. ಜಗದೀಶ್, ಎಸಿ ಟಿ.ಜವರೇಗೌಡ ಇದ್ದರು.